AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಫೋಟೋಶೂಟ್ ವಿಚಾರಕ್ಕೆ ಯುವಕರ ನಡುವೆ ಕಿರಿಕ್; ಕುಡಿದ ಅಮಲಿನಲ್ಲಿ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್

ನಾನು ಚೆನ್ನಾಗಿ ಫೋಟೋ ತೆಗೆದುಕೊಳ್ಳಬೇಕು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಲೈಕ್ಸ್ ತಗೋಬೇಕು ಎನ್ನುವ ಆಸೆ ಇತ್ತೀಚೆಗೆ ಯುವಕರಲ್ಲಿ ಹೆಚ್ಚಿದೆ. ಆದ್ರೆ, ಇದೇ ಹುಚ್ಚೆ ಇದೀಗ ಓರ್ವನನ್ನು ಕೊಲೆಯಲ್ಲಿ ಅಂತ್ಯ ಮಾಡಿಸಿದೆ. ಫೋಟೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಮಿಂಚಲು ಹೊರಟವರು ಜೈಲಲ್ಲಿ ಮುದ್ದೆ ಮುರಿಯೋಕ್ಕೆ ರೆಡಿಯಾಗಿದ್ದಾರೆ.

 ಫೋಟೋಶೂಟ್ ವಿಚಾರಕ್ಕೆ ಯುವಕರ ನಡುವೆ ಕಿರಿಕ್; ಕುಡಿದ ಅಮಲಿನಲ್ಲಿ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್
ಬಂಧಿತ ಆರೋಪಿಗಳು
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Nov 29, 2023 | 6:53 PM

Share

ಬೆಂಗಳೂರು ಗ್ರಾಮಾಂತರ, ನ.29:ಪೋಟೋಗಾಗಿ ಯುವಕನೋರ್ವನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ(Parappana Agrahara)ಕ್ಕೆ ಕಳುಹಿಸಿದ್ದಾರೆ. ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಮತ್ತು ಕೊಡಿಗೇಹಳ್ಳಿಯವರಾದ ದಿಲೀಪ್, ಅವಿನಾಶ್, ಕಿರಣ್ ಮತ್ತು ಜಗದೀಶ್ ಎಂಬುವವರು ನವಂಬರ್ 12 ರಂದು ದೊಡ್ಡಬಳ್ಳಾಪುರ(Doddaballapura)ತಾಲೂಕಿನ ರಾಮೇಶ್ವರ ಬಳಿಯಿರುವ ಡಾಬಾ ಬಳಿ ಬಂದು ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಒಳ್ಳೆ ಫೋಟೋ ಬರುತ್ತೆ ಎಂದು ದೊಡ್ಡಬಳ್ಳಾಪುರ ನಗರದ ಕಛೇರಿ ಪಾಳ್ಯ ನಿವಾಸಿ ಸೂರ್ಯ ಎಂಬಾತ ತನ್ನ ಸ್ನೇಹಿತರ ಜೊತೆ ಬಾಡಿಗೆ ಕ್ಯಾಮೆರಾ ತಂದು ಫೋಟೋಶೂಟ್ ಮಾಡುತ್ತಿದ್ದ. ಈ ವೇಳೆ ತನ್ನದು ಎರಡು ಫೋಟೋ ತೆಗಿ ಎಂದು ಆರೋಪಿ ದಿಲೀಪ್  ಕಿರಿಕ್ ಮಾಡಿದ್ದು, ಪೊಟೋ ತೆಗೆಸಿಕೊಂಡು ಫೋನ್​ಗೆ ಕಳಿಸುವಂತೆ ಹೇಳಿದ್ದಾನೆ. ಆದ್ರೆ, ಈ ವೇಳೆ ಪೋನ್​ನಿಂದ ನೇರವಾಗಿ ಕಳಿಸುವುದಕ್ಕೆ ಆಗಲ್ಲವೆಂದು ಸೂರ್ಯ ಹೇಳಿದ್ದ. ಅಷ್ಟೇ ಕೋಪಗೊಂಡ ದಿಲೀಪ್​ ಕ್ಯಾಮರಾ ಕಿತ್ತುಕೊಂಡು ಗಲಾಟೆ ಮಾಡಿದ್ದಾನೆ. ಬಳಿಕ ಕ್ಯಾಮರಾ ಕಿತ್ತುಕೊಳ್ಳಲು ಮುಂದಾದ ಸೂರ್ಯನನ್ನು ಕೀ ಚೈನ್ ಚಾಕುವಿನಿಂದ ಇರಿದು ಕೊಲೆ ಮಾಡಿ ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದರು.

ಇನ್ನು ಸೂರ್ಯನ ಎದೆ ಭಾಗಕ್ಕೆ ಚುಚ್ಚಿದ್ದ ಪರಿಣಾಮ ಸೂರ್ಯ ಕೆಳಗೆ ಬಿದ್ದು ಸಾವನ್ನಪಿದ್ದ. ಈ ಕುರಿತು ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಜೊತೆಗೆ ತನಿಖೆ ನಡೆಸಿ ಅಂದು ಎಸ್ಕೇಪ್ ಆಗಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ದಿಲೀಪ್, ಅವಿನಾಶ್, ಕಿರಣ್ ಮತ್ತು ಜಗದೀಶ್ ಎಂಬ ನಾಲ್ವರನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಯ ಬಂಧನಕ್ಕೂ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಉತ್ತರ ಕನ್ನಡ: ಹಣಕ್ಕಾಗಿ ಇಬ್ಬರ ಜಗಳ, ಮೂರನೇ ವ್ಯಕ್ತಿಯ ಕೊಲೆ; ಆರೋಪಿ ಪರಾರಿ

ಜೊತೆಗೆ ಕುಡಿದ ನಶೆಯಲ್ಲಿ ಕಿರಿಕ್ ಮಾಡಿ ಸೂರ್ಯನನ್ನು ಕೊಲೆ ಮಾಡಿದ್ದಾಗಿಯೂ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಇನ್ನು ಬಂಧಿತರಿಂದ ಕೃತ್ಯಕ್ಕೆ ಬಳಸಿದ ಚಾಕು ಮತ್ತು ಒಂದು ಬೈಕ್​ನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಸೆಲ್ವಿ ತೆಗೆದುಕೊಂಡು ಅಥವಾ ತಮ್ಮದೇ ಸ್ನೇಹಿತರ ಬಳಿ ಫೋಟೋ ತೆಗೆಸಿಕೊಂಡು ಸುಮ್ಮನಾಗಬೇಕಿದ್ದ ಕಿರಾತಕರು, ಹವಾ ತೋರಿಸಲು ಹೋಗಿ ಓರ್ವ ಯುವಕನ ಜೀವ ತೆಗೆದಿದ್ದು ನಿಜಕ್ಕೂ ದುರಂತ. ಕೊಲೆ ಮಾಡಿದ ತಪ್ಪಿಗೆ ಆರೋಪಿಗಳು ಜೈಲು ಸೇರಿದ್ರೆ, ಪುತ್ರ ಶೋಕಂ ನಿರಂತರಂ ಎಂಬಂತೆ ಮಗನನ್ನು ಕಳೆದುಕೊಂಡ ಬಡ ತಂದೆ- ತಾಯಿ ನೋವು ಮಾತ್ರ ಯಾರಿಗೂ ಹೇಳತೀರದ್ದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ