ಮುಹೂರ್ತ ಫಿಕ್ಸ್ ಮಾಡಿ ನಾಲ್ವರು ಸಿಬ್ಬಂದಿ ಮನೆಗಳ ಮೇಲೆ ದಾಳಿ ಮಾಡಿದೆವು: BDA ಅಧ್ಯಕ್ಷ ಎಸ್ ಆರ್ ವಿಶ್ವನಾಥ್
ಅಕ್ರಮದಲ್ಲಿ ಭಾಗಿಯಾಗಿದ್ದ ಬಿಡಿಎ ಅಧಿಕಾರಿಗಳ ಮನೆ ಮೇಲೆ ಬಿಡಿಎ ಕಮಿಷನರ್ ಹೆಚ್.ಆರ್. ಮಹದೇವ್ ಮತ್ತು ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಫ್ಲಾನ್ ಫಿಕ್ಸ್ ಮಾಡಿಕೊಂಡೇ ದಾಳಿ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ.
ಬೆಂಗಳೂರು: ಬಿಡಿಎ ಜಾಗೃತ ದಳ ಮತ್ತು ಪೊಲೀಸರು ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಬಿಡಿಎ ಅಧಿಕಾರಿಗಳ ಮನೆ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಿದ್ದು, ಮೇಲ್ನೋಟಕ್ಕೆ ನೂರಾರು ಕೋಟಿ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ.
‘ಬಿಡಿಎ ಅಧಿಕಾರಿಗಳ ಮನೆ ಮೇಲಿನ ದಾಳಿಯಲ್ಲಿ 10 ಲಕ್ಷ ನಗದು ಪತ್ತೆಯಾಗಿದೆ. ಬಿಡಿಎ ನಲ್ಲಿ ಆಗಬೇಕಾದ ಅಲಾಟ್ಮೆಂಟ್ ಪತ್ರಗಳನ್ನು ತಯಾರಿಸುತ್ತಿದ್ದ ದಾಖಲೆಗಳು ಸಿಕ್ಕಿವೆ. ಇನ್ನೂ ಹೆಚ್ಚಿನ ಪರಿಶೀಲನೆ ಮುಂದುವರೆದಿದೆ’ ಎಂದು ಬಿಡಿಎ ಕಮಿಷನರ್ ಹೆಚ್.ಆರ್. ಮಹದೇವ್ ಹೇಳಿದರು.
ಮುಹೂರ್ತ ಫಿಕ್ಸ್ ಮಾಡಿಯೇ ದಾಳಿ ಮಾಡಿದ್ವಿ.. ಮಾಧ್ಯಮದವರೊಂದಿಗೆ ಮಾತನಾಡಿದ BDA ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ‘ನಾನು ಮತ್ತು ಪೊಲೀಸ್ ಆಯುಕ್ತರು ಮುಹೂರ್ತ ಫಿಕ್ಸ್ ಮಾಡಿಕೊಂಡು BDA ಸಿಬ್ಬಂದಿ ಮನೆ ಮೇಲೆ ದಾಳಿ ಮಾಡಿದ್ದೇವೆ. ಉಪಕಾರ್ಯದರ್ಶಿ ಮತ್ತು ತಹಶೀಲ್ದಾರರೊಬ್ಬರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ’ ಎಂದು ತಿಳಿಸಿದರು.
ಇಂದರ್ ಎಂಬ ಏಜೆಂಟ್ ಜೊತೆ ಸೇರಿ ಅಧಿಕಾರಿಗಳು ಅಕ್ರಮ ಎಸಗಿರುವುದು ಪತ್ತೆಯಾಗಿದೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ತಕ್ಷಣ ಸಸ್ಪೆಂಡ್ ಮಾಡಲಾಗುವುದು ಎಂದು ಅವರು ಹೇಳಿದರು.
ಯಾರ ಮನೆ ಮೇಲೆ ನಡೆದಿದೆ ದಾಳಿ?
ಡಿ ಎಸ್ ಶಿವೇಗೌಡ, ತಹಶೀಲ್ದಾರ್ ಕಮಲಮ್ಮ ಮನೆ ಗುಮಾಸ್ತರಾದ ಪವಿತ್ರ, ಸಂಪತ್ರ ಬಳಿ ಅಕ್ರಮದ ಸುಳಿವು ಸಿಕ್ಕಿದ್ದ ಕಾರಣ ಬಿಡಿಎ ಜಾಗೃತ ದಳ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು.