ಬೆಂಗಳೂರು: ಸ್ವಪಕ್ಷದ ಶಾಸಕರು ಹಾಗೂ ಮುಖ್ಯಮಂತ್ರಿಗಳ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿ, ಬಿಜೆಪಿ ಪಕ್ಷವನ್ನು ಮುಜುಗರಕ್ಕೆ ಈಡುಮಾಡಿದ್ದ ಬಸನಗೌಡ ಪಾಟೀಲ ಯತ್ನಾಳ್, ತಾವು ದೆಹಲಿಗೆ ಹೋದ ಕಾರಣವನ್ನು ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಬಿಚ್ಚಿಟ್ಟಿದ್ದಾರೆ. ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಶಿಶು ನಿಕೇತನ ಶಾಲೆಯ ಸಿಬಿಎಸ್ಇ (CBSE) ನೋಂದಣಿಯ ತುರ್ತು ಕಾರ್ಯ ನಿಮಿತ್ತ ದೆಹಲಿಗೆ ಬಂದಿದ್ದೆನೆ ಎಂದು ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯದ ಸಮಾವೇಶದಲ್ಲಿ ಇಡೀ ದಿನ ಅಬ್ಬರಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾತ್ರಿಯಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ಸರ್ಕಾರದ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಕ್ಕೆ ಹೈಕಮಾಂಡ್ನಿಂದ ಯತ್ನಾಳ್‌ಗೆ ಬುಲಾವ್ ಬಂದಿದೆ ಎಂದು ಹೇಳಲಾಗಿತ್ತು. ಫೆ.21ರ ಭಾನುವಾರ ರಾತ್ರಿ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದಾರೆ ಎಂದು ತಿಳಿಯಲಾಗಿತ್ತು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಬಸನಗೌಡ ಪಾಟೀಲ್ ಯತ್ನಾಳ್ ಭೇಟಿಯಾಗಿದ್ದಾರೆ. ಭೇಟಿಯ ವೇಳೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚಿಸಿದ್ದಾರೆ ಎಂಬ ಮಾತು ಹರಿದಾಡಿತ್ತು. ಆದರೆ ಇಡೀ ದಿನ ಯತ್ನಾಳ್ ಎಲ್ಲಿದ್ರು? ಎಲ್ಲಿಗೆ ಹೋಗಿದ್ರು ಎಂಬ ಸುಳಿವಂತೂ ಸಿಕ್ಕಿರಲಿಲ್ಲ.
ತಂದೆ-ಮಗನಿಂದ ಅಪಪ್ರಚಾರ
ಇದೀಗ, ಖುದ್ದು ಯತ್ನಾಳ್ ಈ ಬಗ್ಗೆ ಫೇಸ್ಬುಕ್ ಪೋಸ್ಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಹೈಕಮಾಂಡ್ ನನ್ನನ್ನು ಕರೆದಿಲ್ಲ. ನಾನು ಯಾವುದೇ ನಾಯಕರ ಭೇಟಿಗೆ ಸಮಯ ಕೇಳಲಿಲ್ಲ. ಮಾಧ್ಯಮಗಳಲ್ಲಿ ತಂದೆ ಮತ್ತು ಮಗ ಸುಳ್ಳು ಸುದ್ದಿ ಮಾಡಿಸಿ ಬಲ್ಲ ಮೂಲಗಳಿಂದ ಎಂದು ಹೇಳಿಸಿ ಮತ್ತು ಬರೆಸಿ ರಾಜ್ಯದ ಜನರಲ್ಲಿ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಆತಂಕ ಉಂಟು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ನಾನು ಯಾರನ್ನೂ ಭೇಟಿಯಾಗಿಲ್ಲ ಮತ್ತು ಯಾರ ಸಮಯವನ್ನೂ ಕೇಳಿಲ್ಲ. ಅಟಲ್ ಬಿಹಾರಿ ವಾಜಪೇಯಿ ಹಾಗೂ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ನಾನು ಗೌರವಿಸುತ್ತೇನೆ. ನಾನು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತೇನೆ. ಭ್ರಷ್ಟಾಚಾರ ಮುಕ್ತ ಭಾರತ ರೂಪುಗೊಳ್ಳಬೇಕು ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ಕರ್ನಾಟಕ ರಾಜ್ಯದ ಇಬ್ಬರು ಸಚಿವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಮತ್ತು ನಮ್ಮ ಪೂಜ್ಯರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ ಅದಕ್ಕೆ ಸೂಕ್ತ ಉತ್ತರ ಕೊಡುತ್ತೆನೆ. ಹಿಂದೂ ಸಮಾಜದಲ್ಲಿಯ ಸಾಮಾಜಿಕ ನ್ಯಾಯಕ್ಕಾಗಿ ನನ್ನ ಹೋರಾಟ ನಿಲ್ಲುವುದಿಲ್ಲ. ಅಂಜುವುದಿಲ್ಲ, ಬಗ್ಗುವದು ಇಲ್ಲ ಮತ್ತು ಪಲಾಯನ ಇಲ್ಲವೇ ಇಲ್ಲ ಎಂದು ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ಅಷ್ಟೇ ಅಲ್ಲದೆ, ಯಡಿಯೂರಪ್ಪ, ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಮತ್ತು ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಃ ದೈನ್ಯಂ ನಃ ಪಲಾಯನಂ ಸತ್ಯ ಮೇವ ಜಯತೇ ಎಂಬ ಸಾಲನ್ನು ಕೂಡ ಬರೆದುಕೊಂಡಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ್ ಹಂಚಿಕೊಂಡಿರುವ ಪೋಸ್ಟ್
ಇದನ್ನೂ ಓದಿ: ಯತ್ನಾಳ್ ಕಾಂಗ್ರೆಸ್‌ನ B Team ನಂತೆ ಕೆಲಸ ಮಾಡ್ತಿದ್ದಾರೆ, ಮೀಸಲಾತಿ ಹೋರಾಟಕ್ಕೆ ರಾಜಕೀಯ ಒತ್ತಡ ಸಲ್ಲ: ಮುರುಗೆಶ್ ನಿರಾಣಿ
ಶಾಸಕ ಯತ್ನಾಳ್‌ಗೆ ಹೈಕಮಾಂಡ್ ಕ್ಲಾಸ್, ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ಖಡಕ್ ವಾರ್ನಿಂಗ್
Published On - 7:20 pm, Tue, 23 February 21