EPFO: ಇಪಿಎಫ್ ಬಡ್ಡಿದರ ಶೇ 8.5 ನಿಗದಿ: 5 ಕೋಟಿ ಕಾರ್ಮಿಕರಿಗೆ ಖುಷಿಕೊಟ್ಟ ನಿರ್ಧಾರ

|

Updated on: Mar 04, 2021 | 5:05 PM

Employees Provident Fund Organisation: ಪಿಎಫ್ ಬಡ್ಡಿದರವನ್ನು ಕಡಿಮೆ ಮಾಡಬಹುದು ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದರು. ಆದರೆ ಅಧಿಕೃತ ಮಾಹಿತಿ ಪ್ರಕಾರ ಶೇ 8.5ರ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

EPFO: ಇಪಿಎಫ್ ಬಡ್ಡಿದರ ಶೇ 8.5 ನಿಗದಿ: 5 ಕೋಟಿ ಕಾರ್ಮಿಕರಿಗೆ ಖುಷಿಕೊಟ್ಟ ನಿರ್ಧಾರ
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ)
Follow us on

ದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (Employees Provident Fund Organisation – EPFO) ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಪ್ರಸಕ್ತ ಸಾಲಿನ ಹಣಕಾಸು ವರ್ಷಕ್ಕೆ ಅಂದರೆ 2020-21ರ ಸಾಲಿಗೆ ಬಡ್ಡಿದರವನ್ನು ಶೇ 8.5 ಎಂದು ನಿರ್ಧರಿಸಿದೆ. ಸತತ ಎರಡು ವರ್ಷಗಳಿಂದ ಪಿಎಫ್​ ಬಡ್ಡಿದರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಸಂಕಷ್ಟ ಸ್ಥಿತಿ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಪಿಎಫ್ ಬಡ್ಡಿದರವನ್ನು ಕಡಿಮೆ ಮಾಡಬಹುದು ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದರು.

ಕಾರ್ಮಿಕರ ಭವಿಷ್ಯ ನಿಧಿಯ ಕೇಂದ್ರ ಮಂಡಳಿಯ ವಿಶ್ವಸ್ಥರು ಗುರುವಾರ ಶ್ರೀನಗರದಲ್ಲಿ ಸಭೆ ಸೇರಿ, ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಸುದೀರ್ಘವಾಗಿ ಚರ್ಚಿಸಿ, ಬಡ್ಡಿದರ ನಿರ್ಣಯದ ಬಗ್ಗೆ ಕೆಲ ಹಣಕಾಸು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸಂಸ್ಥೆಯು ಅಧಿಕೃತ ಹೇಳಿಕೆ ಶೀಘ್ರ ಹೊರಬೀಳಬಹುದು ಎಂಬ ನಿರೀಕ್ಷೆಯಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಪಿಎಫ್​ಗೆ ಒಟ್ಟು ₹ 65 ಸಾವಿರ ಕೋಟಿ ಹರಿದುಬಂದಿದೆ. ಹೀಗಾಗಿ ಶೇ 8.5ರ ಬಡ್ಡಿದರ ನೀಡಲು ಸಾಧ್ಯವಾಗಿದೆ ಎಂದು ಮಂಡಳಿಯ ಸಂದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಅಂದರೆ ಮಾರ್ಚ್ 3ರಂದು ಸಭೆ ಸೇರಿದ್ದ ಪಿಎಫ್​ನ ಹಣಕಾಸು ಸಲಹಾ ಸಮಿತಿ ಸದಸ್ಯರು ಸಹ ಶೇ 8.5ರ ಬಡ್ಡಿದರ ಪಾವತಿಗೆ ಸಲಹೆ ಮಾಡಿದ್ದರು. ದೇಶದಾದ್ಯಂತ ಇರುವ ಸುಮಾರು 5 ಕೋಟಿ ಸಕ್ರಿಯ ಸದಸ್ಯರಿಗೆ ಪಿಎಫ್​ನ ಈ ನಿರ್ಧಾರ ಸಂತಸ ತಂದಿದೆ. ಇದಕ್ಕಿಂತ ಕಡಿಮೆ ಬಡ್ಡಿದರ ನಿರ್ಧರಿಸಿದ್ದರೆ ಅದು ಕಳೆದ 10 ವರ್ಷಗಳ ಅತ್ಯಂತ ಕನಿಷ್ಠ ಬಡ್ಡಿದರ ಎನಿಸಿಕೊಳ್ಳುತ್ತಿತ್ತು.

2019-20ರ ಸಾಲಿನಲ್ಲಿ ಬಡ್ಡಿ ಪಾವತಿ ವಿಚಾರ ಹಲವು ಕಾರಣಗಳಿಂದಾಗಿ ಸುದ್ದಿಯಲ್ಲಿತ್ತು. ಪಿಎಫ್​ ಹೊಂದಿರುವ ವಿವಿಧ ಕಂಪನಿಗಳ ಷೇರುಗಳ ಮಾರಾಟ ಮತ್ತು ಎರಡು ಕಂತಿನಲ್ಲಿ ಬಡ್ಡಿ ಪಾವತಿ ಕುರಿತು ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ವರ್ಷ ಶೇ 8.5ರ ಬಡ್ಡಿ ನಿಗದಿ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ನಿಮ್ಮ ಗ್ರಾಹಕರನ್ನು ಅರಿಯಿರಿ (Know Your Custromers – KYC) ದಾಖಲೆಗಳ ಸಮಸ್ಯೆಯಿಂದಾಗಿ ಕಳೆದ ವರ್ಷ ಸುಮಾರು 40 ಲಕ್ಷ ಇಪಿಎಫ್​ ಸದಸ್ಯರಿಗೆ ಹಣ ಪಾವತಿಯಲ್ಲಿ ಸಮಸ್ಯೆಯಾಗಿತ್ತು.

ಕೇಂದ್ರ ಕಾರ್ಮಿಕ ಖಾತೆ ಸಚಿವ ಸಂತೋಷ್ ಕುಮಾರ್ ಗಂಗ್ವಾರ್​ ನೇತೃತ್ವದ ಸಮಿತಿ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ. ಪಿಎಫ್​ ಸಂಘಟನೆಯ ವಿಶ್ವಸ್ಥರು ತೆಗೆದುಕೊಂಡಿರುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಬೇಕಿದೆ. ಅನಂತರವಷ್ಟೇ ಈ ಕುರಿತು ಅಧಿಕೃತ ಕೇಂದ್ರ ಸರ್ಕಾರ ಅಧಿಕೃತ ಹೇಳಿಕೆ ಹೊರಡಿಸಲಿದೆ.

ವರ್ಷ, EPF ಬಡ್ಡಿದರ
2020-21 – ಶೇ 8.50
2019–20 – ಶೇ 8.50
2018–19 – ಶೇ 8.65
2017–18 – ಶೇ 8.55
2016–17 – ಶೇ 8.80
2015–16 – ಶೇ 8.80
2014–15 – ಶೇ 8.75

ಇದನ್ನೂ ಓದಿ: Employees Provident Fund | ಇಳಿಗಾಲದ ಇಡಗಂಟಿಗೆ ಅತ್ಯುತ್ತಮ ಉಪಾಯ ನೌಕರರ ಭವಿಷ್ಯ ನಿಧಿ

ಇದನ್ನೂ ಓದಿ: ದಿನಕ್ಕೆ 411 ರೂ. ಉಳಿಸಿದರೆ 15 ವರ್ಷಕ್ಕೆ ಬರೋಬ್ಬರಿ 40.68 ಲಕ್ಷ: ಹಣಕಾಸಿನ ಆಸರೆಗೆ ಪಿಪಿಎಫ್​ ಉತ್ತಮ ಆಯ್ಕೆ

Published On - 3:15 pm, Thu, 4 March 21