ಭಾರತ್ ಜೋಡೋ ಯಾತ್ರೆ ಬ್ಯಾನರ್ ಹರಿದ ಪ್ರಕರಣ: ಪೊಲೀಸ್ ಠಾಣೆಗೆ ಹೋಗಿ ಖಡಕ್ ಎಚ್ಚರಿಕೆ ಕೊಟ್ಟ ಡಿಕೆಶಿ

| Updated By: ರಮೇಶ್ ಬಿ. ಜವಳಗೇರಾ

Updated on: Sep 29, 2022 | 2:51 PM

ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆ ಬ್ಯಾನರ್ ಹರಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಡಿಕೆ ಶಿವಕುಮಾರ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಭಾರತ್ ಜೋಡೋ ಯಾತ್ರೆ ಬ್ಯಾನರ್ ಹರಿದ ಪ್ರಕರಣ: ಪೊಲೀಸ್ ಠಾಣೆಗೆ ಹೋಗಿ ಖಡಕ್ ಎಚ್ಚರಿಕೆ ಕೊಟ್ಟ ಡಿಕೆಶಿ
Congress Banner
Follow us on

ಚಾಮರಾಜನಗರ : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ  (Bharat Jodo Yatra)ನಾಳೆ ಅಂದ್ರೆ ಸೆ.30ರಂದು ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ. ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಯಾತ್ರೆಗೆ ಭರ್ಜರಿ ಸ್ವಾಗತಕೋರಲು ಕರ್ನಾಟಕ ಕಾಂಗ್ರೆಸ್ ಸಕಲ ಸಿದ್ಧತೆ ಮಾಡಿಕೊಂಡಿದೆ, ಇದರ ಮಧ್ಯೆ ಭಾರತ್ ಜೋಡೋ ಯಾತ್ರೆಕ್ಕೆ ಸ್ವಾಗತ ಕೋರಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಹರಿದು ಹಾಕಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ಊಟಿ ಸರ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಅದರ ಎರಡು ಬದಿಯಲ್ಲಿ ಅಳವಡಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರ ನಾಯಕರ ಸುಮಾರು 40ಕ್ಕೂ ಅಧಿಕ ಫ್ಲೇಕ್ಸ್ ಗಳನ್ನು ಕಿಡಿಗೇಡಿಗಳು ಬ್ಲೇಡ್ ನಿಂದ ಹರಿದು ಹಾಕಿದ್ದಾರೆ. ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಭಾರತ್ ಜೋಡೋ: ರಾಹುಲ್​ ಗಾಂಧಿ ಯಾತ್ರೆಗೆ ಟಾಂಗ್ ನೀಡಲು ಬಿಜೆಪಿ ಪ್ಲ್ಯಾನ್ ರೆಡಿ

ಎಚ್ಚರಿಕೆ ಕೊಟ್ಟ ಡಿಕೆ ಶಿವಕುಮಾರ್

ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿ, ಬ್ಯಾನರ್ ಹರಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕೂಡಲೇ ಅವರನ್ನು ಅರೆಸ್ಟ್ ಮಾಡಿ. ಅರೆಸ್ಟ್ ಮಾಡಿಲ್ಲ ಅಂದ್ರೆ ನಮ್ಮ ಕೆಲಸ ನಾವೂ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.

ನಾವು ಕದ್ದೇನೂ ಕಾರ್ಯಕ್ರಮ ಮಾಡುತ್ತಿಲ್ಲ. ಅವರ ರಾಜಕಾರಣ ಏನಿದೆ ಅದನ್ನು ಮಾಡಲಿ. ಈ ಹೇಡಿತನ ನಾವೂ ಮಾಡಿಲ್ಲ. ಆಕ್ಷನ್ ತೆಗೆದುಕೊಂಡಿಲ್ಲ ಅಂದ್ರೆ ನಮ್ಮ ರಾಜಕಾರಣ ನಾವೂ ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಪೊಲೀಸರಿಗೆ ಖಡಕ್ ಆಗಿ ಹೇಳಿದರು.

ಯಾತ್ರಗೆ ಕೌಂಟರ್ ಕೊಡಲು ಬಿಜೆಪಿ ಸಜ್ಜು

ಕೇರಳದ ವೈನಾಡು ಮೂಲಕ ಕರ್ನಾಟಕದ ಗಡಿ ಭಾಗ ಗುಂಡ್ಲುಪೇಟೆ ತಲುಪುವ ಭಾರತ್ ಜೋಡೋ ಯಾತ್ರೆ ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಮೀ ಕೈಪಡೆ ಪಾದಯಾತ್ರೆ ನಡೆಸಲಿದೆ. ಈ ಯಾತ್ರೆಯನ್ನು ಯಶಸ್ವಿಗೊಳಿಸಲು ಕರ್ನಾಟಕ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದೆಡೆ, ರಾಹುಲ್​ ಗಾಂಧಿ ಯಾತ್ರೆಗೆ ಟಾಂಗ್ ನೀಡಲು ಕರ್ನಾಟಕ ಬಿಜೆಪಿ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ನಾಳೆ ‘ಭಾರತ ಐಕ್ಯತಾ ಯಾತ್ರೆ’ ಪ್ರವೇಶ: ಜನರಿಗೆ ಪತ್ರ ಬರೆದು ಬೆಂಬಲ ಕೋರಿದ ಡಿಕೆ ಶಿವಕುಮಾರ್

ಭಾರತ್ ಜೋಡೋ ಯಾತ್ರೆ ವಿರುದ್ಧ ಸೋಷಿಯಲ್ ಮೀಡಿಯಾ ಮತ್ತು ಹೋರ್ಡಿಂಗ್ಸ್ ಗಳ ಮೂಲಕ ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ. ಅಲ್ಲದೇ ಭಾರತ್ ಜೋಡೋ ಯಾತ್ರೆ ಎಷ್ಟು ಪ್ರಸ್ತುತ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡಲು ಸಜ್ಜಾಗಿದೆ. ನಾಳೆ ಕರ್ನಾಟಕ ಪ್ರವೇಶದ ವೇಳೆ ರಾಹುಲ್ ಗಾಂಧಿಗೆ ಪ್ರಶ್ನಾವಳಿಗಳನ್ನು ಮುಂದಿಟ್ಟು ಉತ್ತರ ನೀಡುವಂತೆ ಆಗ್ರಹಿಸಲು ಕೂಡಾ ಬಿಜೆಪಿ ಪ್ಲ್ಯಾನ್‌ ಮಾಡಿಕೊಂಡಿದೆ.

ಈ ಬಗ್ಗೆ ಈಗಾಗಲೇ ಬಿಜೆಪಿ ಸೋಷಿಯಲ್ ಮೀಡಿಯಾ ವಿಭಾಗದ ರಾಜ್ಯ ವಿಶೇಷ ಸಭೆಯಲ್ಲಿ ಚರ್ಚೆ ನಡೆದಿದ್ದು, ಮತ್ತೊಂದೆಡೆ ರಾಹುಲ್ ಗಾಂಧಿ ಯಾತ್ರೆ ಸಾಗುವ ಮಾರ್ಗಗಳಲ್ಲಿ ಹೋರ್ಡಿಂಗ್ಸ್ ಅಳವಡಿಸಿ ತಿರುಗೇಟು ನೀಡುವ ಬಗ್ಗೆ ಕೂಡಾ ಬಿಜೆಪಿ ಚಿಂತನೆ ನಡೆಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Thu, 29 September 22