ದಿನಕ್ಕೆ 411 ರೂ. ಉಳಿಸಿದರೆ 15 ವರ್ಷಕ್ಕೆ ಬರೋಬ್ಬರಿ 40.68 ಲಕ್ಷ: ಹಣಕಾಸಿನ ಆಸರೆಗೆ ಪಿಪಿಎಫ್ ಉತ್ತಮ ಆಯ್ಕೆ
ಎಲ್ಲಿ ಹಣ ಉಳಿಸಬೇಕು? ಹೇಗೆ ಉಳಿಸಬೇಕು? ಎಂದು ಯೋಚಿಸುತ್ತಿದ್ದೀರಾ? ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ನಷ್ಟು (Public Provident Fund - PPF) ಉತ್ತಮ ಆಯ್ಕೆ ಬೇರೆ ಯಾವುದಿದೆ?
ನೀವು ಹಣ ಉಳಿಸಬೇಕೆಂದು ಯೋಚಿಸುತ್ತಿದ್ದೀರಾ ಎಂದು ಕೇಳಿದರೆ ಎಲ್ಲರ ಉತ್ತರವೂ ಹೌದು ಎಂದೇ ಆಗಿರುತ್ತದೆ. ಯಾರಾದರೂ ಇಲ್ಲ ಎಂದು ಹೇಳುವವರನ್ನು ತೋರಿಸಿ ನೋಡುವಾ! ಖಂಡಿತ ಹಣ ಉಳಿಸಲ್ಲ ಎಂದು ಹೇಳುವ ಒಬ್ಬನೇ ಒಬ್ಬ ಮನುಷ್ಯನೂ ಸಿಗುವುದಿಲ್ಲ. ಹಾಗಾದರೆ ಎಲ್ಲಿ ಹಣ ಉಳಿಸಬೇಕು? ಹೇಗೆ ಉಳಿಸಬೇಕು? ಎಂದು ಯೋಚಿಸುತ್ತಿದ್ದೀರಾ? ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ನಷ್ಟು (Public Provident Fund – PPF) ಉತ್ತಮ ಆಯ್ಕೆ ಬೇರೆ ಯಾವುದಿದೆ?
ನೌಕರರ ಭವಿಷ್ಯ ನಿಧಿ (Employee Provident Fund) ನಿಮಗೆ ಗೊತ್ತಿರಬಹುದು. ಬಹುತೇಕ ನೌಕರರು ಕೆಲಸಕ್ಕೆ ಸೇರಿದ ಮೊದಲ ತಿಂಗಳಿನಿಂದಲೇ ಇಪಿಎಫ್ ಕಟಾವಣೆಯೂ ಆರಂಭವಾಗುತ್ತದೆ. ನಿಮ್ಮ ವಂತಿಕೆಯ ಜೊತೆಗೆ ನಿಮಗೆ ನೌಕರಿ ಕೊಟ್ಟವರೂ ಅಷ್ಟು ಹಣ ನೀಡಿ ಪಿಎಫ್ ದೊಡ್ಡ ಗಂಟಾಗಿ ಬೆಳೆಯುತ್ತದೆ. ಸಂಘಟಿತ ವಲಯದ ನೌಕರರಿಗೆ ಆರ್ಥಿಕ ಭದ್ರತೆ ಒದಗಿಸುವ ಈ ಸೌಲಭ್ಯ ಅಸಂಘಟಿತ ವಲಯದಲ್ಲಿರುವವರಿಗೂ ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಹಣಕಾಸು ಇಲಾಖೆ ಜಾರಿಗೆ ತಂದ ಮಹತ್ವದ ಯೋಜನೆ ಪಿಪಿಎಫ್. ಈ ಯೋಜನೆಗೆ ಇರುವ ನಿಯಮಗಳು, ಬಡ್ಡಿದರ ಹೆಚ್ಚುಕಡಿಮೆ ಇಪಿಎಫ್ ಮಾದರಿಯಲ್ಲಿಯೇ ಇವೆ. ಇಪಿಎಫ್ ಸೌಲಭ್ಯ ಇರುವವರೂ ಸೇರಿದಂತೆ ಯಾವುದೇ ಭಾರತೀಯ ಈ ಖಾತೆ ತೆರೆಯಬಹುದು.
ಭಾರತೀಯ ಸ್ಟೇಟ್ ಬ್ಯಾಂಕ್ (State Bank of India – SBI) ಮೂಲಕ ಕೇಂದ್ರ ಸರ್ಕಾರವೇ ನೇರವಾಗಿ ಈ ಯೋಜನೆಯನ್ನು ನಿರ್ವಹಿಸುತ್ತಿದೆ. ವರ್ಷಕ್ಕೆ ಒಮ್ಮೆ ಬಡ್ಡಿದರವನ್ನು ಘೋಷಿಸುತ್ತದೆ. ಅಂಚೆ ಕಚೇರಿ, ಐಸಿಐಸಿಐ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಹಲವೆಡೆ ಪಿಪಿಎಫ್ ಖಾತೆ ತೆಗೆಯಬಹುದು. ಒಮ್ಮೆ ತೆರೆದ ಖಾತೆ ಸತತ 15 ವರ್ಷ ಅಸ್ತಿತ್ವದಲ್ಲಿರುತ್ತದೆ. ವರ್ಷಕ್ಕೆ ಕನಿಷ್ಠ ₹ 500, ಗರಿಷ್ಠ ₹ 1.5 ಲಕ್ಷ ಹೂಡಿಕೆ ಮಾಡಬಹುದು. ಪಿಪಿಎಫ್ ಹೂಡಿಕೆಯ ಮೊತ್ತ, ಬಡ್ಡಿ ಮತ್ತು ಪರಿಪಕ್ವತೆಯ ಮೊತ್ತ ಸಂಪೂರ್ಣ ತೆರಿಗೆ ಮುಕ್ತ. ವಾಣಿಜ್ಯ ವಾಜ್ಯಗಳಿಂದಲೂ ಪಿಪಿಎಫ್ ಖಾತೆಯ ಹಣಕ್ಕೆ ವಿನಾಯ್ತಿ ಅಂದ್ರೆ. ತೀರಾ ದುಸ್ತರ ಸಂದರ್ಭದಲ್ಲಿ ನಿಮಗೆ ಒದಗುವ ನಿಜವಾದ ನಂಟ ಇದು.
ದಿನಕ್ಕೆ ₹ 411 ಉಳಿಸಿದರೆ, 15 ವರ್ಷಕ್ಕೆ ₹ 40.68 ಲಕ್ಷ ಹಣ ಉಳಿಸಬೇಕು ಎಂದು ಆಲೋಚಿಸುತ್ತಿರುವ ನಮ್ಮ ನಿಮ್ಮಂಥವರಿಗಾಗಿ ಇರುವ ಅತ್ಯುತ್ತಮ ಯೋಜನೆ ಇದು. ಪ್ರತಿನಿತ್ಯ ₹ 411 ಒಂದೆಡೆಗೆ ಇರಿಸಿ, ತಿಂಗಳಿಗೊಮ್ಮೆ ಅದನ್ನು ಪಿಪಿಎಫ್ನಲ್ಲಿ ತೊಡಗಿಸಿದರೆ ಕೇವಲ 15 ವರ್ಷಗಳಲ್ಲಿ ನಿಮಗೆ ₹ 40.68 ಲಕ್ಷ ಸಿಗುತ್ತೆ! ಎಷ್ಟು ದೊಡ್ಡ ಮೊತ್ತದ ಹಣ ಅಲ್ವಾ? ಒಂದು ವರ್ಷ ಪ್ರತಿದಿನ ₹ 411 ಒಂದು ಕಡೆ ಎತ್ತಿಟ್ಟುಕೊಳ್ಳಿ. ತಿಂಗಳಿಗೆ 30 ಅಥವಾ 31 ದಿನಗಳಿವೆ. ತಿಂಗಳಿಗೆ ಸರಾಸರಿ ₹ 12 ಸಾವಿರವನ್ನು ನಿಮ್ಮ ಪಿಪಿಎಫ್ ಖಾತೆಗೆ ಜಮಾ ಮಾಡುತ್ತಾ ಬನ್ನಿ. ಅಂದರೆ ವರ್ಷಕ್ಕೆ ನೀವು ₹ 1.5 ಲಕ್ಷ ಹೂಡಿಕೆ ಮಾಡಿದಂತೆ ಆಗುತ್ತೆ. ಈ ಉಳಿತಾಯದ ಶಿಸ್ತನ್ನು ಸತತ 15 ವರ್ಷ ಪಾಲಿಸಿದರೆ ಒಟ್ಟು ₹ 22.5 ಹೂಡಿಕೆ ಮಾಡಿರುತ್ತೀರಿ. ಹಾಲಿ ಚಾಲ್ತಿಯಲ್ಲಿರುವ ಶೇ 7.1ರ ಬಡ್ಡಿದರದಲ್ಲಿ ಲೆಕ್ಕ ಹಾಕಿದರೆ 15 ವರ್ಷಗಳಿಗೆ ನಿಮ್ಮ ಹಣ ₹ 40,68,209 ಆಗಿರುತ್ತದೆ. ಅಂದಹಾಗೆ ಪ್ರತಿ ವರ್ಷ ನೀವು ತುಂಬುವ ₹ 1.50 ಲಕ್ಷಕ್ಕೆ 15 ವರ್ಷಕ್ಕೆ ನಿಮಗೆ ದೊರೆಯುವ ಬಡ್ಡಿಯೇ ₹ 18,18,209.
ಸಿಗಲಿದೆ 80 C ವಿನಾಯತಿ ಆದಾಯ ತೆರಿಗೆ ವಿನಾಯ್ತಿ ಯೋಜನೆಗಳ ಪೈಕಿಯೂ ಪಿಪಿಎಫ್ ಮೊದಲ ಸ್ಥಾನದಲ್ಲಿದೆ. EEE – (Exempt Exempt Exempt) ಅಂದ್ರೆ ಹೂಡಿಕೆಯ ಮೊತ್ತ, ಬಡ್ಡಿ ಮತ್ತು ಪರಿಪಕ್ವತೆಯ ಮೊತ್ತವೂ ಮೂಲದಲ್ಲಿ ಅಂದ್ರೆ, ನಿಮ್ಮ ಆದಾಯದಿಂದಲೇ ಕಡಿತಗೊಳ್ಳುವ ತೆರಿಗೆ ವಿನಾಯ್ತಿಗೆ ಒಳಪಡುತ್ತದೆ. ಹೀಗಾಗಿಯೇ ಇದು ಭಾರತದ ಅತ್ಯಂತ ಜನಪ್ರಿಯ ತೆರಿಗೆ ಯೋಜನೆ ಎನಿಸಿಕೊಂಡಿದೆ.
ಎಸ್ಬಿಐ, ಐಸಿಐಸಿಐ ಸೇರಿದಂತೆ ಹಲವು ಬ್ಯಾಂಕ್ಗಳಲ್ಲಿ ಶಾಖೆಗೆ ತೆರಳದೆಯೇ ಆನ್ಲೈನ್ ಬ್ಯಾಂಕಿಂಗ್ ಮೂಲಕ ಪಿಪಿಎಫ್ ಖಾತೆ ತೆರೆಯಬಹುದು. ಅಂಚೆ ಕಚೇರಿಯಲ್ಲಿಯೇ ಗಮನಾರ್ಹ ಪ್ರಮಾಣದ ಪಿಪಿಎಫ್ ಅಕೌಂಟ್ ತೆರೆಯುತ್ತವೆ ಎನ್ನುವುದು ಗಮನಾರ್ಹ ಸಂಗತಿ. ಹೆಚ್ಚಿನ ಮಾಹಿತಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ವೆಬ್ಸೈಟ್ ನೋಡಿ.
ಇದನ್ನೂ ಓದಿ: ಇಳಿಗಾಲದ ಇಡಗಂಟಿಗೆ ಅತ್ಯುತ್ತಮ ಉಪಾಯ ನೌಕರರ ಭವಿಷ್ಯ ನಿಧಿ
ಇದನ್ನೂ ಓದಿ: ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..
Published On - 9:20 pm, Sun, 21 February 21