ಲಕ್ನೋ ಹೋಟೆಲ್ ಬೆಂಕಿ ದುರಂತ; ಮದುವೆ ನಿಶ್ಚಯವಾಗಿದ್ದ ಜೋಡಿ ಸಾವಿನಲ್ಲಿ ಒಂದಾದರು!
ಡಿಸೆಂಬರ್‌ನಲ್ಲಿ ವಿವಾಹವಾಗಲಿದ್ದ ಅವರಿಬ್ಬರಿಗೂ ಈಗಾಗಲೇ ನಿಶ್ಚಿತಾರ್ಥವಾಗಿತ್ತು. ತಮ್ಮ ಮದುವೆಯ ಶಾಪಿಂಗ್‌ಗಾಗಿ ದೆಹಲಿಗೆ ಪ್ರಯಾಣಿಸಲು ಪ್ಲಾನ್ ಮಾಡಿದ್ದರು. ಆದರೆ ವಿಧಿಯ ಆಟ ಬೇರೆಯದೇ ಇತ್ತು.
ಲಕ್ನೋ: ಲಕ್ನೋದ ಲೆವಾನಾ ಸೂಟ್ಸ್ ಹೋಟೆಲ್‌ನಲ್ಲಿ ಬೆಂಕಿ ದುರಂತ ಸಂಭವಿಸಿ ನಾಲ್ಕು ಜನರು ಸಾವನ್ನಪ್ಪಿ, ಕನಿಷ್ಠ 10 ಮಂದಿ ಗಾಯಗೊಂಡಿದ್ದರು. ಈ ಹೋಟೆಲ್‌ನಲ್ಲಿ ಮೃತಪಟ್ಟವರ ಪೈಕಿ ಮದುವೆ ನಿಶ್ಚಯವಾಗಿದ್ದ ಒಂದು ಹೊಸ ಜೋಡಿಯೂ ಇತ್ತು ಎಂಬುದು ಈಗ ಬೆಳಕಿಗೆ ಬಂದಿದೆ. ಲಕ್ನೋದ ನಾಕಾ ಹಿಂದೋಲಾ ಪ್ರದೇಶದ ನಿವಾಸಿ ಗುರ್ನೂರ್ ಸಿಂಗ್ ಆನಂದ್ (28) ಮತ್ತು ಸಾಹಿಬಾ ಕೌರ್ (26) ಅವರು ಲೆವಾನಾ ಸೂಟ್ಸ್ ಹೋಟೆಲ್‌ನಲ್ಲಿ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಹೋಗಿದ್ದರು. ಬರ್ತ್ಡೇ ಪಾರ್ಟಿ ಬಳಿಕ ಅವರಿಬ್ಬರೂ ಅಲ್ಲೇ ಉಳಿದುಕೊಂಡಿದ್ದರು. ಆಗ ಈ ದುರಂತ ಸಂಭವಿಸಿದೆ.
ಡಿಸೆಂಬರ್‌ನಲ್ಲಿ ವಿವಾಹವಾಗಲಿದ್ದ ಅವರಿಬ್ಬರಿಗೂ ಈಗಾಗಲೇ ನಿಶ್ಚಿತಾರ್ಥವಾಗಿತ್ತು. ತಮ್ಮ ಮದುವೆಯ ಶಾಪಿಂಗ್‌ಗಾಗಿ ದೆಹಲಿಗೆ ಪ್ರಯಾಣಿಸಲು ಪ್ಲಾನ್ ಮಾಡಿದ್ದರು. ಆದರೆ ವಿಧಿಯ ಆಟ ಬೇರೆಯದೇ ಇತ್ತು. ಮದುವೆಯಾಗಿ ಜೀವನಪೂರ್ತಿ ಒಟ್ಟಿಗಿರಬೇಕೆಂದುಕೊಂಡಿದ್ದ ಜೋಡಿ ಇದೀಗ ಸಾವಿನಲ್ಲಿ ಒಂದಾಗಿದೆ ಎಂದು ಅವರ ಸಂಬಂಧಿಕರು ಹೇಳಿದ್ದಾರೆ.
ಇದನ್ನೂ ಓದಿ: Big News: ಮೊರಾದಾಬಾದ್ನ 3 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; ಐವರು ಸಾವು, 7 ಜನರಿಗೆ ಗಾಯ
ಇವರಿಬ್ಬರೂ ಕಳೆದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಮವಾರ ಬೆಳಗ್ಗೆ ಲಕ್ನೋದ 4 ಅಂತಸ್ತಿನ ಹೋಟೆಲ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಸಾವನ್ನಪ್ಪಿದ ನಾಲ್ವರಲ್ಲಿ ಗುರ್ನೂರ್ ಮತ್ತು ಸಾಹಿಬಾ ಕೂಡ ಸೇರಿದ್ದಾರೆ. ಗುರ್ನೂರ್ ಅವರು ಈವೆಂಟ್ ಪ್ಲಾನರ್ ಆಗಿದ್ದರು ಮತ್ತು ಲಕ್ನೋದಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ನಡೆಸುತ್ತಿದ್ದರು. ಸಾಹಿಬಾ ಅವರು ಸಾಮಾಜಿಕ ಮಾಧ್ಯಮ ಕಂಟೆಂಟ್ ಕ್ರಿಯೇಟರ್ ಮತ್ತು ಲಕ್ನೋ ಮೂಲದ ಮೇಕಪ್ ಕಲಾವಿದರಾಗಿದ್ದರು.
ಸೋಮವಾರ ಲಕ್ನೋದ ಲೆವಾನಾ ಸೂಟ್ಸ್‌ನಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, ಕನಿಷ್ಠ 10 ಮಂದಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ವಾಣಿಜ್ಯ ಕೇಂದ್ರವಾದ ಹಜರತ್‌ಗಂಜ್‌ನಲ್ಲಿರುವ ಮದನ್ ಮೋಹನ್ ಮಾಳವಿಯಾ ಮಾರ್ಗದಲ್ಲಿರುವ ಹೋಟೆಲ್ ಬೆಂಕಿ ಅವಘಡದಿಂದ ಭಾರೀ ಸುದ್ದಿಯಾಗಿತ್ತು. ಈ ಹೋಟೆಲನ್ನು ಕೆಡವಲು ಸೂಚಿಸಲಾಗಿದೆ. ಹಾಗೇ, ಪೊಲೀಸರು ಹೋಟೆಲ್‌ನ ಇಬ್ಬರು ಮಾಲೀಕರು ಮತ್ತು ಅದರ ಜನರಲ್ ಮ್ಯಾನೇಜರ್‌ಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ರಕ್ಷಣಾ ತಂಡಗಳು ಕಟ್ಟಡದೊಳಗೆ ಸಿಲುಕಿರುವ ಹೆಚ್ಚಿನ ಜನರನ್ನು ಹುಡುಕುತ್ತಲೇ ಇದ್ದಾಗ ಬೆಂಕಿಯನ್ನು ನಂದಿಸಲು 6 ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿತು. ಆರಂಭದಲ್ಲಿ 10 ಜನರನ್ನು ಶ್ಯಾಮ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಈ ಪೈಕಿ ಇಬ್ಬರು ಮೃತಪಟ್ಟಿದ್ದು, 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊನೆಗೆ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Tue, 6 September 22