
ಬೆಂಗಳೂರು: ರಾಷ್ಟ್ರಕವಿ ಕುವೆಂಪುರವರ ಸಮಗ್ರ ಸಾಹಿತ್ಯ ಪುಸ್ತಕಗಳ ಸರಣಿಯನ್ನು ಇಂದು ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಲಾಯಿತು. ಜೊತೆಗೆ, ಸಂಪುಟಗಳ ಡಿಜಿಟಲ್ ಆವೃತ್ತಿಗಳನ್ನು (EPUB) ಸಹ ಡಿಸಿಎಂ ಅಶ್ವತ್ಥ್ ನಾರಾಯಣ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಾ. ಅಶ್ವಥ್ ನಾರಾಯಣ ಎಲ್ಲರೂ ಭಾಷಣದಲ್ಲಿ ಕನ್ನಡ.. ಕನ್ನಡ.. ಕನ್ನಡ.. ಎಂದು ಮಾತ್ರ ಹೇಳುತ್ತೇವೆ. ಆದರೆ, ಸ್ಥಿತಿವಂತರು ಯಾರೂ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿಲ್ಲ. ಇಂಗ್ಲಿಷ್ ಇವತ್ತು ಉಳ್ಳವರ ಭಾಷೆ ಆಗ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈಗ ಪ್ರಾದೇಶಿಕ ಭಾಷೆಗೆ ಒತ್ತು ನೀಡಲಾಗಿದೆ. ಕನ್ನಡವನ್ನು ಒಂದನೇ ತರಗತಿಯಿಂದ ಅಲ್ಲ. ನರ್ಸರಿಯಿಂದಲೇ ಕಲಿಸುವ ಕೆಲಸ ಆಗಬೇಕು. ಇದಕ್ಕೆ ನಮ್ಮ ಸರ್ಕಾರ ಸಹ ಬದ್ಧ. ನಮ್ಮತನವನ್ನು ಉಳಿಸಿಕೊಳ್ಳಬೇಕಿದ್ದರೆ ಮಾತೃಭಾಷೆಯನ್ನು ಅಳವಡಿಸಿ ಬೆಳೆಸಬೇಕು ಎಂದು ಅಶ್ವಥ್ ನಾರಾಯಣ ಹೇಳಿದರು.
ಕನ್ನಡ ಸಾಹಿತ್ಯ ಫಲವತ್ತಾಗಿದೆ. ಇದರಲ್ಲಿ ಶ್ರೇಷ್ಠ ದರ್ಜೆಯ ಸಾಹಿತಿಗಳ ಬರಹ ಹೇರಳವಾಗಿದೆ. ಇದನ್ನು ಬೇರೆ ಭಾಷೆ ಮತ್ತು ದೇಶಗಳಿಗೆ ಮುಟ್ಟಿಸುವ ಕೆಲಸ ಆಗಬೇಕು. ಈಗಿನ ತಂತ್ರಜ್ಞಾನ ಬಳಸಿ ಇದನ್ನು ವಾಣಿಜ್ಯ ದೃಷ್ಟಿಯಿಂದಲೂ ಬಳಕೆ ಮಾಡಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಉತ್ತೇಜನೆ ನೀಡಲಿದೆ ಎಂದು ಡಾ.ಅಶ್ವಥ್ ನಾರಾಯಣ ಹೇಳಿದರು.