
ವಿದ್ಯುತ್ ದರವನ್ನು ಹೆಚ್ಚಿಸುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ಸಮರ ಸಾರಿರುವ ಕರ್ನಾಟಕ ಕಾಂಗ್ರೆಸ್, ಆ ನಿರ್ಧಾರವನ್ನು ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೊವಿಡ್-19 ವ್ಯಾಧಿಯಿಂದ ಜನಸಾಮಾನ್ಯರ ಬದುಕು ತತ್ತರಿಸಿ ದಯನೀಯ ಸ್ಥಿತಿ ತಲುಪಿದೆ ಈ ಸಮಯದಲ್ಲಿ ವಿದ್ಯುತ್ ದರ ಹೆಚ್ಚಿಸುವ ಸರ್ಕಾರದ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಇಲ್ಲದಿದ್ದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನ
‘‘ಕೊರೋನಾ ಪಿಡುಗಿನಿಂದ ಇಡೀ ದೇಶ ತತ್ತರಿಸಿದೆ. ದೇಶದ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಉದ್ಯಮಗಳನ್ನು ನಡೆಸುತ್ತಿರುವವರು, ಸಣ್ಣ ವ್ಯಾಪಾರಿಗಳು, ರೈತರು, ದಿನಗೂಲಿ ಮಾಡುವರು, ಮಧ್ಯಮ ವರ್ಗದವರು–ಎಲ್ಲ ವರ್ಗದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕನಿಷ್ಠ ಮಾನವೀಯತೆಯ ದೃಷ್ಟಿಯಿಂದಾದರೂ ಸರ್ಕಾರ ಇಂಥ ನಿರ್ಧಾರ ತೆಗೆದುಕೊಳ್ಳಬಾರದಿತ್ತು,’’ ಎಂದು ಶಿವಕುಮಾರ್ ಹೇಳಿದರು.
‘‘ರಾಜ್ಯದಲ್ಲಿ ಜನ ಕೆಲಸ ಇಲ್ಲದೆ, ಆದಾಯ ಇಲ್ಲದೆ, ಒಂದ್ಹೊತ್ತಿನ ಊಟವನ್ನು ಹೊಂದಿಸಲಾಗದ ಸ್ಥಿತಿಯಿಂದ ಪರಿತಪಿಸುತ್ತಿದ್ದಾರೆ. ಜನರ ನೆರವಿಗಾಗಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರಲ್ಲಿ ಯಾರಿಗೆ ಸಹಾಯವಾಗಿದೆ ಎಂದು ಸರ್ಕಾರವನ್ನು ಕೇಳಿದ್ದೆವು. ನಮಗೆ ಉತ್ತರ ಸಿಗಲಿಲ್ಲ. ಪಾಲಿಕೆ, ಪಂಚಾಯಿತಿ ಮಟ್ಟದಲ್ಲಿ ಒಂದು ವರ್ಷಕಾಲ ಆಸ್ತಿ ತೆರಿಗೆ ರದ್ದು ಮಾಡಿ ಅಂತಲೂ ಕೇಳಿದೆವು. ಅದಕ್ಕೂ ಕೂಡ ಸರ್ಕಾರ ಸ್ಪಂದಿಸಲಿಲ್ಲ. ಈ ಮಧ್ಯೆ ಎಲ್ಲ ತೆರನಾದ ವಹಿವಾಟುಗಳಿಗೂ ಸರ್ಕಾರ ನಿರ್ಬಂಧ ಹೇರಿತ್ತು. ಆದಾಗ್ಯೂ, ಸರ್ಕಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇವೆ,’’ ಎಂದು ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಮಳೆ ಹೆಚ್ಚಾಗಿ ವಿದ್ಯುತ್ ಉತ್ಪಾದನೆ ಸಹ ಹೆಚ್ಚಾಗಿದೆ, ಪರಿಸ್ಥಿತಿ ಹೀಗಿರುವಾಗ ಸರ್ಕಾರ ವಿದ್ಯುತ್ ದರ ಕಡಿಮೆ ಮಾಡುವ ಬದಲು ಪ್ರತಿ ಯುನಿಟ್ಗೆ 40 ಪೈಸೆ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡು ಜನ ವಿರೋಧಿ ನೀತಿ ಅನುಸರಿಸುತ್ತಿದೆಯೆಂದು ಡಿಕೆಶಿ ಸರ್ಕಾರವನ್ನು ತಿವಿದರು.
‘‘ನಾನು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಆರೂವರೆ ಕೋಟಿ ಜನರ ಪರವಾಗಿ, ಈ ಜನ ವಿರೋಧಿ ನಿರ್ಧಾರವನ್ನು ಖಂಡಿಸುತ್ತೇನೆ. ಉದ್ಯಮಿಗಳು, ವ್ಯಾಪಾರಿಗಳು, ರೈತರು ಹಾಗೂ ಮಧ್ಯಮ ವರ್ಗದ ಜನರ ವಿರುದ್ಧ ಈ ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರ ಕೂಡಲೇ ಈ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸುತ್ತೇನೆ. ಮುಂದಿನ ಒಂದೂವರೆ ವರ್ಷಗಳ ಕಾಲ ಇಂತಹ ತೀರ್ಮಾನ ತೆಗೆದುಕೊಳ್ಳಬಾರದು ಮತ್ತು ಈಗಿರುವ ದರವನ್ನೇ ಮುಂದುವರಿಸಬೇಕು ಎಂದು ಜನರ ಧ್ವನಿಯಾಗಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಒಂದು ವೇಳೆ ಸರ್ಕಾರ ಒಂದು ವಾರದೊಳಗಾಗಿ ಈ ನಿರ್ಧಾರ ಕೈಬಿಡದಿದ್ದರೆ, 17ನೇ ತಾರೀಕಿನಿಂದ 20ನೇ ತಾರೀಕಿನವರೆಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಎಸ್ಕಾಂ ಸಂಸ್ಥೆಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅದರ ಜೊತೆಗೆ 23ರಿಂದ 28ನೇ ತಾರೀಕಿನ ನಡುವೆ ತಾಲೂಕು ಮಟ್ಟದಲ್ಲಿ ಒಂದೊಂದು ದಿನ ಪ್ರತಿಭಟನೆ ನಡೆಸಲಾಗುವುದು.’’ ಎಂದು ಶಿವಕುಮಾರ್ ಹೇಳಿದರು
ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ. ಬಿ.ಎಲ್. ಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಆರ್. ಸುದರ್ಶನ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.