ಉತ್ತರ ಪ್ರದೇಶದಲ್ಲಿ (Uttar Pradesh) ವಿಧಾನ ಸಭಾ ಚುನಾವಣೆ ಕಾವು ಕ್ರಮೇಣ ಹೆಚ್ಚುತ್ತಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಮೈತ್ರಿ, ಚುನಾವಣಾ ಹೊಂದಾಣಿಕೆಗಳಲ್ಲಿ ಮಗ್ನವಾಗಿವೆ. ಆಡಳಿತಾರೂಢ ಬಿಜೆಪಿ (BJP) ಪಕ್ಷವು ಸತತ ಎರಡನೇ ಬಾರಿಗೆ ಗದ್ದುಗೆಯೇರುವ ವಿಶ್ವಾಸದಲ್ಲಿದೆ. ದೇಶದ ಅತಿದೊಡ್ಡ ರಾಜ್ಯದಲ್ಲಿ ನಾಲ್ಕು ಪ್ರಮುಖ ಪಕ್ಷಗಳ ನಡುವೆ ಹಣಾಹಣಿ ನಡೆಯಲಿದೆ-ಬಿಜೆಪಿ, ಸಮಾಜವಾದಿ ಪಕ್ಷ (ಎಸ್ಪಿ) (SP), ಬಹುಜನ ಸಮಾಜ (ಬಿ ಎಸ್ ಪಿ) (BSP) ಮತ್ತು ಕಾಂಗ್ರೆಸ್. ಬಿಜೆಪಿಯ ಕೆಲ ಸಚಿವರು ಮತ್ತು ಶಾಸಕರು ಪಕ್ಷವನ್ನು ತೊರೆದು ಬೇರೆ ಪಕ್ಷಗಳಿಗೆ ಸೇರಿತ್ತಿರುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಪಕ್ಷದ ವರಿಷ್ಠರಿಗೆ ಕೊಂಚ ಆತಂಕ ಉಂಟು ಮಾಡಿದೆಯಾದರೂ ಚುನಾವಣೆ ಹತ್ತಿರ ಬಂದಾಗ ಇಂಥ ಬೆಳವಣಿಗೆಗಳು ಸಾಮಾನ್ಯ ಎಂದು ಹೇಳಲಾಗುತ್ತಿದೆ.
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎ ಐ ಎಮ್ ಐ ಎಮ್) ಪಕ್ಷದ ಅಧ್ಯಕ್ಷ ಅಸದುದ್ದೀನ್ ಒವೈಸಿ ಅವರೂ ಒಂದೆರಡು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದಾರೆ. ಶನಿವಾರ ಹೇಳಿಕೆಯೊಂದನ್ನು ನೀಡಿರುವ ಒವೈಸಿ ಅವರು ಬಾಬು ಸಿಂಗ್ ಕುಷಾವಾ ಮತ್ತು ಭಾರತ್ ಮುಕ್ತಿ ಮೋರ್ಚಾ ಅವರೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮೈತ್ರಿ ಮಾಡಿಕೊಂಡ ಕೂಡಲೇ ಅವರು ಅಧಿಕಾರಕ್ಕೆ ಬರುವ ಕನಸು ಸಹ ಕಾಣುತ್ತಿದ್ದಾರೆ. ‘ನಮ್ಮ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಎರಡು ಮುಖ್ಯಮಂತ್ರಿಗಳನ್ನು ಕಾಣಲಿದೆ. ಒಬ್ಬ ಮುಖ್ಯಮಂತ್ರಿ ಒಬಿಸಿ ಸಮದಾಯವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿರುತ್ತಾರೆ ಮತ್ತು ಇನ್ನೊಬ್ಬರು ದಲಿತ ಸಮುದಾಯ. ಅವರಿಬ್ಬರ ಹೊರತಾಗಿ ಒಬ್ಬ ಮುಸ್ಲಿಂ ಸಮುದಾಯ ಅಭ್ಯರ್ಥಿಯೂ ಸೇರಿದಂತೆ ಮೂವರು ಉಪ ಮುಖ್ಯಮಂತ್ರಿಗಳಿರುತ್ತಾರೆ,’ ಎಂದು ಶನಿವಾರ ಲಖನೌನಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಒವೈಸಿ ಹೇಳಿದರು.
ಇದೇ ಸುದ್ದಿಗೋಷ್ಟಿಯಲ್ಲಿ ಬಾಬು ಸಿಂಗ್ ಕುಷಾವಾ ಸಹ ಹಾಜರಿದ್ದರು. ಎ ಐ ಎಮ್ ಐ ಎಮ್ ಜೊತೆ ಮೈತ್ರಿ ಮಾಡಿಕೊಂಡಿರುವುದು ಅನಿವಾರ್ಯತೆ ಮತ್ತು ಹತಾಷೆಯ ಪ್ರತೀಕವೇ ಅಂತ ಅವರನ್ನು ಕೇಳಿದಾಗ, ‘ಸುದೀರ್ಘವಾದ ಅವಧಿಯಿಂದ ನಾವು ದಲಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭ್ಯುದಯಕ್ಕಾಗಿ ಕೆಲಸ ಮಾಡಿದ್ದೇವೆ,’ ಎಂದು ಹೇಳಿದರು.
ಏತನ್ಮಧ್ಯೆ, ಜವಾಹರಲಾಲ ನೆಹರೂ ಯುನಿವರ್ಸಿಟಿಯಲ್ಲಿ (ಜೆ ಎನ್ ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಮತ್ತು ಇತ್ತೀಚಿಗಷ್ಟೇ ಕಾಂಗ್ರೆಸ್ ಪಕ್ಷ ಸೇರಿರುವ ಕನ್ಹಯ್ಯ ಕುಮಾರ್ ಅವರನ್ನು ಟ್ರಂಪ್ ಕಾರ್ಡ್ ಅಗಿ ಬಳಸುವ ಯೋಚನೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾಡ್ರಾ ಅವರಿಗಿದೆ. ಕನ್ಹಯ್ಯ ಈಗಾಗಲೇ ತಮ್ಮ ಕ್ರಾಂತಿಕಾರಿ ಸ್ವರೂಪದ ಭಾಷಣಗಳಿಂದ ಜನರನ್ನು ಸೆಳೆಯುತ್ತಿದ್ದಾರೆ.
ಶುಕ್ರವಾರ ತಾನು ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ದಾವೇದಾರಳು ಎಂದು ಹೇಳಿಕೊಂಡಿದ್ದ ಪ್ರಿಯಾಂಕಾ ಶನಿವಾರ ಉಲ್ಟಾ ಹೊಡೆದರು. ಮಾಧ್ಯಮದವರು ಕೇಳುವ ಪ್ರಶ್ನೆಗಳಿಂದ ಬೇಸತ್ತು ಹಾಗೆ ಹೇಳಿದ್ದೆ ಅಂತ ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನ ಸಭೆಯ 403 ಸ್ಥಾನಗಳಿಗೆ 7 ಹಂತಗಳ ಚುನಾವಣೆಯು ಪೆಬ್ರುವರಿ 10 ರಿಂದ ಆರಂಭವಾಗಲಿದೆ.
ಇದನ್ನೂ ಓದಿ: ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದ ಪ್ರಿಯಾಂಕಾ ಗಾಂಧಿ; ಉಲ್ಟಾ ಹೊಡೆದಿದ್ದು ಯಾಕೆ?