ವಿರಾಜಪೇಟೆಯ ವೀರಯೋಧ ಅಲ್ತಾಫ್ ಅವರ ಮಕ್ಕಳು ಮಿಲಿಟರಿ ಪೋಷಾಕಿನಲ್ಲಿ ಅಪ್ಪನಿಗೆ ವಿದಾಯ ಹೇಳಿದರು
ಅಲ್ತಾಫ್ ಅವರು ಇಬ್ಬರು ಮಕ್ಕಳು-ಆಸ್ಮಾ ಜಾಸ್ಮಿನ್ ಮತ್ತು ಮಹ್ಮದ್ ಆಫ್ರಿದ್ ಮಿಲಿಟರಿ ಪೋಷಾಕಿನಲ್ಲಿ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡು ಅಪ್ಪನಿಗೆ ವಿದಾಯ ಹೇಳಿದ್ದು ಮನ ಕಲಕುವಂತಿತ್ತು.
ಇದು ಬಹಳ ಮನಮಿಡಿಯುವ ಸನ್ನಿವೇಶ. ಬುಧವಾರದಂದು ಶ್ರೀನಗರದಲ್ಲಿ (Srinagar) ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಮರಣ ಹೊಂದಿದ ವಿರಾಜಪೇಟೆಯ ವೀರಯೋಧ ಅಲ್ತಾಫ್ (Altaf) ಅವರ ಪಾರ್ಥೀವ ಶರೀರವನ್ನು ಶನಿವಾರ ಅವರ ತವರೂರಿಗೆ ತರಲಾಯಿತು. ವಿರಾಜಪೇಟೆಯ (Virajpet) ತಾಲ್ಲೂಕು ಮೈದಾನದಲ್ಲಿ ಸಕಲ ಮಿಲಿಟರಿ ಮತ್ತು ಸರ್ಕಾರಿ ಗೌರವದೊಂದಿಗೆ ಹುತಾತ್ಮ ಯೋಧನ ಅಂತಿಮ ಸಂಸ್ಕಾರ ನಡೆಸಲಾಯಿತು. ಅಲ್ತಾಫ್ ಅವರು ಇಬ್ಬರು ಮಕ್ಕಳು-ಆಸ್ಮಾ ಜಾಸ್ಮಿನ್ ಮತ್ತು ಮಹ್ಮದ್ ಆಫ್ರಿದ್ ಮಿಲಿಟರಿ ಪೋಷಾಕಿನಲ್ಲಿ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡು ಅಪ್ಪನಿಗೆ ವಿದಾಯ ಹೇಳಿದ್ದು ಮನ ಕಲಕುವಂತಿತ್ತು. ಅಪ್ಪನಷ್ಟೇ ಧೈರ್ಯವಂತೆ ಮಗಳು ಅಲ್ತಾಫ್ ಅವರ ದೇಹ ಇಟ್ಟಿದ್ದ ಶವಪೆಟ್ಟಿಗೆಯ ಫೋಟೋಗಳನ್ನು ತೆಗೆದುಕೊಂಡಳು.
ತಾಲ್ಲೂಕು ಮೈದಾನದಲ್ಲಿ ಪಟ್ಟಣದ ಗಣ್ಯರು, ನಾಗರಿಕರು, ಅಧಿಕಾರಿಗಳು ಮತ್ತು ಹಲವಾರು ನಿವೃತ್ತ ಸೇನಾನಿಗಳು ಅಲ್ತಾಫ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಪಾರ್ಥೀವ ಶರೀರವನ್ನು ಈದ್ಗಾ ಮೈದಾನದವರೆಗೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು.
ಅಲ್ತಾಫ್ ತಮ್ಮ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ವಾಪಸ್ಸಾಗಿದ್ದರೂ ಇನ್ನೂ ದೇಶಸೇವೆ ಮಾಡಬೇಕೆನ್ನುವ ಉತ್ಕಟ ಆಸೆ ಉಂಟಾಗಿ ಪುನಃ ಸೇನೆಗೆ ಸೇರಿದ್ದರು. ಆದರೆ ಬುಧವಾರದಂದು ಅವರು ತಮ್ಮ ಪತ್ನಿಯೊಂದಿಗೆ ಮಾತಾಡುತ್ತಿರುವಾಗಲೇ ಹಿಮಪಾತದಲ್ಲಿ ಸಿಲುಕಿಬಿಟ್ಟರು. ಅವರದ್ದು ಅತ್ಯಂತ ದಾರುಣ ಸಾವು.
ಇದನ್ನೂ ಓದಿ: ಅಲ್ತಾಫ್ ದುರ್ಮರಣದಿಂದ ಕಂಗೆಟ್ಟಿರುವ ಅವರ ಪತ್ನಿ ಜುಬೇರಿಯಾ ರಾಷ್ಟ್ರಧ್ವಜ ಸ್ವೀಕರಿಸುವಾಗ ಕುಸಿದುಬಿದ್ದರು