AUS vs IND 3RD ODI | ಭಾರತೀಯ ಬೌಲರ್ಗಳ ಸಂಘಟಿತ ದಾಳಿ: ಕೊನೆಗೂ ಗೆದ್ದ ಭಾರತ
ಶಾರ್ದುಲ್ ಠಾಕೂರು, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಟಿ. ನಟರಾಜನ್ ಮತ್ತು ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ತೋರಿದರು.
ಕ್ಯಾನ್ಬೆರಾ: ಇಂದು ನಡೆದ ಮೂರನೆಯ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಬೀಸಿದ ಭಾರತ ಕೇವಲ 302ರನ್ ಗಳಿಸಲಷ್ಟೇ ಶಕ್ತವಾಯಿತು. ಕಳೆದ ಎರಡು ಪಂದ್ಯದಲ್ಲಿ 350ಕ್ಕೂ ಹೆಚ್ಚು ರನ್ ದಾಖಲಿಸಿದ್ದ ಆಸಿಸ್, ಸುಲಭವಾಗಿ ಈ ಟಾರ್ಗೆಟ್ ಬೆನ್ನಟ್ಟುತ್ತದೆ ಎಂದು ತಿಳಿಯಲಾಗಿತ್ತು. ಭಾರತಕ್ಕೆ ಇಂದು ಕೂಡ ಸೋಲೇ ಗತಿ ಎಂದು ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು.
ಆದರೆ ಈ ಎಲ್ಲಾ ಯೋಚನೆಗಳನ್ನು ತಲೆಕೆಳಗೆ ಮಾಡಿದ್ದು ಭಾರತೀಯ ಬೌಲರ್ಗಳ ಸಂಘಟಿತ ದಾಳಿ. ಶಾರ್ದುಲ್ ಠಾಕೂರು, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಟಿ. ನಟರಾಜನ್ ಮತ್ತು ರವೀಂದ್ರ ಜಡೇಜಾ ತೋರಿದ ಉತ್ತಮ ಪ್ರದರ್ಶನ. ಎಸೆತಗಾರಿಕೆ ವಿಭಾಗದ ಯಶಸ್ಸು ಭಾರತವನ್ನು ಗೆಲುವಿನ ದಡ ಮುಟ್ಟಿಸಿತು.
India vs Australia 2020, 3rd ODI | ಕೊನೆಯ ಪಂದ್ಯವನ್ನು13 ರನ್ಗಳಿಂದ ಗೆದ್ದ ಭಾರತ
ಈ ಸರಣಿಯಲ್ಲಿ ಮೊದಲ ಪಂದ್ಯವಾಡಿದ ಶಾರ್ದುಲ್ ಠಾಕೂರ್ 10 ಓವರ್ ಎಸೆದು ಕೇವಲ 51 ರನ್ ಬಿಟ್ಟುಕೊಟ್ಟು, 3 ವಿಕೆಟ್ ಪಡೆದರು. ಕಳೆದೆರಡು ಪಂದ್ಯದಲ್ಲಿ ಮಿಂಚಿದ್ದ ಸ್ಟೀವನ್ ಸ್ಮಿತ್ ವಿಕೆಟ್ ಕೂಡ ಶಾರ್ದುಲ್ ಪಾಲಾಯಿತು.
ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಟಿ. ನಟರಾಜನ್ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ನಂಬಿಕೆ ಹುಸಿಯಾಗಲಿಲ್ಲ. ಮಾರ್ನಸ್ ಮತ್ತು ಆಸ್ಟನ್ ಅಗರ್ರ ಎರಡು ವಿಕೆಟ್ ಪಡೆದು ನಟರಾಜನ್ ಮಿಂಚಿದರು.
ಮ್ಯಾಕ್ಸ್ವೆಲ್ ಮತ್ತು ಝಂಪಾ ವಿಕೆಟ್ ಪಡೆದ ಬುಮ್ರಾ ಕೊನೆಯ ಕ್ಷಣದ ಹೀರೋ ಎನಿಸಿಕೊಂಡರು. 9.3 ಓವರ್ ಎಸೆದ ಬುಮ್ರಾ ಕೇವಲ 43 ರನ್ ಬಿಟ್ಟುಕೊಟ್ಟು ಉತ್ತಮ ಸ್ಥಿರತೆ ಕಾಯ್ದುಕೊಂಡರು.
ಕ್ಯಾಮರಾನ್ ಗ್ರೀನ್ ವಿಕೆಟ್ ಕಿತ್ತ ಕುಲ್ದೀಪ್ ಯಾದವ್ ಹಾಗೂ ನಾಯಕ ಫಿಂಚ್ ವಿಕೆಟ್ ಪಡೆದ ರವೀಂದ್ರ ಜಡೇಜಾ ಜವಾಬ್ದಾರಿಯುತ ಪ್ರದರ್ಶನ ತೋರಿದರು.
ಆಸಿಸ್ ಪರ ನಾಯಕ ಆರೊನ್ ಫಿಂಚ್ ಹೊರತಾಗಿ ಯಾರೂ ತಂಡ ಗೆಲ್ಲುವ ಪ್ರದರ್ಶನ ತೋರಲಿಲ್ಲ. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಸ್ಮಿತ್ ಮತ್ತು ಮಾರ್ನಸ್ ಆಟ ಇಂದು ನಡೆಯಲಿಲ್ಲ. ಮ್ಯಾಕ್ಸ್ವೆಲ್ ಬ್ಯಾಟಿಂಗ್ ಅಸ್ತ್ರ ಕೈಸೋತಿತು. ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಈ ಪಂದ್ಯದಲ್ಲಿ ಇಲ್ಲದಿದ್ದದ್ದು ಭಾರತಕ್ಕೆ ವರವಾಗಿ ಪರಿಣಮಿಸಿತು.
ಒಟ್ಟಾರೆ, ಭಾರತೀಯ ಎಸೆತಗಾರರು ತೋರಿದ ಸ್ಥಿರ-ಸಂಘಟಿತ ದಾಳಿಯಿಂದ ತಂಡ ಗೆಲ್ಲುವಂತಾಯಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊನೆಯ ಪಂದ್ಯವನ್ನಾದರೂ ಗೆಲ್ಲುವಂತಾಯಿತು. 2-1 ಅಂತರದ ಮೂಲಕ ಭಾರತ ತನ್ನ ಇರುವು ಪ್ರದರ್ಶಿಸುವಂತಾಯಿತು.
AUS vs IND 3RD ODI | ಭಾರತಕ್ಕೆ ಗೆಲುವಿನ ಬುನಾದಿ ಹಾಕಿಕೊಟ್ಟ ಪಾಂಡ್ಯ-ಜಡೇಜ ಜೋಡಿ
Published On - 6:40 pm, Wed, 2 December 20