ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯು ಕಲ್ಯಾಣ ಕರ್ನಾಟಕ ಎಂದು ಕರೆಸಿಕೊಳ್ಳುವ ಹೈದರಾಬಾದ್ ಕರ್ನಾಟಕದ ಭಾಗಕ್ಕೆ ಒಳಪಡುತ್ತದೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಮತ್ತು ರಾಜ್ಯದ ಸುಸ್ಥಿರ ಅಭಿವೃದ್ಧಿಗಾಗಿ ತಯಾರಾದ ಈ ಸಮಿತಿಯು ಪಟ್ಟಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಒಳಪಡುವ ಆರು ಜಿಲ್ಲೆಗಳ ಪೈಕಿ ಬಳ್ಳಾರಿ ಕೂಡ ಒಂದಾಗಿದೆ.
ಎರಡು ಕೇಂದ್ರಗಳು ಜಿಲ್ಲಾಡಳಿತ ಪ್ರದೇಶವಾಗಲಿವೆ.. ಈ ಅಧ್ಯಯನದ ವರದಿಯಂತೆ ಕರ್ನಾಟಕದ ತಾಲೂಕುಗಳನ್ನು ಅತ್ಯಂತ ಹಿಂದುಳಿದ, ಹೆಚ್ಚು ಹಿಂದುಳಿದ, ಹಿಂದುಳಿದ ಮತ್ತು ತುಲನಾತ್ಮಕವಾಗಿ ಅಭಿವೃದ್ಧಿ ಹೊಂದಿದ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅದರಂತೆ ಅಖಂಡ ಬಳ್ಳಾರಿ ಜಿಲ್ಲೆಯ ಕೇಂದ್ರ ಬಳ್ಳಾರಿ ಮತ್ತು ಹೊಸಪೇಟೆ ತಾಲೂಕುಗಳನ್ನು ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈಗ ಬಳ್ಳಾರಿ ಜಿಲ್ಲಾ ವಿಭಜನೆ ಆದರೆ ಈ ಎರಡು ಕೇಂದ್ರಗಳು ಜಿಲ್ಲಾಡಳಿತ ಪ್ರದೇಶವಾಗಲಿವೆ.
ಹೆಚ್ಚು ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ ತಾಲೂಕುಗಳಿದ್ದು, ಸಿರುಗುಪ್ಪ ಬಳ್ಳಾರಿಗೆ, ಉಳಿದೆರಡು ತಾಲೂಕುಗಳು ಹೊಸ ವಿಜಯನಗರ ಜಿಲ್ಲೆಗೆ ಹಂಚಿಹೋಗಲಿವೆ. ಅತ್ಯಂತ ಹಿಂದುಳಿದ ತಾಲೂಕುಗಳಾಗಿ ಕೂಡ್ಲಿಗಿ, ಸಂಡೂರು ಮತ್ತು ಹರಪನಹಳ್ಳಿ ತಾಲೂಕುಗಳು ಗುರುತಿಸಿಕೊಂಡಿದ್ದು, ಕೂಡ್ಲಿಗಿ, ಸಂಡೂರು ಬಳ್ಳಾರಿಗೆ ಮತ್ತು ಹರಪನಹಳ್ಳಿ ವಿಜಯನಗರಕ್ಕೆ ದೊರಕಲಿವೆ.
ಅವಳಿ ಜಿಲ್ಲೆಗಳಿಗೆ ಸಿಗುವ ಸವಲತ್ತುಗಳು.. ಈ ಪಟ್ಟಿಯ ಅನ್ವಯ ಕೃಷಿ, ನೀರಾವರಿ ಯೋಜನೆ, ಶಿಕ್ಷಣ, ಗ್ರಾಮಾಭಿವೃದ್ಧಿ, ಸಾಮಾಜಿಕ ಸೇವೆ, ಆರೋಗ್ಯ ಮೊದಲಾದ ಸೌಲಭ್ಯಗಳು ಎರಡು ಜಿಲ್ಲೆಯ ಆಯ್ದ ತಾಲೂಕುಗಳಿಗೆ ವರದಿಯ ನಿಯಮದ ಅನ್ವಯ ಲಭ್ಯವಾಗಲಿವೆ. ಹೈದರಾಬಾದ್ ಕರ್ನಾಟಕ ಭಾಗವು, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಹಿಂದುಳಿದ ಪ್ರದೇಶ ಎಂದು ಗುರುತಿಸಿಕೊಂಡಿದೆ. ಹೀಗಾಗಿ ಹೈದರಾಬಾದ್ ಕರ್ನಾಟಕಕ್ಕೆ ಸಿಗುವ ವಿಶೇಷ ಮುತುವರ್ಜಿಯನ್ನು ಅವಳಿ ಜಿಲ್ಲೆಗಳು ಪಡೆದುಕೊಳ್ಳಲಿವೆ.
ಕಸ್ತೂರಬಾ ಗಾಂಧಿ ಬಾಲಕಿಯರ ಶಾಲೆ, ಪಂಚ ಸೌಲಭ್ಯ ಯೋಜನೆ, ವಿಶೇಷ ಆರ್ಥಿಕ ನೆರವು, ವಿಶೇಷ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY), ಸುವರ್ಣ ಆರೋಗ್ಯ ಸುರಕ್ಷಾ ಯೋಜನೆ, ಆಶ್ರಯ ಯೋಜನೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL), ಆರ್ಟಿಕಲ್ 371j ಮೊದಲಾದ ಸವಲತ್ತುಗಳು ಎರಡು ಜಿಲ್ಲೆಯ ಆಯ್ದ ತಾಲೂಕುಗಳ ಜನರಿಗೆ ಸಿಗಲಿವೆ.