ಚಿಕ್ಕಮಗಳೂರು: ಪಕ್ಷದ ಆಂತರಿಕ ಒಪ್ಪಂದದಂತೆ ಅಧಿಕಾರದ ಅವಧಿ ಪೂರ್ಣಗೊಂಡರೂ ರಾಜೀನಾಮೆ ನೀಡದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಸುಜಾತ ಕೃಷ್ಣಪ್ಪರನ್ನು ಅಮಾನತು ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ನೀವು ಪಕ್ಷದ ತೀರ್ಮಾನವನ್ನು ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿ ಪಕ್ಷದ ಘನತೆಗೆ ಧಕ್ಕೆಯುಂಟಾಗಿದೆ. ಈ ಬಗ್ಗೆ ನೀವು ಖುದ್ದು ಹಾಜರಾಗಿ ಸಮಜಾಯಿಷಿ ನೀಡಲು ಸೂಚಿಸಿದರೂ ಕೂಡ ನೀವು ಸಮಾಜಾಯಿಷಿ ನೀಡಿಲ್ಲ ಎಂದು ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ವಿರುದ್ಧ ಸ್ವಪಕ್ಷೀಯ ಜಿಲ್ಲಾ ಪಂಚಾಯಿತಿ ಸದಸ್ಯರೇ ರಾಜೀನಾಮೆ ನೀಡಬೇಕೆಂದು ತಿರುಗಿ ಬಿದ್ದಿದ್ದರು. ಕಳೆದ ಎರಡು ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆಗಳಿಗೆ ಗೈರಾಗಿದ್ದ ಸದಸ್ಯರು ಇಂದು ನಡೆದ ಮೂರನೇ ಸಭೆಯಲ್ಲಿ ಭಾಗವಹಿಸಿ ಅಧ್ಯಕ್ಷೆ ವಿರುದ್ಧ ಅಸಮಾಧಾನ ಹೊರಹಾಕಿದರು.
ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆ ವೇಳೆ ಸಭಾಂಗಣದ ಬಾವಿಗಿಳಿದು ಅಧ್ಯಕ್ಷೆ ವಿರುದ್ಧ ಧಿಕ್ಕಾರ ಕೂಗಿ ಸಭೆಯಿಂದ ಹೊರ ನಡೆದಿದ್ರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ರಾಜೀನಾಮೆ ನೀಡುವುದಿಲ್ಲ ಎಂದು ಕಡ್ಡಿ ತುಂಡಾದಂತೆ ಹೇಳಿದ್ರು.
ಆದರೆ ಈ ಬೆಳವಣಿಗೆಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿದ್ದ ಚೈತ್ರ ಮಾಲ್ತೇಶ್ ಕೂಡ ಇದೇ ರೀತಿ ರಾಜೀನಾಮೆ ಕೊಡುವುದಿಲ್ಲ ಎಂದು ಹಠ ಹಿಡಿದಿದ್ದರು. ಆಗಲೂ ಅವರನ್ನು ಉಚ್ಚಾಟನೆಯ ಮೂಲಕವೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಪಕ್ಷ ಕೆಳಗಿಳಿಸಿತ್ತು.