ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಮೀಸಲು: ಸಿಎಂ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದ ನಿರ್ಮಲಾನಂದನಾಥ ಶ್ರೀ

| Updated By: KUSHAL V

Updated on: Mar 08, 2021 | 10:52 PM

ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಮೀಸಲಿಟ್ಟಿದ್ದಕ್ಕೆ ರಾಜ್ಯ ಸರ್ಕಾರವನ್ನು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥಶ್ರೀಗಳು ಅಭಿನಂದಿಸಿದ್ದಾರೆ.

ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಮೀಸಲು: ಸಿಎಂ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದ ನಿರ್ಮಲಾನಂದನಾಥ ಶ್ರೀ
Follow us on

ಬೆಂಗಳೂರು: ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಮೀಸಲಿಟ್ಟಿದ್ದಕ್ಕೆ ರಾಜ್ಯ ಸರ್ಕಾರವನ್ನು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥಶ್ರೀಗಳು ಅಭಿನಂದಿಸಿದ್ದಾರೆ. ನಿಗಮಕ್ಕೆ 500 ಕೋಟಿ ಮೀಸಲಿಟ್ಟ ನಿರ್ಧಾರ ಸ್ವಾಗತಿಸುತ್ತೇವೆ. ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸುವಂತೆ ಸಮುದಾಯದ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಶ್ರೀಮಠದ ಮನವಿಗೆ ಸ್ಪಂದಿಸಿರುವ ಸಿಎಂ ಯಡಿಯೂರಪ್ಪ ಒಕ್ಕಲಿಗ ಅಭಿವೃದ್ಧಿ ನಿಗಮ ರಚನೆ ಬಗ್ಗೆ ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ, ಸಿಎಂ ಯಡಿಯೂರಪ್ಪಗೆ ಅಭಿನಂದನೆಗಳು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಅನ್ನದಾತರೆನಿಸಿರುವ ಒಕ್ಕಲಿಗ ಸಮುದಾಯ ರಾಜ್ಯದ ಜನಸಂಖ್ಯೆಯಲ್ಲಿ ಶೇ. 17ರಷ್ಟಿದ್ದು ರಾಜ್ಯದ ಬೊಕ್ಕಸಕ್ಕೆ ಶೇ. 65ರಷ್ಟು ಆದಾಯವನ್ನು ಸಲ್ಲಿಸುವ ಮೂಲಕ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ತ್ವರಿತವಾಗಿ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಮಾಡಬೇಕು ಎಂದು ಸಮುದಾಯ ಮತ್ತು ಸಮುದಾಯದ ಹಲವು ಸಂಘ ಸಂಸ್ಥೆಗಳ ಪರವಾಗಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಶ್ರೀಮಠದ ಮನವಿಗೆ ಸ್ಪಂದಿಸಿರುವ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ .ಎಸ್. ಯಡಿಯೂರಪ್ಪನವರು ಈ ಸಾಲಿನ ಬಜೆಟ್ ನಲ್ಲಿ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸುವ ತೀರ್ಮಾನವನ್ನು ಕೈಗೊಂಡು 500 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದೆ. ಸರ್ಕಾರದ ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಮತ್ತು ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇವೆ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ ಬಜೆಟ್‌ನಲ್ಲಿ ಮಠಗಳಿಗೂ ಅನುದಾನ ಬಿಡುಗಡೆ
ಸಿಎಂ ಯಡಿಯೂರಪ್ಪ ಹಿಂದಿನ ಬಜೆಟ್​ಗಳಂತೆಯೇ ಮಠಗಳಿಗೆ ಅನುದಾನ ನೀಡುವುದು ಮುಂದುವರಿಸಿದ್ದಾರೆ. ಕಿತ್ತೂರು ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ಕಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ ₹ 10 ಕೋಟಿ ಅನುದಾನ ನೀಡಲಾಗಿದೆ. ವಿಜಯಪುರ ಜಿಲ್ಲೆ ಬಸನವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗೆ ₹ 5 ಕೋಟಿ ಒದಗಿಸಲಾಗಿದೆ.

ಕರ್ನಾಟಕದಿಂದ ಅಯೋಧ್ಯೆ ಯಾತ್ರೆಗೆ ತೆರಳುವವರಿಗೆ ಅನುಕೂಲ ಕಲ್ಪಿಸಲು ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣ ಮಾಡಲು ₹ 10 ಕೋಟಿ ಅನುದಾನ ನೀಡಲಾಗಿದೆ. ಮತ್ತು ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಶ್ರೀಗಳು ಹಾಗೂ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಸ್ಮೃತಿವನ ಸ್ಥಾಪನೆಗೆ 2 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಯಾವುದೇ ಇಲಾಖೆಗೂ ಅನುದಾನ ಕಡಿಮೆ ಮಾಡಿಲ್ಲ. ಕಳೆದ ಬಾರಿಗಿಂತ ಹೆಚ್ಚಿನ ಅನುದಾನ ನೀಡಿದ್ದೇನೆ. ಕೇಂದ್ರದಿಂದ ಹೆಚ್ಚಿನ ಅನುದಾನ ಬರುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಿಳಿಸಿದ್ರು. ಇನ್ನು ಲಿಂಗಾಯತ, ಒಕ್ಕಲಿಗ ಸಮಾಜಕ್ಕೆ ಹೆಚ್ಚು ಅನುದಾನ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಅಗತ್ಯವಿದ್ದರೆ ಉಳಿದ ಸಮುದಾಯಗಳಿಗೆ ಹೆಚ್ಚಿನ ಅನುದಾನ ನೀಡೋಣ ಎಂದು ಹೇಳಿದ್ರು.

ಬಜೆಟ್​ನಲ್ಲಿ ಶ್ರವಣಬೆಳಗೊಳ ಜೈನಮಠಕ್ಕೆ 50 ಕೋಟಿ ರೂ.
ಬಜೆಟ್​ನಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನಮಠಕ್ಕೆ 50 ಕೋಟಿ ಅನುದಾನ ನೀಡಿದ್ದಕ್ಕೆ ಸಿಎಂಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕಶ್ರೀಗಳಿಂದ ಧನ್ಯವಾದ ತಿಳಿಸಿದರು. ಕೊರೊನಾ ಸಂಕಷ್ಟದಿಂದಾಗಿ ಜೈನ ಕ್ಷೇತ್ರಗಳು ಸಂಕಷ್ಟದಲ್ಲಿವೆ. ಜೈನ ಕ್ಷೇತ್ರಗಳ ಸಮಸ್ಯೆ ಅರಿತು ಸಿಎಂ ಅನುದಾನ ನೀಡಿದ್ದಾರೆ. ಜೈನಮಠಕ್ಕೆ ಅನುದಾನ ನೀಡಿದ್ದಕ್ಕಾಗಿ ಸಿಎಂಗೆ ಅಭಿನಂದನೆಗಳು ಎಂದು ಶ್ರೀಗಳು ಮಾಧ್ಯಮ ಪ್ರಕಟಣೆ ಮುಖಾಂತರ ಸಿಎಂಗೆ ಅಭಿನಂದನೆ ಸಲ್ಲಿಸಿದರು.

‘ಜಿಲ್ಲೆಗೊಂದು ಗೋಶಾಲೆ ಘೋಷಿಸಿರುವುದು ಸಂತಸ ತಂದಿದೆ’
ಜಿಲ್ಲೆಗೊಂದು ಗೋಶಾಲೆ ಘೋಷಿಸಿರುವುದು ಸಂತಸ ತಂದಿದೆ ಎಂದು ರಾಜ್ಯ ಬಜೆಟ್ ಕುರಿತು ವಿಶ್ವಪ್ರಸನ್ನ ತೀರ್ಥ ಶ್ರೀಗಳ ಪ್ರತಿಕ್ರಿಯೆ ನೀಡಿದರು. ಗೋಹತ್ಯೆ ಕಾನೂನು ಜಾರಿಯಾಗಲು ಇದು ಅನುಕೂಲ. ಅಯೋಧ್ಯೆಯಲ್ಲಿ ಕರ್ನಾಟಕ ಭವನಕ್ಕೆ 10 ಕೋಟಿ ಅನುದಾನ ಕೊಟ್ಟಿದ್ದಾರೆ. ರಾಜ್ಯದ ಯಾತ್ರಿಕರಿಗೆ ಭವನದಿಂದ ಉಪಯೋಗವಾಗಲಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಹೇಳಿದರು.

ಇದನ್ನೂ ಓದಿ: Karnataka Budget 2021: ಅಲ್ಪಸಂಖ್ಯಾತರಿಗೆ 1500 ಕೋಟಿ, ಒಕ್ಕಲಿಗ, ವೀರಶೈವ, ಪರಿಶಿಷ್ಟರಿಗೆ ತಲಾ 500 ಕೋಟಿ ಮೀಸಲು

ಒಕ್ಕಲಿಗ ನಿಗಮಕ್ಕೆ 1,000 ಕೋಟಿ ರೂ. ಅನುದಾನ ಮೀಸಲಿಡಬೇಕು -ಸರ್ಕಾರದ ಮುಂದೆ 4 ಬೇಡಿಕೆಗಳನ್ನಿಟ್ಟ ಸಮುದಾಯ

Published On - 5:19 pm, Mon, 8 March 21