ಬೆಂಗಳೂರು: ಬೆಂಗಳೂರಿನಲ್ಲಿ ಒಟ್ಟು ಜನಸಂಖ್ಯೆಗೆ ಅಗತ್ಯವಿರುವಷ್ಟು ಸಾರ್ವಜನಿಕ ಶೌಚಾಲಯಗಳು ಇದೆಯೇ? ಅವುಗಳ ಸ್ಥಿತಿಗತಿಗಳು ಏನು? ಮತ್ತು ಇನ್ನೂ ಎಷ್ಟು ಶೌಚಾಲಯಗಳ ಅವಶ್ಯಕತೆ ರಾರ್ಜಧಾನಿಗೆ ಬೇಕಿದೆ? ಇದೆಲ್ಲದರ ಬಗ್ಗೆ ಸಮೀಕ್ಷೆ ನಡೆಸಿ, ಉತ್ತರಿಸುವಂತೆ ಬಿಬಿಎಂಪಿಗೆ (ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ) ಕರ್ನಾಟಕ ಹೈಕೋರ್ಟ್ ಸೋಮವಾರ ಸೂಚಿಸಿತ್ತು.
ಹೈಕೋರ್ಟ್ ನೀಡಿದ ನಿರ್ದೇಶನದಂತೆ ಜನವರಿ 9, 2021ರ ಒಳಗೆ ಬಿಬಿಎಂಪಿ ಸಾರ್ವಜನಿಕ ಶೌಚಾಲಯಗಳ ಕಾರ್ಯಯೋಜನೆಯ ಸಂಪೂರ್ಣ ವರದಿಯನ್ನು ಸಲ್ಲಿಸಬೇಕಿದೆ. ಹಾಗಿದ್ದರೆ ಹೈಕೋರ್ಟ್ ಸೂಚನೆಗೆ ಬಿಬಿಎಂಪಿ ತಯಾರಿ ಹೇಗಿದೆ?
ಸಾರ್ವಜನಿಕ ಶೌಚಾಲಯದ ನಿರ್ವಹಣೆ ಹೊತ್ತ ಮಾರ್ಷೆಲ್:
ಸಾರ್ವಜನಿಕ ಶೌಚಾಲಯದ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ಜವಾಬ್ದಾರಿಯನ್ನು ರಸ್ತೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮತ್ತು ನಿಯಮಗಳ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವ ಕಾರ್ಯದಲ್ಲಿ ತೊಡಗಿರುವ ಮಾರ್ಷೆಲ್ಗಳಿಗೆ ವಹಿಸಲಾಗಿದೆ. ಅವರನ್ನ ಬಳಸಿಕೊಂಡು ಸಾರ್ವಜನಿಕ ಶೌಚಾಲಯಗಳು ಯಾವ ಎಲ್ಲಾ ಸ್ಥಳಗಳಲ್ಲಿ ಶಿಥಿಲಗೊಂಡಿದೆ, ಶೌಚಾಲಯಗಳ ಸ್ಥಿತಿ ಏನು ಮತ್ತು ಅವುಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಕಾರ್ಯಗಳ ಬಗ್ಗೆ ಹಾಗೂ ಶೌಚಾಲಯಗಳ ದುರಸ್ಥಿಯ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಮಾಡಲಾಗುತ್ತದೆ ಎಂದು ರಂದೀಪ್ ಹೇಳಿದರು.
ಬೆಂಗಳೂರಿನಲ್ಲಿ 500 ಸಾರ್ವಜನಿಕ ಶೌಚಾಲಯಗಳು ಇದೆ. ಅದರಲ್ಲಿ 418 ಶೌಚಾಲಯಗಳು ಬಳಕೆಗೆ ಯೋಗ್ಯವಾಗಿದೆ ಇನ್ನು ಉಳಿದವು ಶಿಥಿಲಗೊಂಡಿದೆ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಇನ್ನು ಎಷ್ಟು ಶೌಚಾಲಯಗಳು ಬೇಕು ಎಂಬುದರ ಮಾಹಿತಿಯನ್ನು ನೀಡುವಂತೆ ನ್ಯಾಯಪೀಠ ತಿಳಿಸಿದೆ.
ಈ ನಿಟ್ಟಿನಲ್ಲಿ ನಾವು ಕೋರ್ಟ್ಗೆ ಸರಿಯಾದ ಮಾಹಿತಿಯನ್ನು ತಲುಪಿಸುತ್ತೇವೆ, ಕೆಲವೊಂದು ನಮ್ಮ ಕೊರತೆಗಳಿದೆ ಅವುಗಳ ಬಗ್ಗೆಯೂ ತಿಳಿಸಿ ಸರಿಪಡಿಸುವಿಕೆಗೆ ಸಮಯಾವಕಾಶ ಪಡೆದುಕೊಳ್ಳುತ್ತೇವೆ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಸರ್ಕಾರದಿಂದ ಎಷ್ಟು ಅನುದಾನ ಬಂದಿದೆ ಎಂಬ ಕುರಿತು ವರದಿಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇವೆ ಎಂದು ರಂದೀಪ್ ಹೇಳಿದರು.
Published On - 12:03 pm, Wed, 2 December 20