Maha Shivaratri 2021: ಶಿವನನ್ನು ಲಿಂಗರೂಪದಲ್ಲಿ ಯಾಕೆ ಆರಾಧಿಸುತ್ತಾರೆ ಗೊತ್ತೇ?; ಇಲ್ಲಿದೆ ಪುರಾಣ ಕಥೆ

ಶಿವನ ಹಣೆಯಲ್ಲಿರುವ ಗೋಲಾಕಾರದ ತಿಲಕವು ಜ್ಞಾನದ ಮೂರನೇ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಮೂರನೇ ಕಣ್ಣು ತೆರೆದಲ್ಲಿ, ಎದುರಿಗಿರುವವರನ್ನೇ ಇದು ಸುಟ್ಟು ಬೂದಿ ಮಾಡುತ್ತದೆ ಎಂದೇ ಹೇಳಲಾಗಿದೆ.

Maha Shivaratri 2021: ಶಿವನನ್ನು ಲಿಂಗರೂಪದಲ್ಲಿ ಯಾಕೆ ಆರಾಧಿಸುತ್ತಾರೆ ಗೊತ್ತೇ?; ಇಲ್ಲಿದೆ ಪುರಾಣ ಕಥೆ
ಲಿಂಗ ರೂಪದಲ್ಲಿ ಶಿವ
Follow us
ರಾಜೇಶ್ ದುಗ್ಗುಮನೆ
|

Updated on:Mar 10, 2021 | 8:55 PM

ಹಿಂದೂ ಧರ್ಮದಲ್ಲಿ ಶಿವನು ದೇವಾದಿದೇವ (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿದ್ದಾನೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ ಹೆಸರಿನಿಂದ ಶಿವನನ್ನು ಕರೆಯಲಾಗುತ್ತದೆ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವಜ್ರ ವೈಢೂರ್ಯಗಳಿಂದ ಭೂಷಿತನಾಗ ಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ. ಶಿವನ ತಾ೦ಡವ ನೃತ್ಯದಲ್ಲಡಗಿದೆ ಜಗತ್ತಿನ ಸೃಷ್ಟಿಯ ತತ್ವಗಳು ಶಿವನ ಈ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಕಂಡ ಭಕ್ತರು ಶಿವನಿಗೆ ಪ್ರತ್ಯೇಕವಾದ ಗುಡಿಗಳನ್ನು ಕಟ್ಟಿದ್ದಾರೆ.

ಶಿವನ ಪರಾಕ್ರಮ ಮತ್ತು ಲೀಲೆಗಳ ಬಗ್ಗೆ ಹಲವಾರು ಕಥೆಗಳಿದ್ದರೂ, ಶಿವನ ಎಂಟು ಶೃಂಗಾರ ಆಭರಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಇದು ಮಹತ್ವದ ರಹಸ್ಯಗಳನ್ನು ತನ್ನಲ್ಲಿ ಒಳಗೊಂಡಿದೆ. ತಲೆಯಲ್ಲಿರುವ ಅರ್ಧ ಚಂದ್ರ ಮತ್ತು ಬಿಚ್ಚಿದ ಕೂದಲಿನಲ್ಲಿ ಗಂಗೆಯ ಹರಿವು ಅವರ ಡಮರು, ಸೃಷ್ಟಿಯ ನಾದವಾಗಿದೆ. ಆಧ್ಯಾತ್ಮಿಕ ಮಹತ್ವಗಳನ್ನು ಈ ಆಭರಣಗಳು ಒಳಗೊಂಡಿದ್ದು, ಶಿವ ದೇವರ ಮೂರು ಆಭರಣಗಳು ಮೂರು ಶಕ್ತಿಗಳನ್ನು ಈ ಮೂರು ಆಭರಣಗಳು ಎತ್ತಿ ತೋರಿಸುತ್ತಿದ್ದು ಜ್ಞಾನ, ಬಯಕೆ ಮತ್ತು ಅನುಷ್ಟಾನ ಹೀಗೆ ಮೂರೂ ಶಕ್ತಿಗಳನ್ನು ಇದು ಪ್ರತಿನಿಧಿಸುತ್ತದೆ.

ಶಿವನ ಡಮರುಗದಲ್ಲಿದೆ ವೇದಗಳ ವಿಶೇಷತೆ ಡಮರು ಶಬ್ಧವನ್ನು ಪ್ರತಿನಿಧಿಸುತ್ತದೆ. ವೇದಗಳ ಶಬ್ಧವಾಗಿ ಇದನ್ನು ಪರಿಗಣಿಸಲಾಗಿದ್ದು, ಈ ಪವಿತ್ರ ಗ್ರಂಥಗಳಲ್ಲಿರುವ ಸಾರವು ದೇವರ ಮೂಲಕ ನಮ್ಮ ಜೀವನಕ್ಕೆ ಮಾರ್ಗದರ್ಶನ ಮಾಡುತ್ತದೆ.  ದೇವರ ಕೊರಳಲ್ಲಿ ಹಾರವಾಗಿರುವ ಸರ್ಪವು ಮಾನವನ ಅಹಂಕಾರದ ಪ್ರತೀಕವಾಗಿದೆ. ಶಿವನ ಕೈಯಲ್ಲಿರುವ ಜಪಮಾಲೆಯನ್ನು ರುದ್ರಾಕ್ಷಿ ಮಣಿಗಳಿಂದ ತಯಾರಿಸಲಾಗಿದೆ. ಇದು ಶುದ್ಧತೆಯ ಸಂಕೇತವಾಗಿದೆ. ಈ ಮಾಲೆಯು, ದೇವರ ಬಲಗೈಯಲ್ಲಿ ಇದ್ದು ಏಕಾಗ್ರತೆಯ ಸಂಕೇತವಾಗಿದೆ.

ದೇವರ ಶಿರಭಾಗ ದೇವರ ಶಿರವು ಪವಿತ್ರ ನದಿ ಗಂಗೆಯನ್ನು ಪ್ರತಿನಿಧಿಸಿದೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಾದುಹೋಗುವ ಬುದ್ಧಿವಂತಿಕೆ ಧರ್ಮಗ್ರಂಥಗಳ ಬೋಧನೆಯ ಹರಿವನ್ನು ಇದು ಸಂಕೇತಿಸಿದೆ. ಶಿವನ ತಲೆಯನ್ನು ಅಲಂಕರಿಸುವ ಚಂದ್ರ ಶಿವನು ಸಮಯಕ್ಕೆ ಅಧಿಪತಿಯಾಗಿದ್ದು ಆತ ಸಮಯಾತೀತ (ಅಂದರೆ ಸಮಯದ ಕಟ್ಟುಪಾಡಿಗೆ ಬಗ್ಗದವರು) ಎಂಬುದಾಗಿ ಚಂದ್ರನು ಸಂಕೇತಿಸಿದ್ದಾನೆ.

ಶಿವನ ಹಣೆಯಲ್ಲಿರುವ ಗೋಲಾಕಾರದ ತಿಲಕವು ಜ್ಞಾನದ ಮೂರನೇ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಮೂರನೇ ಕಣ್ಣು ತೆರೆದಲ್ಲಿ,  ಎದುರಿಗಿರುವವರನ್ನೇ ಇದು ಸುಟ್ಟು ಬೂದಿ ಮಾಡುತ್ತದೆ ಎಂದೇ ಹೇಳಲಾಗಿದೆ.

ದುಷ್ಟ ನಾಶ ಮತ್ತು ಅಜ್ಞಾನದ ಅಂತ್ಯವನ್ನು ಇದು ಸಂಕೇತಿಸುತ್ತದೆ. ಹುಲಿಯ ಚರ್ಮದ ಮೇಲೆ ಕುಳಿತಿರುವುದು ಶಿವನು ಸ್ವತಃ ಹುಲಿಯ ಚರ್ಮವನ್ನು ಧರಿಸಿದ್ದು ಅದೇ ಪ್ರಾಣಿಯ ಚರ್ಮದ ಮೇಲೆ ಕುಳಿತಿದ್ದಾರೆ ಇದು ಅವರು ಧೈರ್ಯಶಾಲಿ ಎಂಬುದನ್ನು ಸಂಕೇತಿಸುತ್ತದೆ.

ಶಿವನನ್ನು ಲಿಂಗರೂಪದಲ್ಲಿ ಆರಾಧಿಸೋದೇಕೆ? ಪರಮಶಕ್ತನಾದ ಶಿವನಲ್ಲಿ ಎಲ್ಲಾ ಸಮಸ್ಯಗಳಿಗೆ ಪರಿಹಾರ ಸಿಗುತ್ತದೆಂದು ನಂಬಿದ್ದ ದೇವದೇವತೆಗಳು ಯಾವುದೇ ತೊಂದರೆ ಎದುರಾದರೆ ಶಿವನ ಬಳಿ ಓಡುತ್ತಿದ್ದರು. ತನ್ನನ್ನು ನಂಬಿದವರನ್ನು ಎಂದಿಗೂ ಕೈಬಿಡಿದ ಶಿವನನ್ನು ಭಕ್ತರು ಆತನ ನಿಜ ರೂಪದಲ್ಲಲ್ಲದೇ ಶಿವಲಿಂಗದ ರೂಪದಲ್ಲಿಯೇ ಪೂಜಿಸುತ್ತಾರೆ ಮತ್ತು ಸಂತರ್ಪಣೆ ನೀಡುತ್ತಾರೆ. ಅದರಲ್ಲೂ ಶಿವಲಿಂಗದ ಬಣ್ಣ ಕಪ್ಪಗಿದ್ದು ವಿವಿಧ ಗಾತ್ರಗಳಲ್ಲಿರುತ್ತವೆ.

ಶಿವನನ್ನು ಲಿಂಗರೂಪದಲ್ಲಿ ಆರಾಧಿಸುವುದೇಕೆ ಎಂಬ ಮಾಹಿತಿ ನಿಮಗಿದೆಯೇ? ಇದು ಎಂದಿನಿಂದ ಅಸ್ತಿತ್ವಕ್ಕೆ ಬಂದಿತು? ಈ ಆಕೃತಿಗೆ ಏನು ಕಾರಣ ಎಂದು ಗೊತ್ತಿದೆಯೇ? ಭಕ್ತರ ಪಾಲಿಗೆ ಈ ಶಿವಲಿಂಗ ದಿವ್ಯತೆ, ನಂಬಿಕೆ, ಶಕ್ತಿ ಮತ್ತು ಅನಂತತೆಯ ಸಂಕೇತವಾಗಿದೆ. ಪ್ರತಿ ನಂಬಿಕೆಗೂ ಅದರದ್ದೇ ಆದ ಕಥೆ ಅಥವಾ ಸಾಕ್ಷಿಗಳಿರುತ್ತವೆ. ಅಂತೆಯೇ ಶಿವಲಿಂಗಕ್ಕೂ ಒಂದಕ್ಕಿಂತ ಹೆಚ್ಚು ಕಥೆಗಳಿವೆ.

ವಿವಿಧ ಪುರಾಣಗಳಲ್ಲಿ ವಿವಿಧ ರೀತಿಯಿಂದ ಬಿಂಬಿಸಲ್ಪಟ್ಟ ಕಥಾನಕ ಒಂದಕ್ಕಿಂತ ಒಂದು ಭಿನ್ನವೂ ಆಗಿದೆ. ಇದನ್ನು ಆರಾಧಿಸುವವರು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಸುವಾಗ ಕಥೆಯಲ್ಲಿ ಕೊಂಚ ಬದಲಾವಣೆಯಾಗಿರಲೂ ಸಾಧ್ಯ. ಆದರೆ ಧಾರ್ಮಿಕ ಪಂಡಿತರು ಬಲವಾಗಿ ನಂಬುವ ಎರಡು ಕಥೆಗಳು ಶಿವಲಿಂಗದ ಮಹತ್ವವನ್ನು ಸಾರುತ್ತವೆ.

ಮೊದಲ ಕಥೆ ಹೀಗಿದೆ: ಪುರಾತನ ಕಾಲದಲ್ಲಿ ಅಂದರೆ ಈ ಬ್ರಹ್ಮಾಂಡದ ಸೃಷ್ಟಿಯ ಕಾಲದಲ್ಲಿ ಸೃಷ್ಟಿಕರ್ತರಾದ ಬ್ರಹ್ಮ ಮತ್ತು ವಿಷ್ಣು ನಡುವೆ ತಮ್ಮಿಬ್ಬರಲ್ಲಿ ಬಲಾಢ್ಯರು ಯಾರು ಎಂಬ ವಿಷಯದ ಬಗ್ಗೆ ಚರ್ಚೆ ಏರ್ಪಟ್ಟಿತು. ಇವರಿಬ್ಬರ ನಡುವಣ ಕೋಳಿ ಜಗಳವನ್ನು ನೋಡಿದ ಶಿವ ಅವರೆದುರಿಗೆ ಒಂದು ಬೃಹದಾಕಾರದ ಕಂಬವನ್ನು ಸೃಷ್ಟಿಸಿದ. ಬೆಂಕಿಯ ಜ್ವಾಲೆ ಧಗಧಗಿಸುತ್ತಿದ್ದ ಆ ಕಂಭದ ತುದಿಗಳು ಎಲ್ಲಿವೆ ಎಂದು ಕಂಡುಹಿಡಿಯಲು ಇಬ್ಬರಿಗೂ ಆಜ್ಞಾಪಿಸಿದ.

ಕೂಡಲೇ ವಿಷ್ಣು ಒಂದು ಕಾಡುಹಂದಿಯ ರೂಪ ತಾಳಿ (ವರಾಹರೂಪ) ಕಂಭದ ಬುಡದಿಂದ ಪಾತಾಳದತ್ತ ನಡೆದರೆ ಬ್ರಹ್ಮ ಹಂಸವೊಂದರ ರೂಪ ತಾಳಿ ಆಗಸದತ್ತ ನೆಗೆದ. ಎಷ್ಟೋ ಕಾಲ ಎಡೆಬಿಡದೇ ಕೋಟ್ಯಂತರ ಮೈಲುಗಳ ದೂರವನ್ನು ಕ್ರಮಿಸಿದರೂ ತುದಿ ಅಥವಾ ಬುಡವನ್ನು ತಲುಪಲಾಗದೇ ಹತಾಶರಾಗಿ ಹಿಂದಿರುಗಿದರು. ಹಿಂದಿರುಗಿದ ಬಳಿಕ ಬ್ರಹ್ಮ ಸೋಲೊಪ್ಪಿಕೊಳ್ಳಲು ಸಿದ್ಧನಾಗದೇ ತಾನು ತುದಿಯನ್ನು ಕಂಡೆನೆಂದೂ ಅಲ್ಲಿ ಕೇತಕಿ ಎಂಬ ಹೂವಿತ್ತೆಂದೂ ತಿಳಿಸಿದ.

ಬ್ರಹ್ಮ ಹೇಳಿದ ಸುಳ್ಳನ್ನು ಕೇಳಿದಾಕ್ಷಣ ಬಿರಿದ ಬೆಂಕಿಯ ಕಂಭದ ಮೂಲಕ ಪ್ರಕಟನಾದ ಶಿವ ಅತ್ಯುಗ್ರ ಕೋಪ ತಾಳಿ ಬ್ರಹ್ಮನನ್ನು ಶಪಿಸಿದ. ಇನ್ನು ಮೇಲೆ ಯಾರೂ ಬ್ರಹ್ಮನನ್ನು ಪೂಜಿಸಕೂಡದೆಂದೂ ಬ್ರಹ್ಮ ವಿವರಿಸಿದ ಹೂವನ್ನು ಯಾವ ದೇವ ದೇವಿಯ ಪೂಜೆಗೂ ಉಪಯೋಗಿಸಕೂಡದೆಂದೂ ಶಾಪ ನೀಡಿದ. ಅಂತೆಯೇ ಇಂದಿಗೂ ಈ ಭೂಮಿಯಲ್ಲಿ ಬ್ರಹ್ಮನಿಗಾಗಿ ಯಾವುದೇ ದೇವಾಲಯವಿಲ್ಲ, ಕೇತಕಿ ಹೂವನ್ನು ಪೂಜೆಗೆ ಬಳಸುವುದಿಲ್ಲ. ಆ ಬಳಿಕ ಶಿವನ ಆ ಬೆಂಕಿಯ ಕಂಭದ ಹೃಸ್ವರೂಪವಾದ ಶಿವಲಿಂಗವನ್ನೇ ಶಿವನ ರೂಪವೆಂದು ತಿಳಿದು ಪೂಜಿಸಲು ಪ್ರಾರಂಭವಾಯಿತು. ಈ ಶಿವಲಿಂಗ ಶಕ್ತಿ, ಸತ್ಯ, ಆತ್ಮಾಭಿಮಾನ ಮತ್ತು ಗೌರವದ ಸಂಕೇತವಾಗಿದೆ.

ಎರಡನೆಯ ಕಥೆ ಹೀಗಿದೆ ಸಹಸ್ರಾರು ವರ್ಷಗಳ ಹಿಂದೆ ಶಿವನನ್ನು ಸಾಧುಗಳ ಗುಂಪೊಂದು ದಾರುಕವೆಂಬ ಅರಣ್ಯದಲ್ಲಿ ಅತ್ಯಧಿಕವಾಗಿ ಆರಾಧಿಸುತ್ತಿತ್ತು. ಇವರ ಭಕ್ತಿ ಮತ್ತು ನಂಬಿಕೆಗಳನ್ನು ಪರಿಶೀಲಿಸಲು ಒಮ್ಮೆ ಶಿವ ಓರ್ವ ಅವಧೂತ (ನಗ್ನ ಸನ್ಯಾಸಿ)ಯ ರೂಪ ಧರಿಸಿ ಸಾಧುಗಳ ಗುಂಪಿನ ಬಳಿ ಬಂದ. ಅವಧೂತನ ನಗ್ನರೂಪವನ್ನು ಕಂಡ ಸಾಧುಗಳ ಪತ್ನಿಯರಲ್ಲಿ ಕೆಲವರು ನಾಚಿಕೆಯಿಂದ ಕುಟೀರಗಳ ಒಳಗೋಡಿದರೆ ಅವಧೂತನ ಕಟ್ಟುಮಸ್ತಾದ ಶರೀರದಿಂದ ಮೋಹಗೊಂಡ ಕೆಲವರು ಆತನೆಡೆಗೆ ಧಾವಿಸಿದರು.

ಇದನ್ನು ಕಂಡ ಸಾಧುಗಳು ಕುಪಿತರಾಗಿ ಅವಧೂತನ ಪುರುಷಾಂಗ ಕಳಚಿ ಹೋಗಲಿ ಎಂದು ಶಾಪ ನೀಡಿದರು. ಅಂತೆಯೇ ಅವಧೂತನ ಶರೀರದಿಂದ ಬೇರ್ಪಟ್ಟ ಲಿಂಗ ಕೆಳಗೆ ಬೀಳುತ್ತಲೇ ಬೆಂಕಿ ಹತ್ತಿಕೊಂಡು ಶೀಘ್ರವೇ ತ್ರಿಲೋಕಗಳಲ್ಲಿ ಬೆಂಕಿಯನ್ನು ವ್ಯಾಪಿಸಿತು.

ಭೂಲೋಕ, ಪಾತಾಳ ಮತ್ತು ಸ್ವರ್ಗದಲ್ಲೆಲ್ಲಾ ಸಕಲವೂ ಬೆಂಕಿಯಿಂದ ಹೊತ್ತಿ ಉರಿಯಲು ಪ್ರಾರಂಭವಾಯಿತು. ಕೂಡಲೇ ಇದರಿಂದ ಪಾರಾಗಲು ಸಾಧುಗಳು ಮತ್ತು ಎಲ್ಲಾ ದೇವತೆಗಳು ಬ್ರಹ್ಮನಲ್ಲಿ ಪರಿಹಾರ ಕೇಳಲು ಹೋದರು. ಇವರ ಅಹವಾಲನ್ನು ಕೇಳಿಸಿಕೊಂಡ ಬ್ರಹ್ಮ ಅವಧೂತನ ರೂಪದಲ್ಲಿ ಯಾರೇ ಬಂದರೂ ಆತನನ್ನು ಅತಿಥಿಯ ರೂಪದಲ್ಲಿ ನೋಡಬೇಕಾದುದು ಅವಶ್ಯವಾಗಿದೆ. ಈಗ ಉಗ್ರರೂಪ ಪಡೆದಿರುವ ಶಿವನನ್ನು ಶಾಂತಗೊಳಿಸಲು ದೇವತೆಯಾದ ಪಾರ್ವತಿಯೇ ಶಕ್ತಳು.

ಆಕೆ ಲಿಂಗವನ್ನು ಹಿಡಿದಿಟ್ಟುಕೊಂಡು ವೈದಿಕ ಮಂತ್ರದಿಂದ ಪಾವನವಾದ ನೀರನ್ನು ಚಿಮುಕಿಸುವ ಮೂಲಕ ಈ ಅಗ್ನಿಯನ್ನು ಶಮನಗೊಳಿಸಬಹುದು ಎಂದು ತಿಳಿಸಿದ. ಲೋಕಕಲ್ಯಾಣಕ್ಕಾಗಿ ಬ್ರಹ್ಮನ ಸಲಹೆಯನ್ನು ಯಥಾವತ್ತಾಗಿ ಪಾಲಿಸಿದ ಪಾರ್ವತಿ ಲಿಂಗವನ್ನು ಬಂಧಿಸಿಟ್ಟುಕೊಂಡು ಲೋಕವನ್ನು ಕಾಪಾಡಿದಳು. ಆದ್ದರಿಂದಲೇ ಜಗತ್ತಿನಲ್ಲಿ ಜೀವದ ಉದಯಕ್ಕಾಗಿ ಪುರುಷ ಮತ್ತು ಪ್ರಕೃತಿಯ ಮಿಲನದ ಸಂಕೇತವಾಗಿ ಶಿವಲಿಂಗವನ್ನು ಆರಾಧಿಸಲಾಗುತ್ತದೆ.

ಇದನ್ನೂ ಓದಿ: Maha Shivaratri 2021: ಮಹಾಶಿವರಾತ್ರಿ ಆಚರಣೆಯ ಹುಟ್ಟು ಹೇಗಾಯ್ತು?: ಇಲ್ಲಿದೆ ಸಂಪೂರ್ಣ ಮಾಹಿತಿ

Published On - 9:28 am, Tue, 9 March 21