ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಂಜೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾಬ್ ಚಾಲಕ ಪ್ರತಾಪ್ ಇಂದು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಪೋದ್ರಿಕ್ತಗೊಂಡ ಇತರೆ ಟ್ಯಾಕ್ಸಿ ಚಾಲಕರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲನೆ ಸ್ಥಗಿತಗೊಳಿಸಿದ್ದಾರೆ.
ಟ್ಯಾಕ್ಸಿಗಳು ಬೆಳಗ್ಗೆಯಿಂದಲೂ ವಿಮಾನ ನಿಲ್ದಾಣಕ್ಕೆ ಬಾರದೆ, ಟ್ಯಾಕ್ಸಿಗಳ ಸ್ಥಗಿತದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಟ್ಯಾಕ್ಸಿಗಳು ಬಾರದ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ವಾಯುವಜ್ರ ಬಸ್ ಗಳ ಹೆಚ್ಚುವರಿ ನಿಯೋಜನೆ ಮಾಡಲಾಗಿದೆ. ಟ್ಯಾಕ್ಸಿ ಸ್ಟಾಂಡ್ ನಿಂದಲೇ ಪ್ರಯಾಣಿಕರ ಅನುಕೂಲಕ್ಕೆ ಬಸ್ ಗಳ ನಿಯೋಜನೆ ಮಾಡಲಾಗಿದೆ. ಆದರೆ ಬಸ್ ಗಳಲ್ಲಿ ತೆರಳಲು ಕೆಲ ಪ್ರಯಾಣಿಕರು ಹಿಂದೇಟು ಹಾಕುತ್ತಿರುವ ಬೆಳವಣಿಗೆಗಳೂ ಕಂಡುಬಂದಿವೆ.
ತಮ್ಮ ಬೇಡಿಕೆಗಳನ್ನ ಈಡೇರಿಸುವವರೆಗೂ ಟ್ಯಾಕ್ಸಿಗಳನ್ನ ಓಡಿಸದೇ ಇರಲು ಚಾಲಕ ಸಂಘ ನಿರ್ಧಾರ ಮಾಡಿದೆ. ಟ್ಯಾಕ್ಸಿ ಚಾಲಕರ ನಿರ್ಧಾರದಿಂದ ಪ್ರಯಾಣಿಕರಿಗೆ ನಗರದ ವಿವಿಧ ಭಾಗಗಳಿಗೆ ತೆರಳಲು ಅನಾಣುಕೂಲವಾಗಿದೆ. ಮಧ್ಯಾಹ್ನದ ನಂತರ ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಒಂದು ಕಿ.ಮೀ.ಗೆ 24 ರೂ ದರ ನಿಗದಿ ಮಾಡಿ ಚಾಲಕರ ಜೀವನ ಉಳಿಸಿ ಎಂದು ಪ್ರತಿಭಟನೆ ನಡೆಸುವುದಾಗಿ ಟ್ಯಾಕ್ಸಿ ಚಾಲಕರ ಸಂಘ ಪ್ರಕಟಿಸಿದೆ.
ಇದನ್ನೂ ಓದಿ: ಏರ್‌ಪೋರ್ಟ್ ಕ್ಯಾಬ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಆಸ್ಪತ್ರೆಯಲ್ಲಿ ಸಾವು