ಸತೀಶ್ ಜಾರಕಿಹೊಳಿ-ಸಿದ್ದರಾಮಯ್ಯ ಮಾತುಕತೆ: ಸದನದಲ್ಲಿ ಕಾಂಗ್ರೆಸ್ನಿಂದ ಸಿಡಿ ಪ್ರಕರಣ ಚರ್ಚೆ ಸಾಧ್ಯತೆ ಕಡಿಮೆ!
ಜಾರಕಿಹೊಳಿ ಕುಟುಂಬದ ಹಿರಿಯ ನಾಯಕ, ಸತೀಶ್ ಜಾರಕಿಹೊಳಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ ರಮೇಶ್ ಜಾರಕಿಹೊಳಿ ಸೀಡಿ ವಿಚಾರ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಗೆ ಎತ್ತಿಕೊಳ್ಳ ಬೇಡಿ ಎಂದು ವಿನಂತಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ವಿಚಾರವನ್ನು ಬಿಟ್ಟು ಬೇರೆ ಮಂತ್ರಿಗಳ ವಿಚಾರ ಎತ್ತಿಕೊಳ್ಳುವ ಸಾಧ್ಯತೆ ಇದೆ.
ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಅಥವಾ ಗೋಳು ಹೊಯ್ದುಕೊಳ್ಳುವ ಅವಕಾಶವನ್ನು ಯಾವತ್ತೂ ಕಳೆದುಕೊಳ್ಳದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಅವರ ಸಿಡಿ ವಿಚಾರದಲ್ಲಿ ಮಾತ್ರ ಬೇರೆಯೇ ಲೆಕ್ಕ ಹಾಕಿದ್ದಾರೆ. ಸೋಮವಾರದಂದು ಮುಂಗಡಪತ್ರ ಮಂಡನೆಯಾಗಲಿದೆ. ಆ ನಂತರ ರಮೇಶ್ ಜಾರಕಿಹೊಳಿ ಅವರ ಸಿಡಿ ವಿಚಾರ ಬಿಟ್ಟು ಬೇರೆ ಎಲ್ಲ ವಿಚಾರಗಳನ್ನು ಎತ್ತಿಕೊಂಡು ಆಡಳಿತ ಪಕ್ಷಕ್ಕೆ ಮುಜುಗರವುಂಟು ಮಾಡಲು ನಿರ್ಧರಿಸಿದ್ದಾರೆ. ಈ ತಂತ್ರದ ಭಾಗವಾಗಿ, ಮುಂಬಯಿಗೆ ಹೋಗಿ ಬಂದ ಉಳಿದ ನಾಯಕರ ಸಿಡಿ ವಿಚಾರ ಎತ್ತಿಕೊಂಡು ಆಡಳಿತ ಪಕ್ಷಕ್ಕೆ ಮುಜುಗರವುಂಟು ಮಾಡುವ ಪಟ್ಟು ಇದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ಸಿನ ಮೂಲಗಳು ತಿಳಿಸಿವೆ.
ಇಷ್ಟಕ್ಕೂ ರಮೇಶ್ ಜಾರಕಿಹೊಳಿ ವಿಚಾರ ಪ್ರಸ್ತಾಪ ಏಕಿಲ್ಲ? ಇದಕ್ಕೊಂದು ಕಾರಣವಿದೆ. ಮೊದಲನೆಯದಾಗಿ, ಸಿದ್ದರಾಮಯ್ಯ ಅವರ ಆಪ್ತ ಮತ್ತು ರಮೇಶ್ ಜಾರಕಿಹೊಳಿ ಅವರ ಅಣ್ಣ ಸತೀಶ್ ಜಾರಕಿಹೊಳಿ ಮೊನ್ನೆ ಗುರುವಾರ ರಾತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆ ಸುದೀರ್ಘವಾಗಿ ಒಂದು ತಾಸಿಗಿಂತಲೂ ಹೆಚ್ಚು ಮಾತನಾಡಿದ್ದಾರೆ. ಅವರು ಸಿದ್ದರಾಮಯ್ಯ ಅವರಿಗೆ ವಿನಂತಿ ಮಾಡಿದ್ದಾರೆ. ತಾವು ದಯವಿಟ್ಟು ಹೇಗಾದರೂ ಮಾಡಿ ಈ ವಿಚಾರವನ್ನು ವಿಧಾನ ಸಭೆಯಲ್ಲಿ ಎತ್ತಬೇಡಿ. ಇದರಿಂದ ಇಡೀ ಜಾರಕಿಹೊಳಿ ಕುಟುಂಬಕ್ಕೆ ತುಂಬಾ ಮುಜುಗರವುಂಟಾಗುತ್ತದೆ. ರಮೇಶ್ ಬಿಜೆಪಿಯಲ್ಲಿ ಇದ್ದಾರೆ. ಸತೀಶ್ ಕಾಂಗ್ರೆಸ್ನಲ್ಲಿ ಇದ್ದಾರೆ. ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಹೇಳಿರುವಂತೆ ರಮೇಶ್ ತಮ್ಮ ಕುಟುಂಬದ ಯಾರ ಮಾತನ್ನೂ ಕೇಳುವುದಿಲ್ಲ. ತಮಗೂ ಅವರಿಗೂ ರಾಜಕೀಯ ಸಂಬಂಧ ಇಲ್ಲ. ಆದರೆ, ಅವರೇ ಹೇಳುವಂತೆ, ಈ ಸಿಡಿ ಪ್ರಕರಣ ಇಡೀ ಕುಟುಂಬಕ್ಕೆ ಮುಜುಗರವುಂಟು ಮಾಡುವಂತಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಹೀಗೆ.. ಸತೀಶ್ ಮಾತನಾಡಿ ವಿನಂತಿ ಮಾಡಿದ ನಂತರ, ಸಿದ್ದರಾಮಯ್ಯ ಮನಸ್ಸು ಬದಲಾವಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗ ಸಿದ್ದರಾಮಯ್ಯ ಮಾಡಿರುವ ತಂತ್ರದ ಪ್ರಕಾರ, ಎರಡು ಮುಖ್ಯ ವಿಚಾರಗಳನ್ನಿಟ್ಟುಕೊಂಡು ಅವರು ಆಡಳಿತ ಪಕ್ಷಕ್ಕೆ ಮುಜುಗರವುಂಟು ಮಾಡಲು ತಯಾರಾಗುತ್ತಿದ್ದಾರೆ. ಮೊದಲನೆಯ ವಿಷಯ: ಭದ್ರಾವತಿ ಶಾಸಕ, ಸಂಗಮೇಶ್ ಅವರ ಮಗನನ್ನು ಬಂಧಿಸಿರುವ ವಿಚಾರ. ಶನಿವಾರ ಬೆಳಿಗ್ಗೆ ಅವರ ಮಗನ ಬಂಧನ ಆಗಿರುವ ಹಿನ್ನೆಲೆಯಲ್ಲಿ ಇದನ್ನು ಎತ್ತಿಕೊಳ್ಳುವಂತೆ ಕಾಣುತ್ತಿದೆ. ಅದೇ ರೀತಿ, ಆರು ಜನ ಮಂತ್ರಿಗಳು ನ್ಯಾಯಾಲಯದ ಮೆಟ್ಟಲು ಏರಿರುವುದನ್ನು ಎತ್ತಿಕೊಂಡು ಆಡಳಿತ ಬಿಜೆಪಿಗೆ ಮುಖಭಂಗ ಮಾಡುವ ತಂತ್ರಗಾರಿಕೆಯಲ್ಲಿ ಅವರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದು ಕಾರಣವಿದೆ. ಅದೇನೆಂದರೆ, ಈ ತಂತ್ರದ ಮೂಲಕ ನಾಯಕ ಸಮಾಜದ ವಿಶ್ವಾಸಗಳಿಸುವ ಮತ್ತೊಂದು ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿರುವಂತಿದೆ. ಈ ಸಮಾಜ ಕಾಂಗ್ರೆಸ್ ಕೈ ಬಿಟ್ಟಿದೆ ಎಂಬುದು ಕಳೆದ ಎರಡು ಚುನಾವಣೆಯ ಫಲಿತಾಂಶವನ್ನು ನೋಡಿದಾಗ ದೃಢಪಟ್ಟಿದೆ. ಇಂತದೊಂದು ಮೌನ ಸಂದೇಶ (gesture) ನೀಡಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ಮತ್ತೊಬ್ಬ ನಾಯಕ, ಬಿ. ಶ್ರೀರಾಮುಲು ತರಹ, ಜಾರಕಿಹೊಳಿ ಕುಟುಂಬದ ರಾಜಕಾರಿಣಿಗಳನ್ನು ಸಹ ನಾಯಕ ಜನಾಂಗದ ಪ್ರಮುಖ ನಾಯಕರು ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ ಈ ತಂತ್ರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಗುರುವಾರ ಪ್ರಾರಂಭವಾದ ಅಧಿವೇಶನದ ಮೊದಲ ಎರಡು ದಿನ ಒಂದು ದೇಶ, ಒಂದೇ ಚುನಾವಣೆ ಬಗ್ಗೆ ಚರ್ಚೆ ನಡೆಯುವುದಿತ್ತು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆ ಕುರಿತು ಮೊದಲೇ ಸುತ್ತೋಲೆ ಹೊರಡಿಸಿ ಸದಸ್ಯರಿಗೆ ತಯಾರಾಗಿ ಬರಲು ಹೇಳಿದ್ದರು. ಆದರೆ, ಕಾಂಗ್ರೆಸ್ ಮಾತ್ರ ಇದಕ್ಕೆ ಅವಕಾಶ ನೀಡಬಾರದು ಎಂಬ ನಿರ್ಧಾರದೊಂದಿಗೆ ಸದನಕ್ಕೆ ಬಂದಿತ್ತು. ಆ ವಿಷಯ ಚರ್ಚೆ ಮಾಡಲು ಎರಡು ದಿನ ಮೀಸಲಿಡಲಾಗಿತ್ತು. ಆದರೆ, ಎರಡೂ ದಿನ ಕಾಂಗ್ರೆಸ್ ಪಕ್ಷ ಧರಣಿ ಮಾಡಿದ್ದರಿಂದ ಆ ವಿಚಾರದ ಕುರಿತು ಸದನದಲ್ಲಿ ಚರ್ಚೆ ಮಾಡಲು ಆಗಲಿಲ್ಲ.
ಇದನ್ನೂ ಓದಿ:
ವಿಚಾರ ಪ್ರಸ್ತಾಪಿಸಿದವರೇ ಅದನ್ನ ಕ್ಲೋಸ್ ಮಾಡಬೇಕು: ಶಾಸಕ ಬಸನಗೌಡ ಯತ್ನಾಳ್
ರಮೇಶ್ ಜಾರಕಿಹೊಳಿ CD ವಿಚಾರದಲ್ಲಿ ನನ್ನ ಹೆಸರು ಯಾಕೆ ಎಳೆದು ತರ್ತಿದ್ದಾರೆ ಗೊತ್ತಿಲ್ಲ -ಲಕ್ಷ್ಮೀ ಹೆಬ್ಬಾಳ್ಕರ್