West Bengal Elections 2021: ಬಾಲಿವುಡ್ ‘ಡಿಸ್ಕೋ ಡಾನ್ಸರ್’ ಮಿಥುನ್ ಚಕ್ರವರ್ತಿ ಬಿಜೆಪಿ ಜತೆ ಹೆಜ್ಜೆಹಾಕುವ ಸಂಭವ

Mithun Chakraborty: 2014ರಲ್ಲಿ ಇದೇ ಮಮತಾ ಬ್ಯಾನರ್ಜಿ ಮಿಥುನ್ ಚಕ್ರವರ್ತಿ ಅವರನ್ನು ಟಿಎಂಸಿಯಿಂದ ರಾಜ್ಯಸಭಾ ಸಂಸದರನ್ನಾಗಿ ನೇಮಿಸಿತ್ತು. ಆದರೆ ಶಾರದಾ ಚಿಟ್ ಫಂಡ್ ಹಗರಣ ಹೊರಬಿದ್ದಂತೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

West Bengal Elections 2021: ಬಾಲಿವುಡ್ 'ಡಿಸ್ಕೋ ಡಾನ್ಸರ್' ಮಿಥುನ್ ಚಕ್ರವರ್ತಿ ಬಿಜೆಪಿ ಜತೆ ಹೆಜ್ಜೆಹಾಕುವ ಸಂಭವ
ಪ್ರಸಿದ್ಧ ನಟನನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರಾ ಪ್ರಧಾನಿ?
Follow us
|

Updated on:Mar 06, 2021 | 6:00 PM

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪವಿತ್ರ ಭೂಮಿಯಲ್ಲಿ ಈಗ ಪಕ್ಷಾಂತರ ಪರ್ವ. ಟಿಎಂಸಿ-ಬಿಜೆಪಿ ಎಂಬೆರಡು ಪಕ್ಷಗಳ ನಡುವೆ ಕನಸಲ್ಲೂ ಎಣಿಸದಷ್ಟು ಹಗ್ಗಜಗ್ಗಾಟ. ದಿನ ಬೆಳಗಾದರೆ ಯಾವ ಕಲಾವಿದರು, ನಿರ್ದೇಶಕರು ಅಥವಾ ಜನಪ್ರಿಯ ವ್ಯಕ್ತಿ ಯಾವ ರಾಜಕೀಯ ಪಕ್ಷ ಸೇರುತ್ತಾರೆ ಎಂದು ಹೇಳಲಾಗದು, ಅಷ್ಟು ಕದನ ಕುತೂಹಲ. ತನ್ನೆಲ್ಲ ಪಟ್ಟುಗಳನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ ಇದೀಗ ‘ಮಿಥುನ ಬಾಣ’ ಹೂಡಲು ಸಜ್ಜಾಗಿದೆ. ನಾಳೆ ಕೋಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಡೆಸಲಿರುವ ಪ್ರಚಾರ ಮೆರವಣಿಗೆಯಲ್ಲಿ ಬಾಲಿವುಡ್​ನ ಪ್ರಸಿದ್ದ ತಾರೆ, ‘ಡಿಸ್ಕೋ ಡಾನ್ಸರ್​ನ ಜಿಮ್ಮಿ’ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಪ್ರಧಾನಿಯವರ ಸಮ್ಮುಖದಲ್ಲಿ ಅದೇ ವೇದಿಕೆಯಲ್ಲಿ ನಕ್ಸಲ್ ಚಳವಳಿ ಹಿನ್ನೆಲೆಯ ಮಿಥುನ್ ಚಕ್ರವರ್ತಿ ಕಮಲ ಪಾಳಯಕ್ಕೆ ಜಿಗಿಯುವ ಸಾಧ್ಯತೆಗಳನ್ನು ಸಹ ತಳ್ಳಿಹಾಕುವಂತಿಲ್ಲ.

ಭಾರತದ ಸಿನಿಮಾ ಉದ್ಯಮದಲ್ಲಿ ಮಿಥುನ್ ಚಕ್ರವರ್ತಿಯವರ ಹೆಸರು ಅಪರಿಚಿತವೇನಲ್ಲ. 1976ರಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ ಅವರ ಮೃಗಯಾ ಚಿತ್ರದ ಮೂಲಕ ಹಿರಿತೆರೆಯ ಮೇಲೆ ಕಾಣಿಸಿಕೊಂಡ ಮಿಥುನ್ ಚಕ್ರವರ್ತಿ ಅದಕ್ಕೂ ಮುನ್ನ ನಕ್ಸಲ್ ಚಳವಳಿ ಸೇರಿದ್ದರು ಎಂಬುದು ಬಹುತೇಕರು ಮರೆತ ವಿಷಯ. ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್​ಟಿಟ್ಯೂಟ್​ನಲ್ಲಿ ಪದವಿ ಪಡೆದ ಅವರು, ಸಿನಿಮಾ ರಂಗ ಸೇರುವುದಕ್ಕೂ ಮುಂಚೆ ನಕ್ಸಲ್ ಚಳವಳಿ ಸೇರಿದ್ದರು. ಆದರೆ, ಅವರ ಸಹೋದರ ಅಪಘಾತವೊಂದರಲ್ಲಿ ಮೃತಪಟ್ಟ ನಂತರ ನಕ್ಸಲ್ ಚಳವಳಿ ತ್ಯಜಿಸಿ, ಮರಳಿ ಮನೆ ಸೇರಿದರು ಎನ್ನುತ್ತದೆ ಇತಿಹಾಸ. ಕುಖ್ಯಾತ ನಕ್ಸಲ್​ ಹೋರಾಟಗಾರ ರವಿ ರಂಜನ್ ಅವರ ಪ್ರೀತಿಯ ಆಪ್ತರಕ್ಷಕನೂ ಆಗಿ ಮಿಥುನ್ ಚಕ್ರವರ್ತಿ ಕೆಲ ಕಾಲ ಕೆಲಸ ನಿರ್ವಹಿಸಿದ್ದರು.

ಜಿಮ್ಮಿಯನ್ನು ಮರೆಯಲಾದೀತೇ?

ಡಿಸ್ಕೊ ಡಾನ್ಸರ್ ಎಂದರೆ ಈಗಲೂ ಥಟ್ ಎಂದು 1980ರ ದಶಕದ ಜಿಮ್ಮಿಯ ಕುಣಿತವೇ ಕಣ್ಣಿಗೆ ಕಟ್ಟುತ್ತದೆ. ಡಿಸ್ಕೋ ಡಾನ್ಸರ್  ಮಿಥುನ್​ ಚಕ್ರವರ್ತಿ ಅವರಿಗೆ ಅಷ್ಟು ಪ್ರಸಿದ್ಧಿ ಗಳಿಸಿಕೊಟ್ಟಿತ್ತು. ಕೇವಲ ಹಿಂದಿ ಒಂದೇ ಅಲ್ಲದೇ, ಬೆಂಗಾಳಿ ಭಾಷೆಯಲ್ಲೂ ಅವರು ಹಲವು ಹಿಟ್ ಸಿನಿಮಾ ನೀಡಿದ್ದರು. 2014ರಲ್ಲಿ ಇದೇ ಮಮತಾ ಬ್ಯಾನರ್ಜಿ ಮಿಥುನ್ ಚಕ್ರವರ್ತಿ ಅವರನ್ನು ಟಿಎಂಸಿಯಿಂದ ರಾಜ್ಯಸಭಾ ಸಂಸದರನ್ನಾಗಿ ನೇಮಿಸಿತ್ತು. ಆದರೆ ಶಾರದಾ ಚಿಟ್ ಫಂಡ್ ಹಗರಣ ಹೊರಬಿದ್ದಂತೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈಗ ಇದೇ ಮಿಥುನ್ ಚಕ್ರವರ್ತಿ ನಾಳೆ (ಮಾರ್ಚ್ 7) ಬಿಜೆಪಿ ಸೇರುವ ಊಹೆಗಳು ದಟ್ಟವಾಗಿವೆ.

ಬಿಜೆಪಿಗೆ ಬೆಂಗಾಲಿ ಮುಖದ ಅನಿವಾರ್ಯತೆ

ಸದ್ಯ ಬಿಜೆಪಿಯನ್ನು ಪಶ್ಚಿಮ ಬಂಗಾಳದಲ್ಲಿ ‘ಹೊರಗಿನ ಪಕ್ಷ’ವನ್ನಾಗಿ ನೋಡಲಾಗುತ್ತಿದೆ. ಟಿಎಂಸಿ ಬಂಗಾಳದ ನೆಲದ ಪಕ್ಷವೆಂದೂ, ಮಮತಾ ಬ್ಯಾನರ್ಜಿ ಬಂಗಾಳದ ಮಗಳೆಂದು ತನ್ನನ್ನು ತಾನು ಬಿಂಬಿಸಿಕೊಂಡಿದೆ. ಸ್ವಾಭಿಮಾನಿ ಬಂಗಾಳಿಗರು, ನೆಲದ ಮಣ್ಣಿನವರನ್ನು ಬಿಟ್ಟು ಹೊರಗಿನವರಿಗೆ ಮಣೆ ಹಾಕುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಪದೇ ಪದೇ ಘೋಷಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಬಿಜೆಪಿಗೆ ಅಪ್ಪಟ ಬಂಗಾಳದ ಮುಖಗಳ ತುರ್ತು ಅಗತ್ಯವಿದೆ.

ಅದೇ ಕಾರಣಕ್ಕೆ, ಬಂಗಾಳದ ಕಲಾವಿದರು, ನಿರ್ದೇಶಕರನ್ನು ಆಯಸ್ಕಾಂತದಂತೆ ವಶಪಡಿಸಿಕೊಳ್ಳುತ್ತಿದೆ ಬಿಜೆಪಿ. ಬಂಗಾಳದ ಚಿತ್ರರಂಗ ಬಹುಕಾಲದಿಂದ ಬಳಿದ ಬಣ್ಣವನ್ನೇ ಬಳಿದುಕೊಂಡು ಏಕತಾನತೆಯಲ್ಲಿ ಬಳಲಿತ್ತೇನೊ ಎಂಬಂತೆ ಹೊಸ ಬಣ್ಣಕ್ಕಾಗಿ ತುದಿಗಾಲಲ್ಲಿ ಕುಳಿತಂತೆ ವರ್ತಿಸುತ್ತಿದೆ. ಕೇಸರಿ ಬಣ್ಣ ಬಳಿದುಕೊಳ್ಳಲು ತೀವ್ರಾಸಕ್ತರಾಗಿರುವ ಕಲಾವಿದರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಬಿಜೆಪಿಯ ಅನಿವಾರ್ಯತೆ, ಕಲಾವಿದರ ಅವಶ್ಯಕತೆ ಎರಡೂ ಒಂದಕ್ಕೊಂದು ಸರಿ ಹೊಂದಿದೆ.

ಸದ್ಯದ ಊಹೆಗಳು, ಬಿಜೆಪಿ ಬಿಟ್ಟುಕೊಟ್ಟಿರುವ ಸುಳುಹು ಎಲ್ಲವೂ ನಿಜವೇ ಆದಲ್ಲಿ ಹಿಂದೊಮ್ಮೆ ನಕ್ಸಲ್ ಚಳವಳಿಯ ಸಂಪರ್ಕ ಹೊಂದಿದ್ದ ಮಿಥುನ್ ಚಕ್ರವರ್ತಿ ಕೇಸರಿ ಪಾಳಯ ಸೇರಲಿದ್ದಾರೆ!

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ

West Bengal Elections 2021 | ನಂದಿಗ್ರಾಮ ಏಕಿಷ್ಟು ಪ್ರಮುಖ? ದೀದಿಗೆ ಎದುರಾಗಲಿದ್ದಾರಾ ಸುವೇಂದು? ಪ್ರಧಾನಿ ಕೈಲಿದೆ ನಿರ್ಧಾರ

Published On - 5:53 pm, Sat, 6 March 21