ಕೊರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಆಲೋಚಿಸುತ್ತಿದ್ದೀರಾ? ಅಥವಾ ಈಗಾಗಲೇ ಕೊರೊನಾ ಲಸಿಕೆ ಪಡೆದಿದ್ದೀರಾ? ಒಂದೊಮ್ಮೆ ಕೊರೊನಾ ಲಸಿಕೆ ಪಡೆಯಬೇಕು ಎಂದು ಯೋಚಿಸುತ್ತಿದ್ದರೆ ಕೊರೊನಾ ಲಸಿಕೆ ಪಡೆದ ನಂತರ ಏನು ಮಾಡಬೇಕು ಏನು ಮಾಡಬಾರದು ಎಂದು ನೀವು ತಿಳಿದಿರಲೇಬೇಕು. ಕೇವಲ ತಿಳಿದಿರುವುದೊಂದೇ ಅಲ್ಲ, ಈ ನಿಯಮಗಳನ್ನು ನೀವು ಪಾಲಿಸಲೇಬೇಕು. ಹಾಗಾದರೆ ಕೊರೊನಾ ಲಸಿಕೆ ಪಡೆದ ನಂತರ ಜೀವನ ಕ್ರಮ ಹೇಗಿರಬೇಕು ಹೇಗಿರಬಾರದು ಈ ಬರಹ ಓದಿ…
ಈಗಾಗಲೇ ದೇಶದಾದ್ಯಂತ ಕೋಟಿಗೂ ಹೆಚ್ಚು ನಾಗರಿಕರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಯಾರಿಗೂ ಕೆಲ ಸಣ್ಣಪುಟ್ಟ ಅಡ್ಡಪರಿಣಾಮ ಬಿಟ್ಟರೆ ಹೇಳಿಕೊಳ್ಳುವಂತಹ ಅಡ್ಡಪರಿಣಾಮಗಳೇನೂ ಆಗಿಲ್ಲ.
1). ಪೌಷ್ಠಿಕಾಂಶ ಭರಿತ ಆಹಾರ ಸೇವಿಸಿ. ಹೊತ್ತು ಹೊತ್ತಿಗೆ ಸರಿಯಾಗಿ ತಿನ್ನದೇ ಖಾಲಿ ಹೊಟ್ಟೆಯಲ್ಲಿ ಬಹುಕಾಲ ಇರಬೇಡಿ. ಕಾಲಕಾಲಕ್ಕೆ ಆಹಾರ ಸೇವಿಸಿ.
2). ಅನಗತ್ಯ ಗೊಂದಲ, ಬೇಸರದಿಂದ ದೂರವಿರಿ. ಮನಸ್ಸನ್ನು ಆದಷ್ಟು ಹಗುರವಾಗಿ ಇರಿಸಿಕೊಳ್ಳಿ. ಸಾಧ್ಯವಾದಷ್ಟು ಮಟ್ಟಿಗೆ ಒತ್ತಡಗಳಿಂದ ದೂರವಿರಿ.
3). ಯಾರಾದರೂ ಒತ್ತಡದಲ್ಲಿ ಇದ್ದಂತೆ ಅನಿಸಿದರೆ ಅವರ ಬಳಿ ಮಾತನಾಡಿ. ಅವರ ಮನಸ್ಸನ್ನು ಹಗುರವಾಗಿಸಿ. ನೀವೂ ಸಹ ಆಗ ರಿಲಾಕ್ಸ್ ಆಗಬಹುದು.
4). ನಿಮಗೆ ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳಿದ್ದಲ್ಲಿ ನಿಮ್ಮ ಖಾಯಂ ವೈದ್ಯರ ಸಂಪರ್ಕದಲ್ಲಿರಿ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಕಿಮೋಥೆರಪಿಯಂತಹ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಕಾಲಕಾಲಕ್ಕೆ ವೈದ್ಯರ ನಿಗಾ ನಿಮ್ಮ ಮೇಲೆ ಇರುವಂತೆ ನೋಡಿಕೊಳ್ಳಿ.
5). ಚಿಕ್ಕಪುಟ್ಟ ಅಡ್ಡಪರಿಣಾಮಗಳು ಸಹಜವಾಗಿ ಕಾಣಿಸಿಕೊಳ್ಳಬಹುದು. ಚುಚ್ಚುಮದ್ದಿನಿಂದ ಜ್ವರ ಅಥವಾ ಚುಚ್ಚುಮದ್ದು ನೀಡಿದಲ್ಲಿ ನೋವು ಸಹ ಕಾಣಿಸಿಕೊಳ್ಳಬಹುದು. ಆದರೆ, ಇವು ತಾತ್ಕಾಲಿಕವಾಗಿದ್ದು, ಬೇಗ ಗುಣಮುಖವಾಗುತ್ತವೆ.
6). ಕೊರೊನಾ ಲಸಿಕೆ ನೀಡಿದ ನಂತರ ಅರ್ಧಗಂಟೆಗಳ ಕಾಲ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ಪಡೆದವರನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗುತ್ತದೆ. ಅಲರ್ಜಿಯಂತಹ ತೊಂದರೆ ಕಂಡುಬರುವ ಕುರಿತು ತಪಾಸಣೆ ನಡೆಸಲು ಈ ವಿಧಾನ ಅನುಸರಿಸಲಾಗುತ್ತದೆ.
7). ಕೊರೊನಾ ಲಸಿಕೆ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಪಾಠ ಹೇಳುತ್ತದೆ. ಈ ಕಲಿಕೆ ಮುಗಿಯಲು ಕೆಲ ದಿನಗಳ ಅಗತ್ಯವಿದೆ. ಹೀಗಾಗಿ ಲಸಿಕೆ ಪಡೆದ ತಕ್ಷಣ ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲವಾದರೂ ಕೆಲ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.
8). ಲಸಿಕೆ ಪಡೆದ ನಂತರವೂ ಸುರಕ್ಷಿತ ಕ್ರಮಗಳನ್ನು ಅನುಸರಿಸದಿದ್ದಲ್ಲಿ ಕೊರೊನಾ ಸೋಂಕು ನಿಮಗೆ ತಗುಲಬಹುದು. ಏಕೆಂದರೆ ಲಸಿಕೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಲು ಕೆಲ ದಿನಗಳ ಅವಧಿಯ ಅಗತ್ಯವಿದೆ. ಹೀಗಾಗಿ ಲಸಿಕೆ ಪಡೆದ ನಂತರ ಹೇಗೆ ಬೇಕೋ ಹಾಗೆ ಇರುವಂತಿಲ್ಲ. ಕೊರೊನಾ ಸಂಬಂಧಿತ ಎಲ್ಲ ಮುಂಜಾಗೃತಾ ಕ್ರಮಗಳನ್ನು ಮರೆಯದೇ ಪಾಲಿಸಿ.
9). ಕೊರೊನಾ ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಿ, ಸ್ವಚ್ಛತಾ ಕ್ರಮಗಳನ್ನು ಅನುಸರಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಿಕೊಳ್ಳಿ.
ಯಾವುದೇ ಆತಂಕಕ್ಕೆ ಒಳಗಾಗದೇ ಸಹಜವಾಗಿ ಖುಷಿ ಖುಷಿಯಾಗಿರಿ. ಕೊರೊನಾ ಲಸಿಕೆ ಪಡೆಯುವ ಮುನ್ನ ಹೇಗಿದ್ದಿರೋ ಹಾಗೇ ಉಲ್ಲಾಸಭರಿತ ಜೀವನ ನಡೆಸಿ.
ಇನ್ಫೋಸಿಸ್ ಸಿಬ್ಬಂದಿ, ಹತ್ತಿರ ಸಂಬಂಧಿಗಳಿಗೆ ಕಂಪೆನಿಯೇ ಭರಿಸಲಿದೆ ಕೊರೊನಾ ಲಸಿಕೆ ವೆಚ್ಚ