ಸಿಟ್ಟಿಗೆದ್ದ ಸಿದ್ದು: ಭಾಷಣಕ್ಕೆ ಕೌಂಟರ್​ ಕೊಡುತ್ತಿದ್ದವನನ್ನು ಸಭೆಯಿಂದ ಹೊರಗೆ ಕಳಿಸಿದ ಸಿದ್ದರಾಮಯ್ಯ

| Updated By: Srinivas Mata

Updated on: Apr 10, 2021 | 2:05 PM

Belagavi By Election: ವೇದಿಕೆ ಸಮೀಪ ಕುಳಿತಿದ್ದ ವ್ಯಕ್ತಿಯೊಬ್ಬ ಸಿದ್ದರಾಮಯ್ಯ ಅವರ ಪ್ರತಿ ಹೇಳಿಕೆಗೂ ಕೌಂಟರ್ ಕೊಡುತ್ತಿದ್ದ. ಇದು ಸಿದ್ದರಾಮಯ್ಯ ಅವರಿಗೆ ಕಿರಿಕಿರಿ ಎನಿಸುತ್ತಿತ್ತು.

ಸಿಟ್ಟಿಗೆದ್ದ ಸಿದ್ದು: ಭಾಷಣಕ್ಕೆ ಕೌಂಟರ್​ ಕೊಡುತ್ತಿದ್ದವನನ್ನು ಸಭೆಯಿಂದ ಹೊರಗೆ ಕಳಿಸಿದ ಸಿದ್ದರಾಮಯ್ಯ
ಯಡಿಯೂರಪ್ಪ ‘ಕುತ್ತಾ’ ಎಂದ ಸಿದ್ದರಾಮಯ್ಯ; ನಾನು ಸಿಎಂ ಆಗಿದ್ರೆ ನಿರ್ಮಲಾ ಸೀತಾರಾಮನ್​ ಮನೆ ಮುಂದೆ ಪ್ರತಿಭಟನೆ ಮಾಡ್ತಾಯಿದ್ದೆ ಎಂದರು
Follow us on

ಬೆಳಗಾವಿ: ಜಿಲ್ಲೆಯ ರಾಮದುರ್ಗದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಪ್ರಚಾರ ಭಾಷಣ ಮಾಡಿದರು. ಈ ವೇಳೆ ವೇದಿಕೆ ಸಮೀಪ ಕುಳಿತಿದ್ದ ವ್ಯಕ್ತಿಯೊಬ್ಬ ಸಿದ್ದರಾಮಯ್ಯ ಅವರ ಪ್ರತಿ ಹೇಳಿಕೆಗೂ ಕೌಂಟರ್ ಕೊಡುತ್ತಿದ್ದ. ಇದು ಸಿದ್ದರಾಮಯ್ಯ ಅವರಿಗೆ ಕಿರಿಕಿರಿ ಎನಿಸುತ್ತಿತ್ತು. ಕೊನೆಗೊಮ್ಮೆ ತಾಳ್ಮೆ ಕಳೆದುಕೊಂಡು ಅವನನ್ನು ಹೊರಗೆ ಕಳಿಸಿ ಎಂದು ಪೊಲೀಸರಿಗೆ ಸೂಚಿಸಿದರು.

ಪೊಲೀಸರು ಆ ವ್ಯಕ್ತಿಗೆ ಸುಮ್ಮನಿರುವಂತೆ ಸೂಚಿಸಿದರೂ ಆತ ಸುಮ್ಮನಾಗಲಿಲ್ಲ. ‘ಏಯ್ ಕಳಿಸ್ರೀ ಅವನನ್ನ, ಕುಡುದ್ಬುಟ್ಟು ಬಂದಿದಾನೆ’ ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಬೇಕಾಯಿತು. ‘ಏಳಿಸಿ ಕಳಿಸಿ’ ಎಂದು ಸಿಟ್ಟಿನಲ್ಲಿ ಹೇಳಿದರು. ಆತನನ್ನು ಪೊಲೀಸರು ಹೊರಗೆ ಕರೆದೊಯ್ಯುವಾಗಲೂ ಸಿದ್ದರಾಮಯ್ಯ ಸಿಟ್ಟು ಕಡಿಮೆಯಾಗಿರಲಿಲ್ಲ.

ಸಾರಿಗೆ ಸಿಬ್ಬಂದಿ ಸಮಸ್ಯೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈವರೆಗೆ ಬಗೆಹರಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಖಾಸಗಿ ಬಸ್ ಪಡೆಯುತ್ತೇವೆಂದು ನೌಕರರನ್ನು ಹೆದರಿಸುತ್ತಿದ್ದಾರೆ. ಸಾರಿಗೆ ಸಿಬ್ಬಂದಿ ಸಮಸ್ಯೆ ಪರಿಹರಿಸಲು ಆಗದಿದ್ರೆ ಇವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆಯನ್ನೇ ಕಳೆದುಕೊಳ್ಳುತ್ತಾರೆ. ನಾವು ಅಧಿಕಾರದಲ್ಲಿ ಮುಷ್ಕರ ನಡೆದಾಗ ಮೂರೇ ದಿನಗಳಲ್ಲಿ ಇತ್ಯರ್ಥ ಮಾಡಿದ್ದೆವು ಎಂದು ಹೇಳಿದರು.

ಏಕವಚನದಲ್ಲಿ ವಾಗ್ದಾಳಿ
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಯಾವತ್ತೂ ಮುಂಬಾಗಿಲಿನಿಂದ‌ ಬಂದೇ ಇಲ್ಲ. ಅವನು ಯಾವಾಗಲೂ ಹಿಂಬಾಗಿಲಿಂದಲೇ ಬರೋದು ಎಂದು ಟೀಕಿಸಿದರು. ಒಬ್ಬೊಬ್ಬ ಶಾಸಕನಿಗೂ 40 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. 40 ಕೋಟಿ ಕೊಡಲು ಬಿಎಸ್‌ವೈಗೆ ಎಲ್ಲಿಂದ ದುಡ್ಡು ಬಂತು? ವಿಜಯೇಂದ್ರ RTGS ಮೂಲಕ ನೇರವಾಗಿ ಲಂಚ ತಗೋತಾನೆ. 7 ಕೆ.ಜಿ ಅಕ್ಕಿ ಕೊಟ್ರೆ ಇವರ ಅಪ್ಪನ ಮನೆ ಗಂಟು ಹೋಗುತ್ತಿತ್ತಾ? 2023ರಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ, 10 ಕೆ.ಜಿ ಕೊಡುತ್ತೇನೆ ಎಂದು ಹೇಳಿದರು.

ನಮ್ಮ ಅವಧಿಯಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿರಲಿಲ್ಲ. ಇನ್ನೊಂದು ಸಲ ಗೆದ್ದರೆ ಅಶೋಕ್ ಪಟ್ಟಣ್ ಮಂತ್ರಿಯಾಗ್ತಾನೆ. ಕ್ಷೇತ್ರದ ಈಗಿನ ಶಾಸಕ ಟೋಪಿ ಹಾಕೊಂಡು ತಿರುಗಾಡುತ್ತಾನೆ. ಆಶೋಕ್ ಪಟ್ಟಣ್ ಸೋಲಿಸಲು ನಿಮಗೆ ಹೇಗೆ ಮನಸ್ಸು ಬಂತು? ಎಂದು ಪ್ರಶ್ನಿಸಿದರು.

ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಬಿಜೆಪಿಯಿಂದ ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ ಅಂಗಡಿ, ಕಾಂಗ್ರೆಸ್​ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದ್ದಾರೆ.

(Belagavi By Election Congress Leader Siddaramaiah in Ramdurg Rally)

ಇದನ್ನೂ ಓದಿ: ಲಖನ್ ಜಾರಕಿಹೊಳಿ‌ ಅವರಿಗೆ ಒಳ್ಳೆಯದಾಗಲಿ – ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ

ಇದನ್ನೂ ಓದಿ: ವಿಜಯೋತ್ಸವಕ್ಕೆ ಮತ್ತೆ ಬರ್ತೀನಿ: ಬೆಳಗಾವಿಯಲ್ಲಿ ಗೆಲುವಿನ ಆತ್ಮವಿಶ್ವಾಸ ಪ್ರದರ್ಶಿಸಿದ ಸಿಎಂ ಯಡಿಯೂರಪ್ಪ

Published On - 8:47 pm, Fri, 9 April 21