ಎಲಾನ್ ಮಸ್ಕ್​ಗೆ ಸೇರಿದ 1,95,000 ಕೋಟಿಗೂ ಹೆಚ್ಚು ಸಂಪತ್ತು ಒಂದೇ ವಾರದಲ್ಲಿ ಕಿಡಿಗೆ ತಾಗಿದ ಕರ್ಪೂರದಂತಾಯ್ತು

| Updated By: ಸಾಧು ಶ್ರೀನಾಥ್​

Updated on: Mar 06, 2021 | 6:18 PM

ಎಲಾನ್ ಮಸ್ಕ್ ಒಂದೇ ವಾರದಲ್ಲಿ 2700 ಕೋಟಿ ಅಮೆರಿಕನ್ ಡಾಲರ್ ಆಸ್ತಿ ಕಳೆದುಕೊಂಡಿದ್ದಾರೆ. ಆ ಮೂಲಕ ವಿಶ್ವದ ನಂಬರ್ ಒನ್ ಶ್ರೀಮಂತ ಎಂಬ ಹುದ್ದೆಯಿಂದ ಕೆಳಗೆ ಜಾರಿ, ಜೆಫ್ ಬೆಜೋಸ್​ಗಿಂತ 2000 ಕೋಟಿ ಯುಎಸ್​ಡಿ ಹಿಂದಿದ್ದಾರೆ.

ಎಲಾನ್ ಮಸ್ಕ್​ಗೆ ಸೇರಿದ 1,95,000 ಕೋಟಿಗೂ ಹೆಚ್ಚು ಸಂಪತ್ತು ಒಂದೇ ವಾರದಲ್ಲಿ ಕಿಡಿಗೆ ತಾಗಿದ ಕರ್ಪೂರದಂತಾಯ್ತು
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us on

ಕಳೆದ ವರ್ಷ 2020ರಲ್ಲಿ ಅತಿ ವೇಗವಾಗಿ ಸಂಪತ್ತು ಹೆಚ್ಚಿಸಿಕೊಂಡ ಶ್ರೀಮಂತ ಎಂಬ ಐತಿಹಾಸಿಕ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಾತ ಟೆಸ್ಲಾ ಕಂಪೆನಿ ಸಿಇಒ ಎಲಾನ್ ಮಸ್ಕ್. ಕಳೆದ ಸೋಮವಾರದಿಂದ ಈಚೆಗೆ ಮಸ್ಕ್ ಆಸ್ತಿಯಲ್ಲಿ 2700 ಕೋಟಿ ಅಮೆರಿಕನ್ ಡಾಲರ್ ಇಳಿಕೆ ಆಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 1,95,000 ಕೋಟಿಗೂ ಹೆಚ್ಚು ಸಂಪತ್ತು ಕಿಡಿಗೆ ತಾಗಿದ ಕರ್ಪೂರದಂತೆ ಕರಗಿಹೋಗಿದೆ. ಟೆಕ್ನಾಲಜಿ ಷೇರುಗಳಲ್ಲಿ ಮಾರಾಟದ ಒತ್ತಡ ಕಂಡಬಂದಿದ್ದರಿಂದ ಈ ಬೆಳವಣಿಗೆ ಆಗಿದೆ. ಇನ್ನು ಮಸ್ಕ್ ಒಟ್ಟಾರೆ ಆಸ್ತಿ ಮೌಲ್ಯವು 15,690 ಕೋಟಿ ಅಮೆರಿಕನ್ ಡಾಲರ್​ಗೆ ಇಳಿಕೆ ಆಗಿದ್ದರೂ ಈಗಲೂ ಅವರೇ ವಿಶ್ವದ ನಂಬರ್ ಎರಡನೇ ಶ್ರೀಮಂತ ಎಂಬುದನ್ನು ಬ್ಲೂಮ್​ಬರ್ಗ್ ಸೂಚ್ಯಂಕದಿಂದ ಗೊತ್ತಾಗುತ್ತದೆ.

ಆದರೆ, ವಿಶ್ವದ ನಂಬರ್ ಒನ್ ಶ್ರೀಮಂತ ಅಮೆಜಾನ್ ಸಿಇಒ ಜೆಫ್ ಬೆಜೋಸ್​ಗಿಂತ 2000 ಕೋಟಿ ಅಮೆರಿಕನ್ ಡಾಲರ್ ಹಿಂದಿದ್ದಾರೆ ಮಸ್ಕ್. 2020ನೇ ಇಸವಿಯಲ್ಲಿ ಟೆಸ್ಲಾ ಕಂಪೆನಿಯ ಷೇರು ಶೇಕಡಾ 743ರಷ್ಟು ಏರಿಕೆ ಕಂಡಿತ್ತು. ಇದರಿಂದ ಆ ಕಂಪೆನಿಯಲ್ಲಿ ಷೇರಿನ ಪಾಲು ಹೊಂದಿರುವ ಮಸ್ಕ್ ಆಸ್ತಿಯಲ್ಲೂ ಹೆಚ್ಚಳಚಾಗಿತ್ತು. 2021ರ ಹೊಸ ವರ್ಷದಲ್ಲಿ ಮಸ್ಕ್ ಆಸ್ತಿ ಮತ್ತೊಂದು ಎತ್ತರವನ್ನು ತಲುಪಿತು. ಜನವರಿಯಲ್ಲಿ ಜೆಫ್ ಬೆಜೋಸ್​ರನ್ನು ಪಕ್ಕಕ್ಕೇ ಸರಿಸಿ ಅತಿ ಶ್ರೀಮಂತ ಎನಿಸಿಕೊಂಡ ಮಸ್ಕ್ ಅವರ ಆಸ್ತಿ ಫೆಬ್ರವರಿಯಲ್ಲಿ 21000ಕೋಟಿ ಅಮೆರಿಕನ್ ಡಾಲರ್ ಮುಟ್ಟಿತು.

ಅತಿ ದೀರ್ಘಾವಧಿ ಕುಸಿತ:
ಸ್ಥಿರವಾದ ತ್ರೈಮಾಸಿಕ ಲಾಭ, ಜೋ ಬೈಡನ್ ಯು.ಎಸ್. ಅಧ್ಯಕ್ಷೀಯ ಚುನಾವಣೆ ಗೆಲುವು, ಸ್ವಚ್ಛ ತಂತ್ರಜ್ಞಾನದ ಬಗೆಗಿನ ಒಲವು ಹಾಗೂ ಸಣ್ಣ ಹೂಡಿಕೆದಾರರು ಟೆಸ್ಲಾ ಷೇರಿನ ಮೇಲೆ ತೋರಿಸಿದ ಪ್ರೀತಿ ಇವೆಲ್ಲವೂ ಸೇರಿ ಕಂಪೆನಿಯ ಏರಿಕೆಗೆ ಕಾರಣವಾಯಿತು. ಆದರೆ ಕೆಲವರ ಪಾಲಿಗೆ ಕಂಪೆನಿಯ ಮೌಲ್ಯಮಾಪನ ಹೆಚ್ಚಾಯಿತು ಎಂಬ ಭಾವನೆ ಇದೆ. ಇನ್ನು ನಾಸ್ಡಾಕ್ 100 ಷೇರು ಸೂಚ್ಯಂಕವು ಸತತ ಮೂರನೇ ವಾರವಾದ ಶುಕ್ರವಾರವೂ ಕುಸಿಯಿತು. ಸೆಪ್ಟೆಂಬರ್ ನಂತರ ಅತಿ ದೀರ್ಘಾವಧಿಯ ಕುಸಿತ ಕಂಡ ವಾರ ಇದು.

ಬಿಟ್​ ಕಾಯಿನ್ ಕೂಡ ಕಾರಣ:
ಮಸ್ಕ್ ಆಸ್ತಿ ಕರಗುವುದಕ್ಕೆ ತಂತ್ರಜ್ಞಾನ ವಲಯ ಮಾತ್ರ ಕಾರಣ ಅಲ್ಲ. ಬಿಟ್​ಕಾಯಿನ್ ಬೆಲೆ ಏರಿಳಿಕೆ ಹೊಯ್ದಾಟದಲ್ಲೂ ಅವರ ಆಸ್ತಿ ಮೇಲೇರಿ ಕೆಳಗೆ ಇಳಿದಿದೆ. ಬ್ಯಾಲೆನ್ಸ್ ಶೀಟ್​ಗೆ 150 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್ ಸೇರ್ಪಡೆ ಮಾಡಿಕೊಂಡಿದ್ದಾಗಿ ಟೆಸ್ಲಾ ತಿಳಿಸಿತ್ತು. ಅದಾಗಿ ಎರಡು ವಾರಕ್ಕೆ, “ಬಿಟ್​ಕಾಯಿನ್ ದುಬಾರಿಯಂತೆ ಕಾಣುತ್ತಿದೆ ಎಂದು ಮಸ್ಕ್ ಮಾಡಿದ್ದ ಒಂದೇ ಟ್ವೀಟ್​ಗೆ ಅವರ ಆಸ್ತಿ 1500 ಕೋಟಿ ಅಮೆರಿಕನ್ ಡಾಲರ್ ಕೊಚ್ಚಿಹೋಗಿತ್ತು.

ಹಲವು ಸಿರಿವಂತರ ಆಸ್ತಿಯಲ್ಲಿ ಏರಿಳಿತ:
ವಿಶ್ವದ ಅತಿ ಶ್ರೀಮಂತರ ಎನಿಸಿಕೊಂಡ ಹಲವರ ಆಸ್ತಿಯಲ್ಲಿ ಈ ವರ್ಷ ಅಂಥ ಏರಿಳಿತ ಕಾಣಬಹುದಾಗಿದೆ. ಏಷ್ಯಾದ ಅತ್ಯ.ಂತ ಸಿರಿವಂತ ಎನಿಸಿಕೊಂಡಿದ್ದ ಚೀನಾದ ಬಾಟಲ್ ನೀರು ಮಾರಾಟಗಾರ ಝೋಂಗ್ ಶನ್ಷನ್ ತಮ್ಮ ಕಿರೀಟವನ್ನು ಭಾರತದ ಮುಕೇಶ್ ಅಂಬಾನಿಗೆ ಬಿಟ್ಟುಕೊಟ್ಟಿದ್ದಾರೆ. ಕೆಲವೇ ದಿನಗಳ ಫಾಸಲೆಯಲ್ಲಿ ಶನ್ಷನ್ 2200 ಕೋಟಿ ಅಮೆರಿಕನ್ ಡಾಲರ್ ಆಸ್ತಿ ಕಳೆದುಕೊಂಡಿದ್ದಾರೆ. ಕ್ವಿಕನ್ ಲೋನ್ಸ್ ಇಂಕ್ ಅಧ್ಯಕ್ಷ ಡ್ಯಾನ್ ಗಿಲ್ಬರ್ಟ್ ಆಸ್ತಿ ಕಳೆದ ಸೋಮವಾರ 2500 ಕೋಟಿ ಯುಎಸ್​ಡಿ ಹೆಚ್ಚಾಯಿತು. ಆ ನಂತರ ಅವರ ಆಸ್ತಿಯಲ್ಲಿ 2400 ಕೋಟಿ ಯುಎಸ್​ಡಿ ಇಳಿಕೆ ಆಗಿದೆ. ಅಲ್ಫಾಬೆಟ್ ಸಹಸಂಸ್ಥಾಪಕ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಆಸ್ತಿಯಲ್ಲಿ ಈ ವರ್ಷದ ಜನವರಿ 1ರಿಂದ ಈಚೆಗೆ ತಲಾ 1300 ಕೋಟಿ ಅಮೆರಿಕನ್ ಡಾಲರ್ ಏರಿಕೆ ಆಗಿದೆ.

ಇದನ್ನೂ ಓದಿ: Elon Musk: ಎಲಾನ್ ಮಸ್ಕ್ 1.14 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಒಂದೇ ಟ್ವೀಟ್​ಗೆ ಖಲಾಸ್