ಜೋಗ ಜಲಪಾತದ ಗುಂಡಿಯಲ್ಲಿ ಕೋತಿರಾಜ್​ ಸಾಕ್ಷ್ಯಚಿತ್ರ ಶೂಟಿಂಗ್

| Updated By: ಆಯೇಷಾ ಬಾನು

Updated on: Dec 18, 2020 | 6:24 AM

ದಿ ಇನ್​ಕ್ರೆಡಿಬಲ್ ಮಂಕಿ ಮ್ಯಾನ್ ಶೀರ್ಷಿಕೆಯಲ್ಲಿ ಡಾಕ್ಯುಮೆಂಟರಿ ಸಿದ್ದವಾಗುತ್ತಿದೆ. ಅನಿವಾಸಿ ಭಾರತೀಯ ಸ್ಟಾನ್ಲಿ ಎನ್ನುವವರು ‘ದಿ ಇನ್​ಕ್ರೆಡಿಬಲ್ ಮಂಕಿ ಮ್ಯಾನ್’ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅತ್ಯಂತ ಸಹಜವಾಗಿ ಚಿತ್ರೀಕರಣ ಮಾಡಲಾಗುತ್ತಿದ್ದು, ಜೋಗ ಜಲಪಾತದ ಪ್ರಪಾತವನ್ನು, ಕೋತಿರಾಜ್ ಅದನ್ನು ಏರುತ್ತಿರುವುದನ್ನು ನೈಜವಾಗಿ ಸೆರೆಹಿಡಿಯಲಾಗುತ್ತಿದೆ.

ಜೋಗ ಜಲಪಾತದ ಗುಂಡಿಯಲ್ಲಿ ಕೋತಿರಾಜ್​ ಸಾಕ್ಷ್ಯಚಿತ್ರ ಶೂಟಿಂಗ್
ಚಿತ್ರೀಕರಣಕ್ಕಾಗಿ ಜೋಗದಲ್ಲಿ ಸಾಹಸ ಪ್ರದರ್ಶಿಸುತ್ತಿರುವ ಕೋತಿರಾಜ್
Follow us on

ಶಿವಮೊಗ್ಗ: ಚಿತ್ರದುರ್ಗದ ಬಂಡೆಗಳನ್ನು ಸರಸರನೆ ಏರುತ್ತಾ, ಅಪಾಯಕಾರಿ ಎನ್ನುವ ಜಾಗದಲ್ಲೂ ಸರಾಗವಾಗಿ ಸಾಗುತ್ತಾ, ನೋಡುವವರ ಮೈ ಜುಂ ಎನ್ನಿಸುವಂತೆ ಸಾಹಸ ಪ್ರದರ್ಶಿಸಿ ಮನೆಮಾತಾದವನು ಜ್ಯೋತಿರಾಜ್​ ಅಲಿಯಾಸ್ ಕೋತಿರಾಜ್. ಕೋತಿರಾಜ್​ ಎಂಬ ಹೆಸರು ಆತನಿಗೆ ಸುಖಾಸುಮ್ಮನೆ ದಕ್ಕಲಿಲ್ಲ ನಿಜ. ಆದರೆ, ಈಗ ಆತ ಪಟಪಟನೆ ಬಂಡೆ ಏರುವುದನ್ನು ನೋಡಿದರೆ ಕೋತಿಗಳೂ ನಾಚಬೇಕು ಎನ್ನಿಸುವುದು ಸುಳ್ಳಲ್ಲ.

ಮೊದಲಿಗೆ ಚಿತ್ರದುರ್ಗ ಕಲ್ಲು ಬಂಡೆಗಳನ್ನು ಹತ್ತಿ ಪಳಗಿದ ಈತ ನಂತರ ದೊಡ್ಡ ದೊಡ್ಡ ಸಾಹಸಕ್ಕೆ ಕೈ ಹಾಕುತ್ತಲೇ ಹೋದ. ಕಣ್ಮುಂದೆ ಎಂತಹಾ ಕಡಿದಾದ ಬಂಡೆಯಿದ್ದರೂ ಕಣ್ಮುಚ್ಚಿ ಬಿಡುವಷ್ಟರಲ್ಲಿ ಅದನ್ನು ಏರಬಲ್ಲೆ ಎಂಬ ಉತ್ಸಾಹ ಆತನನ್ನು ಮತ್ತೆ ಮತ್ತೆ ಮೇಲೇರುತ್ತಲೇ ಇರುವಂತೆ ಮಾಡಿತು. ಆತ ಬರಿಗೈಯಲ್ಲಿ ಬಂಡೆ ಏರುತ್ತಿದ್ದರೆ ನೋಡುವವರ ಮೈ ಬೆವರಬೇಕು, ಎದೆಬಡಿತ ಏರುಪೇರಾಗಬೇಕು.. ಅಂತಹಾ ಅಪಾಯಕಾರಿ ಸಾಹಸ ಆತನದ್ದು.

ವಿಶ್ವವಿಖ್ಯಾತ ಜೋಗ ಜಲಪಾತದ ಕಡಿದಾದ ಅಪಾಯಕಾರಿ ಬಂಡೆಗಳನ್ನು ಏರಿದ ಸಾಧನೆಯೂ ಈತನ ಹೆಸರಿನಲ್ಲಿದೆ. ಯಾವುದೇ ಸಲಕರಣೆ ಅಥವಾ ಸುರಕ್ಷಾ ವಸ್ತುಗಳನ್ನು ಬಳಸಿಕೊಳ್ಳದೇ ಕೊರೆಯುವ ಚಳಿ ಮತ್ತು ಸೂಜಿ ಮೊನೆಯಂತೆ ಮೈ ಚುಚ್ಚುವ ಜಲಪಾತದ ನೀರಿನ ಹೊಡೆತದ ನಡುವೆ ಬಂಡೆ ಏರುವುದು ಸಣ್ಣ ಮಾತೇನಲ್ಲ.

ಅತಿ ಅಪಾಯಕಾರಿ ಜೋಗ ಜಲಪಾತದ ಬಂಡೆಗಳನ್ನು ಬರಿಗಾಲಿನಿಂದ ಹತ್ತಿದ್ದೇ ಹತ್ತಿದ್ದು, ಕೋತಿರಾಜ್​ ಸಾಧನೆ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ವಿದೇಶಗಳಲ್ಲೂ ಕೋತಿರಾಜ್​ಗೆ ಅಭಿಮಾನಿಗಳು ಹುಟ್ಟಿಕೊಂಡರು. ಈ ಸಾಧನೆ ಬಳಿಕ ಆತನನ್ನು ಇಂಡಿಯನ್ ಸ್ಪೈಡರ್ ಮ್ಯಾನ್ ಎಂದೇ ಗುರುತಿಸಲಾಗಿದೆ.

ಸದ್ಯ ಕಳೆದ ಮೂರು ದಿನಗಳಿಂದ ಜೋಗದ ಸುತ್ತ ಕೋತಿರಾಜ್​ನದ್ದೇ ಸುದ್ದಿ. ಈ ಸಲ ಆತ ಮತ್ತೆ ಜೋಗ ಬಂಡಗಳನ್ನು ಏರುತ್ತಿರುವುದು ಆತನ ಕುರಿತಾದ ಸಾಕ್ಷ್ಯಚಿತ್ರಕ್ಕಾಗಿ ಎನ್ನುವುದು ವಿಶೇಷ. ಇದುವರೆಗೆ ಕೋತಿರಾಜ್ ಅಪರೂಪದ ಎಲ್ಲ ಸಾಧನೆಗಳನ್ನು ಒಳಗೊಂಡ ಸಾಕ್ಷ್ಯಚಿತ್ರದ ಚಿತ್ರೀಕರಣ ಜೋಗದಲ್ಲಿ ಶುರುವಾಗಿದೆ.

‘ದಿ ಇನ್​ಕ್ರೆಡಿಬಲ್ ಮಂಕಿ ಮ್ಯಾನ್’ ಶೀರ್ಷಿಕೆಯಲ್ಲಿ ಡಾಕ್ಯುಮೆಂಟರಿ ಸಿದ್ದವಾಗುತ್ತಿದೆ. ಅನಿವಾಸಿ ಭಾರತೀಯ ಸ್ಟಾನ್ಲಿ ಎನ್ನುವವರು ‘ದಿ ಇನ್​ಕ್ರೆಡಿಬಲ್ ಮಂಕಿ ಮ್ಯಾನ್’ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅತ್ಯಂತ ಸಹಜವಾಗಿ ಚಿತ್ರೀಕರಣ ಮಾಡಲಾಗುತ್ತಿದ್ದು, ಜೋಗ ಜಲಪಾತದ ಪ್ರಪಾತವನ್ನು, ಕೋತಿರಾಜ್ ಅದನ್ನು ಏರುತ್ತಿರುವುದನ್ನು ನೈಜವಾಗಿ ಸೆರೆಹಿಡಿಯಲಾಗುತ್ತಿದೆ.

ಜೋಗ ಜಲಪಾತವನ್ನು ಹತ್ತು ಹಲವು ಬಾರಿ ಜೀವರಕ್ಷಕ ವಸ್ತುಗಳನ್ನು ಬಳಸದೆ, ಬರಿಗೈಲಿ ಹತ್ತಿಳಿದಿರುವ ಅನುಭವ ಜ್ಯೋತಿರಾಜ್​ಗೆ ಇದೆಯಾದರೂ ಜಿಲ್ಲಾಡಳಿತ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಒಟ್ಟು ನಾಲ್ಕು ದಿನಗಳ ಕಾಲ ಜೋಗಜಲಪಾತದಲ್ಲಿ ಚಿತ್ರೀಕರಣವಾಗುತ್ತಿದ್ದು, ಹೆಲಿಕ್ಯಾಮ್ ಮತ್ತು ಡ್ರೋನ್ ಬಳಸಿ ಶೂಟಿಂಗ್ ಮಾಡಲಾಗುತ್ತಿದೆ. ಜ್ಯೋತಿರಾಜ್ ಈ ಹಿಂದೆ ಜೋಗ ಜಲಪಾತದಲ್ಲಿ ಸಿಲುಕಿಕೊಂಡ ಶವಗಳನ್ನು ಮೇಲೆತ್ತಿ ತರುವ ದೃಶ್ಯ ಹಾಗೂ ಜೋಗ ಪ್ರಪಾತದಲ್ಲಿ ಒಂದು ರಾತ್ರಿ ಕಳೆದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.

ಅಮೇರಿಕಾದ ಏಂಜೆಲ್ ಪರ್ವತ ಹತ್ತುವ ಕನಸು ಕಂಡಿರುವ ಜ್ಯೋತಿರಾಜ್​ಗೆ ಆ ಅವಕಾಶ ಇನ್ನೂ ಸಿಕ್ಕಿಲ್ಲ. ಒಮ್ಮೆಯಾದರೂ ಎಂಜೆಲ್ ಪರ್ವತ ಹತ್ತಬೇಕೆನ್ನುವ ಆತನ ಕನಸಿಗೆ ಈ ಸಾಕ್ಷ್ಯಚಿತ್ರ ಮತ್ತಷ್ಟು ಶಕ್ತಿ ತುಂಬಲಿದೆ. ಜ್ಯೋತಿರಾಜ್ ಬಾಲ್ಯದಿಂದ ಇದುವರೆಗಿನ ಬದುಕಿನಲ್ಲಿ ಬಂದು ಹೋದ ಮಹತ್ವದ ಕ್ಷಣಗಳು ದಿ ಇನ್ ಕ್ರೆಡಿಬಲ್ ಮಂಕಿ ಮ್ಯಾನ್ ಸಾಕ್ಷ್ಯಚಿತ್ರದಲ್ಲಿ ಅನಾವರಣಗೊಳ್ಳಲಿದೆ ಎಂದು ಚಿತ್ರ ನಿರ್ಮಾಣ ತಂಡದವರು ತಿಳಿಸಿದ್ದಾರೆ.

Published On - 6:23 am, Fri, 18 December 20