AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ಬಿಜೆಪಿ ಮನೆಯೊಂದು ಮೂರು ಬಾಗಿಲು.. ಭಿನ್ನ ಹೇಳಿಕೆಗಳ ಸುಳಿಯಲ್ಲಿ ಸಚಿವರುಗಳು

ನ್ಯಾಯಾಲಯದ ಮೊರೆ ಹೋದವರ ಬಗ್ಗೆ ತಮ್ಮದೇ ಪಕ್ಷದ ಸಚಿವರು ಹಲವು ರೀತಿಯಲ್ಲಿ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಕೋರ್ಟ್ ಮೊರೆ ಹೋದ ಸಚಿವರು ಕೂಡಾ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡಿದ್ದು, ಸದ್ಯ ಗೊಂದಲಕ್ಕೆ ಕಾರಣವಾಗಿದೆ.

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ಬಿಜೆಪಿ ಮನೆಯೊಂದು ಮೂರು ಬಾಗಿಲು.. ಭಿನ್ನ ಹೇಳಿಕೆಗಳ ಸುಳಿಯಲ್ಲಿ ಸಚಿವರುಗಳು
ಬಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್, ಡಿ.ವಿ.ಸದಾನಂದಗೌಡ
sandhya thejappa
|

Updated on: Mar 06, 2021 | 3:49 PM

Share

ಬೆಂಗಳೂರು: ರಮೆಶ್ ಜಾರಕಿಹೊಳಿಗೆ ಸಂಬಂಧಿಸಿದ ಸಿಡಿ ಪ್ರಕರಣ ಹೊರಬರುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ಸಂಪುಟದ ಆರು ಸಚಿವರು (ಭೈರತಿ ಬಸವರಾಜ್, ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್ ಮತ್ತು ಕೆ.ಸಿ.ನಾರಾಯಣಗೌಡ) ರಾಜಕೀಯ ಷಡ್ಯಂತ್ರದ ಗುಮಾನಿ ಬಂದ ಕಾರಣದಿಂದ ತಮ್ಮ ವಿರುದ್ಧ ಯಾವುದೇ ರೀತಿಯ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.

ನ್ಯಾಯಾಲಯದ ಮೊರೆ ಹೋದವರ ಬಗ್ಗೆ ತಮ್ಮದೇ ಪಕ್ಷದ ಸಚಿವರು ಹಲವು ರೀತಿಯಲ್ಲಿ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಕೋರ್ಟ್ ಮೊರೆ ಹೋದ ಸಚಿವರು ಕೂಡಾ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡಿದ್ದು, ಗೊಂದಲಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಸದಾನಂದ ಗೌಡ ಭಿನ್ನ ಅಭಿಪ್ರಾಯ ಕೋರ್ಟ್ ಮೊರೆ ಹೋದ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಕೋರ್ಟ್​ಗೆ ಹೋಗಿ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಯಲಾದ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಕೂಡಲೇ ರಾಜೀನಾಮೆ ಪಡೆದಿದೆ. ಈ ವೇಳೆ ಅನಾವಶ್ಯಕವಾಗಿ ಕೋರ್ಟ್​ಗೆ ಹೋಗುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದರು.

ಪಕ್ಷ ಹಾಗೂ ಸರ್ಕಾರದಲ್ಲಿ ಚರ್ಚೆ ಆಗಿದೆ: ಡಾ.ಕೆ.ಸುಧಾಕರ್ ಇದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪಕ್ಷದ ಪ್ರಮುಖರ ನಿರ್ಧಾರದಂತೆ ನಾವು ಕೋರ್ಟ್ಗೆ ಹೋಗುವ ಬಗ್ಗೆ ಚರ್ಚೆ ಮಾಡಿದ್ದೇವೆ ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ಕೊರತೆ ಇರಬಹುದು ಎಂದು ಹೇಳಿದರು.

ಯಾರನ್ನೂ ಕೇಳಿ ನ್ಯಾಯಾಲಯದ ಮೊರೆ ಹೋಗಿಲ್ಲ: ಬಿ.ಸಿ.ಪಾಟೀಲ್ ಆದರೆ ಸಚಿವ ಡಾ.ಕೆ.ಸುಧಾಕರ್ ನೀಡಿದ್ದ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ನೀಡಿದ್ದು, ನಾವು ಯಾರನ್ನೂ ಕೇಳಿ ನ್ಯಾಯಾಲಯದ ಮೊರೆ ಹೋಗಿಲ್ಲ. ಕೋರ್ಟ್​ಗೆ ಹೋಗಿರುವುದು ನಮ್ಮ ವೈಯಕ್ತಿಕ ತೀರ್ಮಾನ ಎಂದು ಗಂಗಾವತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನೊಂದಿಷ್ಟು ಜನರು ನ್ಯಾಯಾಲಯಕ್ಕೆ ಹೋಗಲಿದ್ದಾರೆ. ಇವತ್ತು ಬ್ಲ್ಯಾಕ್​​ಮೇಲ್ ದಂಧೆ ನಡೆದಿದೆ. ಜಗತ್ತಿನಲ್ಲಿ ಯಾರು ಏನು ಬೇಕಾದರೂ ಮಾಡಬಹುದು. ನಮ್ಮ ತೇಜೋವಧೆ ಮಾಡಲು ಬಹಳ ಜನ ಕಾಯುತ್ತಿದ್ದಾರೆ. ಅದರಲ್ಲಿ ಸರ್ಕಾರ ಕಳೆದುಕೊಂಡವರೇ ಬಹಳ ಜನರಿದ್ದಾರೆ. ಶಾಸಕ ಸಾ.ರಾ.ಮಹೇಶ್​ ಅವರ ಸಚಿವ ಸ್ಥಾನ ಹೋಯಿತು. ಆದ್ದರಿಂದ ಮಹೇಶ್ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಸಾ.ರಾ.ಮಹೇಶ್​ಗೆ ಉತ್ತರ ನೀಡುವಂತಹ ಅವಶ್ಯಕತೆ ಇಲ್ಲ. ಅವರೇನು ದೊಡ್ಡ ವ್ಯಕ್ತಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜಕೀಯ ಪಕ್ಷದಲ್ಲಿ ಇದ್ದದ್ದೆ: ಈಶ್ವರಪ್ಪ ಸಚಿವರು ಏಕೆ ಅರ್ಜಿ ಸಲ್ಲಿಸಿದ್ದಾರೋ ನನಗೆ ಗೊತ್ತಿಲ್ಲ. ಅಶ್ಲೀಲ ದೃಶ್ಯಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀಳುತ್ತದೆ. ಆ ದಿಕ್ಕಿನಲ್ಲಿ ನ್ಯಾಯಾಲಯದ ಮೊರೆ ಹೋಗಿರಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಅಲ್ಲೊಂದು ಇಲ್ಲೊಂದು ಇಂತಹ ಪ್ರಕರಣಗಳು ಎಲ್ಲಾ ರಾಜಕೀಯ ಪಕ್ಷದಲ್ಲಿ ಇದ್ದದ್ದೆ ಎಂದು ಹೇಳಿದರು.

ಷಡ್ಯಂತ್ರಗಳು ನಡೆಯುತ್ತಿವೆ: ಭೈರತಿ ಬಸವರಾಜ್ ನಮ್ಮ ವಿರುದ್ಧ ಕೆಲವು ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ನಮ್ಮ ಅವಶ್ಯಕತೆಗೆ ಕೋರ್ಟ್​ಗೆ ಹೋಗಿದ್ದೇವೆ. ಇದರಲ್ಲಿ ಬೇರೆ ಯಾವುದೇ ವಿಷಯಗಳಿಲ್ಲ. ನಮ್ಮ ಯಾವುದೇ ವಿಷಯಗಳಿದ್ದರೆ ತೋರಿಸಲಿ. ನಾವು 6 ಮಂದಿ ಕೂಡಾ ಕಾಂಗ್ರೆಸ್​ನಿಂದ ಬಂದವರು. ನಮ್ಮ ವಿರುದ್ಧ ಈಗ ಷಡ್ಯಂತ್ರಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮುಜುಗರ ಆಗಬಾರದೆಂಬ ಉದ್ದೇಶದಿಂದ ಕೋರ್ಟ್ ಗೆ ಹೋಗಿದ್ದೇವೆ. ನಮ್ಮ ಕೈ ಬಾಯಿ ಎಲ್ಲವೂ ಶುದ್ಧವಾಗಿವೆ. ನಮ್ಮ ಬಗ್ಗೆ ಯಾವುದೇ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ನಾವೆಲ್ಲರೂ ಸರಕಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಿವಿ. ವಿರೋಧ ಪಕ್ಷದವರು ನಮ್ಮನ್ನ ಗುರಿಯಾಗಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.

ಸದ್ಯ ಸಚಿವ ಡಾ.ಕೆ.ಸುಧಾಕರ್ ನೀಡಿದ ಹೇಳಿಕೆ ಮತ್ತು ಬಿ.ಸಿ.ಪಾಟೀಲ್ ನೀಡಿದ ಹೇಳಿಕೆ ಭಿನ್ನವಾಗಿದ್ದು, ಗೊಂದಲಗಳು ಮನೆ ಮಾಡಿವೆ. ಅಲ್ಲದೇ ಯಾವ/ ಯಾರ ಮಾಹಿತಿ / ಮಾತು ನೈಜತೆಯಿಂದ ಕೂಡಿದೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ

ತಪ್ಪು ಮಾಡದೆ ಇದ್ರೆ ನೀವ್ಯಾಕೆ ನ್ಯಾಯಾಲಯಕ್ಕೆ ಹೋದ್ರಿ? ವಿಧಾನಸಭೆ ಕಲಾಪದಲ್ಲಿ ಇದನ್ನ ಪ್ರಶ್ನಿಸುತ್ತೇವೆ: ಸಾ.ರಾ.ಮಹೇಶ್

6 ಸಚಿವರು ಕೋರ್ಟ್​ಗೆ ಮೊರೆ: ಅನಾವಶ್ಯಕವಾಗಿ ಕೋರ್ಟ್​ಗೆ ಹೋಗುವುದು ಒಳ್ಳೆಯದಲ್ಲ -ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ