PPE ಕಿಟ್ ಧರಿಸಿ ಅಪ್ಪನ ಅಂತ್ಯ ಸಂಸ್ಕಾರ ಮಾಡಿದ ಹಿರಿಯ ಮಗಳು
ಚಿಕ್ಕಮಗಳೂರು: ಕೊರೊನಾದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರವನ್ನು ನಾನೇ ಮಾಡಬೇಕೆಂದು ಹಠ ಹಿಡಿದು, ಮಗಳೇ ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಿರುವ ಮನಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಯಲ್ಲಿ ನಡೆದಿದೆ. ಹೃದಯಾಘಾತದಿಂದ ಸೋಂಕಿತ ತಂದೆ ಸಾವು.. ಬೆಂಗಳೂರಿನ ಬಿಡದಿಯ ಟೊಯೋಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೆ ಕೊರೊನಾ ಚಿಕಿತ್ಸೆಯಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗಿ ವ್ಯಾಪಿಸುತ್ತಿದ್ದರಿಂದ ಇತ್ತೀಚಿಗಷ್ಟೆ ಊರಿಗೆ ಬಂದಿದ್ದ ಕುಟುಂಬ, ಇಬ್ಬರು ಹೆಣ್ಣು […]

ಚಿಕ್ಕಮಗಳೂರು: ಕೊರೊನಾದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರವನ್ನು ನಾನೇ ಮಾಡಬೇಕೆಂದು ಹಠ ಹಿಡಿದು, ಮಗಳೇ ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಿರುವ ಮನಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಯಲ್ಲಿ ನಡೆದಿದೆ.

ಹೃದಯಾಘಾತದಿಂದ ಸೋಂಕಿತ ತಂದೆ ಸಾವು.. ಬೆಂಗಳೂರಿನ ಬಿಡದಿಯ ಟೊಯೋಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೆ ಕೊರೊನಾ ಚಿಕಿತ್ಸೆಯಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗಿ ವ್ಯಾಪಿಸುತ್ತಿದ್ದರಿಂದ ಇತ್ತೀಚಿಗಷ್ಟೆ ಊರಿಗೆ ಬಂದಿದ್ದ ಕುಟುಂಬ, ಇಬ್ಬರು ಹೆಣ್ಣು ಮಕ್ಕಳನ್ನು ಮೂಡಿಗೆರೆಯಲ್ಲೇ ಬಿಟ್ಟು ದಂಪತಿ ಮಾತ್ರ ಬೆಂಗಳೂರಿಗೆ ವಾಪಸಾಗಿದ್ದರು.
ಮೊನ್ನೆ ಪತ್ನಿ ಸೇರಿದಂತೆ ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಆಸ್ಪತ್ರೆಯಿಂದ ವಿಡಿಯೋ ಕಾಲ್ ಮಾಡಿ ಮಾತನಾಡಿದ ವ್ಯಕ್ತಿ ಶೀಘ್ರವೇ ಡಿಸ್ಚಾರ್ಜ್ ಆಗುವುದಾಗಿ ತಿಳಿಸಿದ್ದರು. ಆದರೆ, ಮರುದಿನ ಮಧ್ಯಾಹ್ನ ಹೃದಯಾಘಾತದಿಂದ ಕೊನೆಯುಸಿರೆಳೆದಿರೋದು ಕುಟುಂಬ ಕಂಗಾಲಾಗುವಂತೆ ಮಾಡಿದೆ. ನಿನ್ನೆ ಸ್ವಗ್ರಾಮ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಗೆ ಮೃತದೇಹವನ್ನು ತಂದಾಗ ಹತ್ತಿರದಿಂದ ತಂದೆಯನ್ನು ನೋಡಲಾಗುತ್ತಿಲ್ಲ ಅಂತ ಇಬ್ಬರು ಹೆಣ್ಣುಮಕ್ಕಳು ಕಣ್ಣೀರಿಟ್ಟಿದ್ದು ಹೃದಯ ಕಲಕುವಂತಿತ್ತು.
ಪಿಪಿಇ ಕಿಟ್ ಧರಿಸಿ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿ.. ಕೊನೆಗೆ ತಾನೇ ಅಪ್ಪನ ಅಂತ್ಯ ಸಂಸ್ಕಾರ ಮಾಡಬೇಕೆಂದು ಹಿರಿಯ ಮಗಳು ಹಠ ಹಿಡಿದಾಗ, ಗ್ರಾಮದ ಹಿರಿಯರು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೃತರ ಪತ್ನಿಗೆ PPE ಕಿಟ್ ಹಾಕಿಕೊಂಡು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟರು. ಹಿರಿಯ ಮಗಳೇ ತಂದೆಗೆ ಅಂತಿಮ ವಿಧಿವಿಧಾನ ನೆರವೇರಿಸಿ, ಭಾರವಾದ ಮನಸ್ಸಿನಿಂದಲೇ ತಂದೆಯನ್ನು ಕಳುಹಿಸಿಕೊಟ್ಟ ದೃಶ್ಯ ಮನ ಕಲಕುವಂತಿತ್ತು.
ಶಿವಗಿರಿ ಸೇವಕರ ತಂಡದ ನೆರವು.. ಈ ಸಂದರ್ಭದಲ್ಲಿ ಮೂಡಿಗೆರೆಯ ಶಿವಗಿರಿ ಸೇವಕರ ತಂಡ ಯಾವುದೇ ಹಣ ಪಡೆಯದೇ ಅಂತ್ಯಸಂಸ್ಕಾರದ ಕಾರ್ಯವನ್ನು ನೆರವೇರಿಸಿದರು. ಯುವಕರಾದ ಪ್ರವೀಣ್ ಪೂಜಾರಿ, ರವಿ ಪೂಜಾರಿ, ಸುರೇಶ್ ಉಮೇಶ್, ಅರುಣ್, ಪ್ರವೀಣ್ ಶೆಟ್ಟಿ, ಹರೀಶ್, ಅಶ್ವಥ್, ತಾರು ಪೂಜಾರಿ, ಪ್ರವೀಣ್ ಇವರ ಮಾನವೀಯ ಕಳಕಳಿಗೆ ಜನರು ತಲೆಬಾಗಿದರು. ಊರಲ್ಲಿ ಬೇಕಾದಷ್ಟು ಆಸ್ತಿ ಇದ್ದರೂ ಬೆಂಗಳೂರಿಗೆ ಹೋಗಿ ತನ್ನ ಸ್ವಂತ ಪರಿಶ್ರಮದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದ ವ್ಯಕ್ತಿಯ ಸಾವಿಗೆ ಊರಿಗೆ ಊರೇ ಮಮ್ಮಲಮರುಗಿತು.




