ಧಾರವಾಡ: ಎಲ್ಲೆಡೆ ಈಗ ಮುಂಗಾರು ಶುರುವಾಗಿದೆ. ಮಳೆ ಹೆಚ್ಚು ಸುರಿದರೆ ಪ್ರವಾಹದ ಆತಂಕವೂ ಶುರುವಾಗಲಿದೆ. ಕಳೆದ ವರ್ಷದ ಪ್ರಕೃತಿಯ ರೌದ್ರಾವತಾರ ಇನ್ನೂ ಮಾಸದೇ ನೆನಪಲ್ಲಿಯೇ ಇದೆ. ಹೌದು ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಳೆದ ವರ್ಷ ಭಾರೀ ಪ್ರವಾಹ ಉಂಟಾಗಿತ್ತು. ಅನೇಕರು ಮೃತಪಟ್ಟು, ಸಾವಿರಾರು ಜನರು ಮನೆ, ಬೆಳೆ, ಆಸ್ತಿ ಕಳೆದುಕೊಂಡಿದ್ದರು. ಆದರೆ ಈ ಬಾರಿ ಹಾಗಾಗದಂತೆ ರಾಜ್ಯ ಸರಕಾರ ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದೆ.
ಧಾರವಾಡದಲ್ಲಿ ಎನ್‌ಡಿಆರ್‌ಎಫ್ ಬಟಾಲಿಯನ್
ಮಳೆಗಾಲದಲ್ಲಿ ಆಗಬಹುದಾದ ತೊಂದರೆಗಳನ್ನು ನಿರ್ವಹಿಸಲು ಧಾರವಾಡ ಜಿಲ್ಲಾಡಳಿತ ಧಾರವಾಡಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಕರೆಯಿಸಿಕೊಂಡಿದೆ. ವಿಜಯವಾಡದಿಂದ ಬಂದಿರುವ ಎನ್.ಡಿ.ಆರ್.ಎಫ್. 10ನೇ ಬಟಾಲಿಯನ್‌ನ 21 ಯೋಧರು ಇದೀಗ ಯಾವುದೇ ವಿಪತ್ತು ಸಂಭವಿಸಿದರೂ ಜನರನ್ನು ರಕ್ಷಣೆ ಮಾಡಲು ಸನ್ನದ್ಧರಾಗಿ ನಿಂತಿದ್ದಾರೆ.
ಜನರೊಂದಿಗೆ ತಾವಿದ್ದೇವೆ ಅನ್ನೋದರ ಬಗ್ಗೆ ಜಾಗೃತಿ ಮೂಡಿಸಲು ಧಾರವಾಡದಲ್ಲಿ ಈ ಯೋಧರು ನೀರಿನಲ್ಲಿ ಜೀವರಕ್ಷಣಾ ಕಾರ್ಯದ ಪ್ರಾತ್ಯಕ್ಷಿಕೆ ನೀಡಿ ಜನರಲ್ಲಿ ಅರಿವು ಮೂಡಿಸಿದರು. ನಗರದ ಕೆಲಗೇರಿ ಕೆರೆಯಲ್ಲಿ ವಿಹಾರಕ್ಕೆ ಆಗಮಿಸಿದ ಪ್ರವಾಸಿಗರು ಆಕಸ್ಮಿಕವಾಗಿ ಬೋಟಿನಿಂದ ಕೆರೆಯ ಮಧ್ಯದ ನೀರಿನಲ್ಲಿ ಬಿದ್ದು, ಮುಳುಗಲು ಆರಂಭಿಸಿದಾಗ ಮತ್ತೊಂದು ಮೂಲೆಯಲ್ಲಿದ್ದ ಎನ್.ಡಿ.ಆರ್.ಎಫ್. ಯೋಧರು ಮುಳುಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸುವ ಪ್ರಾತ್ಯಕ್ಷಿಕೆ ನೀಡಿದರು.
ಈ ಬಾರಿಯೂ ಹೆಚ್ಚು ಮಳೆ: ಹವಾಮಾನ ಇಲಾಖೆ
ಈ ವರ್ಷವೂ ಸಹ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಅಪಾರ ಮಳೆ ಬಂದರೆ ಜನ, ಜಾನುವಾರು, ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತಿದೆ. ಈ ಸಂಬಂಧ ಜಿಲ್ಲಾಧಿಕಾರಿ ದೀಪಾ ಚೋಳನ್, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ, ತಹಸಿಲ್ದಾರ ಡಾ.ಸಂತೋಷ ಬಿರಾದಾರ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆ ನಡೆಸಿದ್ದಾರೆ.
Published On - 6:25 pm, Sun, 14 June 20