AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗೋಲಿಯಾದಿಂದ ಮಾಗಡಿ ಕೆರೆಗೆ ಬಂದ ಪಟ್ಟೆ ತಲೆ ಹೆಬ್ಬಾತು

ಮಂಗೋಲಿಯಾದ ಪಕ್ಷಿ ವಿಜ್ಞಾನಿಗಳು ಪಟ್ಟೆ ತಲೆ ಹೆಬ್ಬಾತು ಬಗ್ಗೆ ಸಂಶೋಧನೆ ನಡೆಸಿ ಒಂದು ಹಕ್ಕಿಯ ಕೊರಳಿಗೆ 2013 ರ ಜುಲೈ 12ರಂದು ಟ್ಯಾಗ್ ಅಳವಡಿಸಿದ್ದಾರೆ. ಕೊರಳಲ್ಲಿ ಟ್ಯಾಗ್ ಹೊತ್ತಿರುವ ಹಕ್ಕಿ ಈಗ ಮಾಗಡಿ ಕೆರೆಯಲ್ಲಿ ಕಾಣಿಸಿಕೊಂಡಿರುವುದು ಸದ್ಯ ಪಕ್ಷಿಪ್ರೇಮಿಗಳನ್ನು ಆಕರ್ಷಿಸಲು ಕಾರಣವಾಗಿದೆ.

ಮಂಗೋಲಿಯಾದಿಂದ ಮಾಗಡಿ ಕೆರೆಗೆ ಬಂದ ಪಟ್ಟೆ ತಲೆ ಹೆಬ್ಬಾತು
ಮಂಗೋಲಿಯಾದಿಂದ ಮಾಗಡಿಗೆ ಬಂದ ಪಟ್ಟೆತಲೆ ಹೆಬ್ಬಾತು
Skanda
| Edited By: |

Updated on: Dec 18, 2020 | 6:31 AM

Share

ಕೊಪ್ಪಳ/ಗದಗ: ಇದು ಕೆಲ ಪ್ರಭೇದಕ್ಕೆ ಸೇರಿದ ಪಕ್ಷಿಗಳಿಗೆ ಸಂತಾನೋತ್ಪತ್ತಿಯ ಕಾಲ. ತಮ್ಮ ಸಂತಾನದ ಅಭಿವೃದ್ಧಿಗಾಗಿ ಆಯಾ ಕಾಲಕ್ಕೆ ತಕ್ಕಂತೆ ಸಾವಿರಾರು ಕಿಮೀ ದೂರಕ್ಕೆ ವಲಸೆ ಹೋಗುವ ಹಕ್ಕಿಗಳ ಗುಣವೇ ವಿಶಿಷ್ಟವಾದದ್ದು. ಗದಗ ಜಿಲ್ಲೆಯ ಮಾಗಡಿ ಕೆರೆಯಲ್ಲಿ ಈಗ ವಲಸೆ ಹಕ್ಕಿಗಳದ್ದೇ ಕಾರುಬಾರು. ದೂರದ ಮಂಗೋಲಿಯಾದಿಂದ ಮಾಗಡಿ ಕೆರೆಗೆ ಬಂದ ಪಟ್ಟೆ ತಲೆ ಹೆಬ್ಬಾತು (Bar Headed Goose) ಹಕ್ಕಿಗಳನ್ನು ಕೊಪ್ಪಳ ಜಿಲ್ಲೆಯ ಹವ್ಯಾಸಿ ಛಾಯಾಗ್ರಾಹಕ ಸಾದಿಕ್ ಕನಕಗಿರಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಮಾಗಡಿ ಕೆರೆಗೆ ಬಂದಿರುವ ಮಂಗೋಲಿಯಾದ ಪಟ್ಟೆ ತಲೆ ಹೆಬ್ಬಾತುಗಳ ಪೈಕಿ ಒಂದು ಹಕ್ಕಿಯಂತೂ ಎಲ್ಲರ ಗಮನಸೆಳೆಯುತ್ತಿವೆ. ಮಂಗೋಲಿಯಾದ ಪಕ್ಷಿ ವಿಜ್ಞಾನಿಗಳು ಪಟ್ಟೆ ತಲೆ ಹೆಬ್ಬಾತು ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಅದರಲ್ಲಿ ಒಂದು ಹಕ್ಕಿಯ ಕೊರಳಿಗೆ 2013 ರ ಜುಲೈ 12ರಂದು ಟ್ಯಾಗ್ ಅಳವಡಿಸಿದ್ದಾರೆ. ಆ ಪಕ್ಷಿ ಎಲ್ಲಿಂದ, ಎಲ್ಲಿಗೆ ಹೋಗುತ್ತದೆ? ಎನ್ನುವ ಅಧ್ಯಯನಕ್ಕೆ ವಿಜ್ಞಾನಿಗಳಿಗೆ ನೆರವಾಗುವ ಸಲುವಾಗಿ ಟ್ಯಾಗ್ ಅಳವಡಿಸಲಾಗಿದೆ.

ಹೀಗೆ ಕೊರಳಲ್ಲಿ ಟ್ಯಾಗ್ ಹೊತ್ತಿರುವ ಹಕ್ಕಿ ಈಗ ಮಾಗಡಿ ಕೆರೆಯಲ್ಲಿ ಕಾಣಿಸಿಕೊಂಡಿರುವುದು ಸದ್ಯ ಪಕ್ಷಿಪ್ರೇಮಿಗಳನ್ನು ಆಕರ್ಷಿಸಲು ಕಾರಣವಾಗಿದೆ. ಪಕ್ಷಿಗಳ ಫೋಟೊ ತೆಗೆಯಲೆಂದೇ ಮಾಗಡಿ ಕೆರೆಗೆ ತೆರಳಿದ ಫೋಟೊಗ್ರಾಫರ್‌ ಸಾದಿಕ್‌ ಕನಕಗಿರಿ ಅವರಿಗೆ ಕೊರಳಲ್ಲಿ ಟ್ಯಾಗ್ ಇರುವ ಹಕ್ಕಿಯೇ ಕಣ್ಣಿಗೆ ಬಿದ್ದಿರುವುದು ವಿಶೇಷ.

ಹಕ್ಕಿಯ ಕೊರಳಲ್ಲಿ ಟ್ಯಾಗ್ ನೋಡಿ ಕುತೂಹಲಗೊಂಡ ಫೋಟೊಗ್ರಾಫರ್‌ ಹಕ್ಕಿಯ ಫೋಟೊವನ್ನು ಮುಂಬಯಿಯ ಬಿಎನ್‌ಎಚ್‌ಎಸ್‌ (ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ)ಗೆ ಕಳುಹಿಸಿದ್ದಾರೆ. ಅಲ್ಲಿನ ವಿಜ್ಞಾನಿಗಳು ಪರಿಶೀಲಿಸಿದಾಗ, ಮುಂಗೋಲಿಯಾ ವಿಜ್ಞಾನಿಗಳು ಈ ಹಕ್ಕಿಗೆ 2013ರಲ್ಲಿ ಟ್ಯಾಗ್‌ ಅಳವಡಿಸಿರುವುದು ತಿಳಿದು ಬಂದಿದೆ.

ಕೆರೆಯ ಪಕ್ಕವೇ ವಾಸವಿದ್ದರೂ ಮೀನು ತಿನ್ನೋದಿಲ್ಲ ಈ ಹಕ್ಕಿ ಪಟ್ಟೆ ತಲೆ ಹೆಬ್ಬಾತು (ಬಾರ್‌ ಹೆಡೆಡ್‌ ಗೂಸ್‌) ಶುದ್ಧ ಸಸ್ಯಹಾರಿ ಹಕ್ಕಿಯಾಗಿದೆ. ಕೆರೆಯಲ್ಲಿ ಮಿಂದೆಂದ್ದರೂ ಮೀನು ತಿನ್ನುವುದಿಲ್ಲ ಎಂಬುದು ವಿಶೇಷ. ಕೆರೆ ದಡದಲ್ಲಿ ವಾಸವಾಗುವ ಈ ಹಕ್ಕಿ, ಸುತ್ತಲಿನ 10ರಿಂದ 20 ಕಿ.ಮೀ. ದೂರದ ಜಮೀನುಗಳಿಗೆ ತೆರಳಿ ತನ್ನ ಆಹಾರ ಹುಡುಕಿಕೊಳ್ಳುತ್ತದೆಯಂತೆ. ಈ ಹಕ್ಕಿ ಶೇಂಗಾ ತಿನ್ನಲು ಇಷ್ಟ ಪಡುತ್ತದೆ ಎನ್ನುವುದು ವಿಶೇಷ. ನವೆಂಬರ್‌ ನಂತರ ಮುಂಗೋಲಿಯಾದಲ್ಲಿ ಮಂಜು ಕವಿದ ವಾತಾವರಣ ಇರುವುದರಿಂದ ಅಲ್ಲಿಂದ ಆಗಮಿಸುವ ಪಟ್ಟೆತಲೆ ಹೆಬ್ಬಾತುಗಳು ಮಾರ್ಚ್ ವೇಳೆಗೆ ಮತ್ತೆ ತವರು ದೇಶಕ್ಕೆ ಮರಳುತ್ತವೆ. ಐದು ತಿಂಗಳು ಭಾರತದಲ್ಲೇ ನೆಲೆಸಿ, ಸಂತಾನೋತ್ಪತ್ತಿ ಮಾಡಿ ಮರಿಗಳೊಂದಿಗೆ ಮತ್ತೆ ಮಂಗೋಲಿಯಾದತ್ತ ತೆರಳುತ್ತವೆ ಎನ್ನುತ್ತಾರೆ ಪಕ್ಷಿಪ್ರೇಮಿಗಳು.

ಹಿಮಾಲಯ ಪರ್ವತ ದಾಟಿ ಕಬಿನಿಗೆ ಬರುತ್ತವೆ ಈ ಹೆಬ್ಬಾತುಗಳು; ಆಹಾರಕ್ಕಾಗಿ 8 ಸಾವಿರ ಕಿ.ಮೀ ಸಂಚಾರ