ಕ್ರೀಮ್ ಬಳಸಿದರೂ ಕೂದಲು ಬೆಳೆಯಲಿಲ್ಲ! ಜಾಹೀರಾತು ಮಾಡೆಲ್​ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಕೇರಳ, ತ್ರಿಶ್ಶೂರ್​ನ ಜಿಲ್ಲಾ ಬಳಕೆದಾರರ ಪರಿಹಾರ ವೇದಿಕೆ, ಕ್ರೀಮ್ ತಯಾರಕ ಸಂಸ್ಥೆ ಧಾತ್ರಿ ಹೇರ್ ಕ್ರೀಮ್ ಹಾಗೂ ನಟ ಅನೂಪ್ ಮೆನನ್​ಗೆ ತಲಾ 10,000 ರೂಪಾಯಿಗಳ ದಂಡ ವಿಧಿಸಿದೆ.

ಕ್ರೀಮ್ ಬಳಸಿದರೂ ಕೂದಲು ಬೆಳೆಯಲಿಲ್ಲ! ಜಾಹೀರಾತು ಮಾಡೆಲ್​ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ
ಮಲಯಾಳಂ ನಟ ಅನೂಪ್ ಮೆನನ್
Edited By:

Updated on: Apr 06, 2022 | 10:57 PM

ತಿರುವನಂತಪುರ: ಕೂದಲಿಗೆ ಸಂಬಂಧಿಸಿದ ಕ್ರೀಮ್ ಉಪಯೋಗದ ಬಗ್ಗೆ ಪ್ರಮಾಣಿಸಿ ನೋಡದೆ, ಸುಳ್ಳು ಅನುಮೋದನೆ ನೀಡಿದ ಆರೋಪದಲ್ಲಿ, ಕ್ರೀಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಮಲಯಾಳಂ ನಟ ಅನೂಪ್ ಮೆನನ್​ರನ್ನು ಹೊಣೆಗಾರರನ್ನಾಗಿಸಿ ಕೇರಳದ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

ಕೇರಳ, ತ್ರಿಶ್ಶೂರ್​ನ ಜಿಲ್ಲಾ ಬಳಕೆದಾರರ ಪರಿಹಾರ ವೇದಿಕೆ, ಕ್ರೀಮ್ ತಯಾರಕ ಸಂಸ್ಥೆ ಧಾತ್ರಿ ಹೇರ್ ಕ್ರೀಮ್ ಹಾಗೂ ನಟ ಅನೂಪ್ ಮೆನನ್​ಗೆ ತಲಾ 10,000 ರೂಪಾಯಿಗಳ ದಂಡ ವಿಧಿಸಿದೆ. ಗ್ರಾಹಕರಿಗೆ ಸುಳ್ಳು ಭರವಸೆ ನೀಡಿದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಫ್ರಾನ್ಸಿಸ್ ವಡಕ್ಕನ್ ಎಂಬ ಗ್ರಾಹಕ, ಎ-ಒನ್ ಮೆಡಿಕಲ್ಸ್, ಧಾತ್ರಿ ಆಯುರ್ವೇದ ಪ್ರೈವೇಟ್ ಲಿಮಿಟೆಡ್ ಹಾಗೂ ಅನೂಪ್ ಮೆನನ್ ವಿರುದ್ಧ ನೀಡಿದ ದೂರಿನ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ. ದೂರುದಾರನ ಪರವಾಗಿ ವಾದ ಮಾಡಿದ ವಕೀಲ ಎ.ಡಿ. ಬೆನ್ನಿ, ತಮ್ಮ ಕಕ್ಷೀದಾರ 2012ರ ಜನವರಿಯಲ್ಲಿ, 376 ರೂಪಾಯಿ ನೀಡಿ ಹೇರ್ ಕ್ರೀಮ್ ಖರೀದಿಸಿದ್ದರು. ಜಾಹೀರಾತಿನಲ್ಲಿ ನಟ ಅನೂಪ್ ಮೆನನ್, ಆರು ವಾರಗಳ ಕಾಲ ಕ್ರೀಮ್ ಬಳಸಿದರೆ ಉದ್ದ ಕೂದಲು ಬೆಳೆಯುತ್ತದೆ ಎಂದು ಹೇಳಿದ್ದರು. ಆದ್ದರಿಂದ, ಕ್ರೀಮ್ ಬಳಕೆ ಆರಂಭಿಸಿದ್ದರು ಎಂದು ತಿಳಿಸಿದ್ದಾರೆ.

ಕ್ರೀಮ್ ಬಳಸಿದ ಬಳಿಕವೂ ತಲೆಕೂದಲಿನಲ್ಲಿ ಯಾವುದೇ ಬೆಳವಣಿಗೆ ಕಂಡುಬರಲಿಲ್ಲ. ಬಳಿಕ, ಆ ಕ್ರೀಮ್ ಬಳಸಿರುವ ಬಗ್ಗೆ ಕುಟುಂಬದ ಸದಸ್ಯರು ಹಾಗೂ ಗೆಳೆಯರು ಅಪಹಾಸ್ಯ ಮಾಡಿದ್ದರು. ಜಾಹೀರಾತು ನಂಬಿ ಮೋಸ ಹೋಗಿದ್ದಿ ಎಂದು ಹೇಳಿ ತಮಾಷೆ ಮಾಡಿದ್ದರು. ಇದರಿಂದ ನೊಂದ ಬಳಕೆದಾರ, 5 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಕೋರಿ ಬಳಕೆದಾರರ ವೇದಿಕೆಯ ಮೆಟ್ಟಿಲೇರಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನೂಪ್ ಮೆನನ್, ನಾನು ಹೇರ್ ಕ್ರೀಮ್ ಬಳಸಿಲ್ಲ. ತಾಯಿ ತಯಾರಿಸಿದ ಎಣ್ಣೆಯನ್ನು ಮಾತ್ರ ಬಳಸುತ್ತೇನೆ ಎಂದು ಹೇಳಿದ್ದಾರೆ. ಈ ಉತ್ಪನ್ನವನ್ನು ಕೂದಲಿನ ಆರೈಕೆಗೆ ತಯಾರಿಸಲಾಗಿದೆ ಎಂದು ನಾನು ಭಾವಿಸಿದ್ದೆ. ಕೂದಲು ಬೆಳವಣಿಗೆಗೆ ಎಂದು ತಿಳಿದಿರಲಿಲ್ಲ ಎಂದೂ ಅನೂಪ್ ಹೇಳಿಕೆ ನೀಡಿದ್ದಾರೆ.

ಈ ದೂರಿನಲ್ಲಿ ಆಯುರ್ವೇದ ಔಷಧಗಳನ್ನು ಪ್ರಶ್ನಿಸುತ್ತಿಲ್ಲ. ಆದರೆ, ಕ್ರೀಮ್ ಜಾಹೀರಾತಿನಲ್ಲಿ ಭರವಸೆ ನೀಡಿದಂಥಾ ಫಲಿತಾಂಶ ದೊರೆತಿಲ್ಲ ಎಂದು ಬಳಕೆದಾರರ ವೇದಿಕೆ ಆರೋಪಿಸಿದೆ.

ಕಸ ಗುಡಿಸುವ ಕೆಲಸದಿಂದ ಪಂಚಾಯತ್ ಅಧ್ಯಕ್ಷೆ ಹುದ್ದೆಯೇರಿದ ಕೇರಳದ ಮಹಿಳೆ

Published On - 5:24 pm, Tue, 5 January 21