ತುಂಬಿದ ಬಿಎಂಟಿಸಿ ಬಸ್​ಗಳಲ್ಲಿ ಟಿಕೆಟ್ ಪಡೆಯದಿದ್ದರೆ ಪ್ರಯಾಣಿಕರೇ ಹೊಣೆ: ಕಂಡಕ್ಟರ್​ಗೆ ಇಲ್ಲ ದಂಡ

|

Updated on: Mar 05, 2021 | 8:40 PM

ಬಸ್ ಸೀಟ್ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಯಾಣಿಕರು ಇರುವ ಸಂದರ್ಭಗಳಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ವೋಲ್ವೊ ಬಸ್​ಗಳಿಗೆ ಈ ಹೊಸ ನಿಯಮ ಅನ್ವಯವಾಗುವುದಿಲ್ಲ.

ತುಂಬಿದ ಬಿಎಂಟಿಸಿ ಬಸ್​ಗಳಲ್ಲಿ ಟಿಕೆಟ್ ಪಡೆಯದಿದ್ದರೆ ಪ್ರಯಾಣಿಕರೇ ಹೊಣೆ: ಕಂಡಕ್ಟರ್​ಗೆ ಇಲ್ಲ ದಂಡ
ಬಿಎಂಟಿಸಿ ಬಸ್​ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್​ಗಳಲ್ಲಿ ಟಿಕೆಟ್ ಪಡೆಯುವುದು ಪ್ರಯಾಣಿಕರ ಹೊಣೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸಿ.ಶಿಖಾ ಆದೇಶ ಹೊರಡಿಸಿದ್ದಾರೆ. ಪರಿಷ್ಕೃತ ಆದೇಶದ ಪ್ರಕಾರ ತಪಾಸಣೆ ವೇಳೆ ಟಿಕೆಟ್ ಇಲ್ಲದ ಪ್ರಯಾಣಿಕರು ಸಿಕ್ಕಿಬಿದ್ದರೆ ಕಂಡಕ್ಟರ್​ಗೆ ಇನ್ನು ಮುಂದೆ ದಂಡ ವಿಧಿಸುವುದಿಲ್ಲ. ಪ್ರಯಾಣಿಕರೇ ದಂಡ ಪಾವತಿಸಬೇಕಾಗುತ್ತದೆ.

ಬಸ್ ಸೀಟ್ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಯಾಣಿಕರು ಇರುವ ಸಂದರ್ಭಗಳಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ವೋಲ್ವೊ ಬಸ್​ಗಳಿಗೆ ಈ ಹೊಸ ನಿಯಮ ಅನ್ವಯವಾಗುವುದಿಲ್ಲ.

ಬಸ್ ಹತ್ತುವ ಪ್ರಯಾಣಿಕರು ಟಿಕೆಟ್ ಕೇಳಿ ಪಡೆಯಬೇಕು. ತಪಾಸಣೆ ವೇಳೆ ಟಿಕೆಟ್ ಇಲ್ಲದ ಪ್ರಯಾಣಿಕರು ಪತ್ತೆಯಾದರೆ ಮೊದಲಿನಂತೆ ಕಂಡಕ್ಟರ್ ವಿರುದ್ಧ ಕರ್ತವ್ಯಲೋಪ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವುದಿಲ್ಲ. ಕಂಡಕ್ಟರ್​ಗೆ ದಂಡವನ್ನೂ ವಿಧಿಸುವುದಿಲ್ಲ. ಟಿಕೆಟ್ ಪಡೆಯುವುದು ಪ್ರಯಾಣಿಕರ ಹೊಣೆಯಾಗಿರುತ್ತದೆ.

ಕೆಲ ಪ್ರಯಾಣಿಕರು ಟಿಕೆಟ್ ಖರೀದಿಸದೆ ಮುಗುಮ್ಮಾಗಿ ಕುಳಿತುಬಿಡುತ್ತಿದ್ದರು. ತಪಾಸಣೆ ವೇಳೆ ಸಿಕ್ಕಿಬಿದ್ದಾಗ, ‘ಕಂಡಕ್ಟರ್​ ಈ ಕಡೆಗೆ ಬರಲೇ ಇಲ್ಲ. ಹಣಕೊಟ್ಟರೂ ಟಿಕೆಟ್ ಕೊಟ್ಟಿಲ್ಲ’ ಎಂದೆಲ್ಲಾ ದೂರುತ್ತಿದ್ದರು. ಇಂಥ ಸಂದರ್ಭಗಳಲ್ಲಿ ತಪಾಸಣೆಗೆ ಬಂದ ಅಧಿಕಾರಿಗಳು ಪ್ರಯಾಣಿಕರಿಗೆ ದಂಡ ವಿಧಿಸಿ, ಕಂಡಕ್ಟರ್​ಗಳನ್ನು ಹೊಣೆ ಮಾಡಿ ವಿಚಾರಣೆಗೆ ಸೂಚಿಸುತ್ತಿದ್ದರು.

ಆದರೆ ಇದೀಗ ಎನ್​ಐಎನ್​ಸಿ ನಿಯಮ ರದ್ದು ಮಾಡಿರುವುದರಿಂದ ಕಂಡಕ್ಟರ್​ ಇಂಥ ಕಂಟಕಗಳಿಂದ ತಪ್ಪಿಸಿಕೊಂಡಂತೆ ಆಗಿದೆ. ಈ ಹಿಂದೆ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾಗ ಎನ್​ಐಎಸಿ ರದ್ದತಿಯ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಇದೀಗ ನೌಕರರ ಬೇಡಿಕೆಗೆ ಬಿಎಂಟಿಸಿ ಒಪ್ಪಿಕೊಂಡಿದೆ.

ಇದನ್ನೂ ಓದಿ: ಆಟಕ್ಕುಂಟು ಲೆಕ್ಕಕ್ಕಿಲ್ಲ ಬಿಎಂಟಿಸಿ ಆ್ಯಪ್! ಇದು MyBMTC ಅಲ್ಲ! Why ಬಿಎಂಟಿಸಿ ಆ್ಯಪ್?

ಇದನ್ನೂ ಓದಿ: Bus Priority Lane: ಆದ್ಯತಾ ಪಥದಲ್ಲಿ ಚಲಿಸದೆ ಟ್ರಾಫಿಕ್ ಸಮಸ್ಯೆಗೆ ಪುಷ್ಟಿ ನೀಡುತ್ತಿರುವ BMTC ಬಸ್ ಸಮಸ್ಯೆಗೆ ಪರಿಹಾರವೇನು?

Published On - 8:36 pm, Fri, 5 March 21