Apple iPhone 12: ಆಪಲ್ ಐಫೋನ್ 12ರ ಜೋಡಣೆ ಭಾರತದಲ್ಲೇ ಆರಂಭ

| Updated By: guruganesh bhat

Updated on: Mar 11, 2021 | 7:06 PM

ಆಪಲ್ ಕಂಪೆನಿಯು ಐಫೋನ್ 12ರ ಉತ್ಪಾದನೆಯನ್ನು ಭಾರತದಲ್ಲೇ ಆರಂಭಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಈ ಬಗ್ಗೆ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ.

Apple iPhone 12: ಆಪಲ್ ಐಫೋನ್ 12ರ ಜೋಡಣೆ ಭಾರತದಲ್ಲೇ ಆರಂಭ
ಪ್ರಾತಿನಿಧಿಕ ಚಿತ್ರ
Follow us on

ಆಪಲ್ ಕಂಪೆನಿಯು ಐಫೋನ್ 12ರ ಜೋಡಣೆಯನ್ನು ಭಾರತದಲ್ಲಿ ಆರಂಭಿಸಿದೆ. ಅಮೆರಿಕದ ತಂತ್ರಜ್ಞಾನ ದೈತ್ಯ ಕಂಪೆನಿ ಆಪಲ್ ಈ ಬಗ್ಗೆ ಮಾತನಾಡಿ, ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಉತ್ಪಾದನೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದೇವೆ ಎಂದು ಹೇಳಿದೆ. “ಐಫೋನ್ 12ರ ಉತ್ಪಾದನೆಯನ್ನು ನಮ್ಮ ಸ್ಥಳೀಯ ಗ್ರಾಹಕರಿಗಾಗಿ ಭಾರತದಲ್ಲಿ ಶುರು ಮಾಡುತ್ತಿರುವುದಕ್ಕೆ ನಮಗೆ ಹೆಮ್ಮೆ ಆಗುತ್ತಿದೆ,” ಎಂದು ಕಂಪೆನಿ ಗುರುವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಸ್ಮಾರ್ಟ್​ಫೋನ್ ತಯಾರಿಸುವ ಸರಬರಾಜುದಾರರ ಹೆಸರನ್ನು ಹೇಳಿಲ್ಲ.

ಆ್ಯಪಲ್ ತೈವಾನ್ ಮೂಲದ ಒಪ್ಪಂದ ಉತ್ಪಾದಕ ಸಂಸ್ಥೆ ಫಾಕ್ಸ್​ಕಾನ್ ಜತೆಗೆ ಸಹಿ ಹಾಕಿದ್ದು, ದಕ್ಷಿಣ ತಮಿಳುನಾಡಿನಲ್ಲಿ ಇರುವ ಘಟಕದಲ್ಲಿ ಉತ್ಪಾದನೆ ಮಾಡಲಾಗುತ್ತದೆ ಎಂದು ಈ ಸಂಗತಿ ಬಗ್ಗೆ ಮಾಹಿತಿ ಇರುವ ಎರಡು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಫಾಕ್ಸ್​ಕಾನ್ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿರ್ದಿಷ್ಟ ಗ್ರಾಹಕರ ಕೆಲಸದ ವಿಚಾರವಾಗಿ ಏನನ್ನೂ ಹೇಳುವುದಿಲ್ಲ ಎಂದು ಈಗಾಗಲೇ ಫಾಕ್ಸ್​ಕಾನ್ ತಿಳಿಸಿದೆ.

ಆಪಲ್ ಕಂಪೆನಿಯು ಉತ್ಪಾದನೆಯ ಕೆಲವು ಭಾಗಗಳನ್ನು ಚೀನಾದಿಂದ ಇತರ ಮಾರುಕಟ್ಟೆಗೆ ಸ್ಥಳಾಂತರ ಮಾಡುತ್ತಿದೆ. ಅಮೆರಿಕ ಹಾಗೂ ಚೀನಾ ಮಧ್ಯದ ವಾಣಿಜ್ಯ ಸಮರದ ಕಾರಣಕ್ಕೆ ಈ ನಿರ್ಧಾರ ಮಾಡಬೇಕಿದೆ. ಇನ್ನು ಈ ಸಂಗತಿಗಳ ಬಗ್ಗೆ ಮಾಹಿತಿ ಇರುವವರು ತಿಳಿಸಿದ ಪ್ರಕಾರ, ನವೆಂಬರ್​ನಲ್ಲಿ ಐಪ್ಯಾಡ್ ಹಾಗೂ ಮ್ಯಾಕ್​​ಬುಕ್ ಜೋಡಣೆ ಘಟಕವನ್ನು ಚೀನಾದಿಂದ ವಿಯೆಟ್ನಾಂಗೆ ಸ್ಥಳಾಂತರ ಮಾಡಲಾಗಿದೆ. 2017ರಿಂದ ತೈವಾನ್ ಸರಬರಾಜುದಾರ ಕಂಪೆನಿ ವಿಸ್ಟ್ರಾನ್ ಕೂಡ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಐಫೋನ್ ಜೋಡಣೆ ಕಾರ್ಯ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ.

ಫಾಕ್ಸ್​ಕಾನ್, ವಿಸ್ಟ್ರಾನ್ ಹಾಗೂ ಪೆಗಟ್ರಾನ್ ಈ ಮೂರು ಸೇರಿ ಇನ್ನು ಐದು ವರ್ಷದಲ್ಲಿ 900 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಐಫೋನ್ ಅನ್ನು ಭಾರತದಲ್ಲಿ ತಯಾರಿಸುವುದಕ್ಕೆ ಬದ್ಧವಾಗಿದೆ. ಭಾರತ ಸರ್ಕಾರವು 6.7 ಬಿಲಿಯನ್ ಯುಎಸ್​ಡಿ ಸ್ಮಾರ್ಟ್​ಫೋನ್ ರಫ್ತಿನ ಗುರಿ ಹಾಕಿಕೊಂಡಿದೆ. ಆಪಲ್​ನ ಐಪ್ಯಾಡ್ ಟ್ಯಾಬ್ಲೆಟ್ ಜೋಡಣೆಯನ್ನು ಸಹ ಭಾರತಕ್ಕೆ ತರುವುದಕ್ಕೆ ಆಪಲ್ ಯೋಜನೆ ರೂಪಿಸಿದೆ ಎಂದು ಕಳೆದ ತಿಂಗಳು ಮಾಧ್ಯಮವೊಂದು ವರದಿ ಮಾಡಿತ್ತು. ಉತ್ಪಾದನಾ ವಲಯದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇದರಿಂದ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: Apple Spring Event: ಆಪಲ್ ಕಂಪೆನಿಯಿಂದ ಮಾರ್ಚ್ 23ಕ್ಕೆ ಹೊಸ ಉತ್ಪನ್ನಗಳ ಬಿಡುಗಡೆ ನಿರೀಕ್ಷೆ