ಕೇಂದ್ರ ಸರ್ಕಾರ ಕೆಲ ರೈತ ವಿರೋಧಿ ಕಾಯಿದೆಗಳನ್ನು ಜಾರಿಗೆ ತಂದಿದೆ. ಅದನ್ನು ಖಂಡಿಸುತ್ತೇವೆ ಎಂದು ರಾಜ್ಯದ ರೈತಾಪಿ ಜನ ಇಂದು ಕರ್ನಾಟಕ ಬಂದ್ ಆಚರಿಸುತ್ತಿದ್ದಾರೆ. ಅನ್ನದಾತರ ಕಿಚ್ಚು ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ವ್ಯಕ್ತವಾಗಿದೆ. ಆದ್ರೆ ಒಂದೆರಡು ಜಿಲ್ಲೆಗಳಲ್ಲಿ ಬಂಸ್ ಬಿಸಿ ಅಷ್ಟಾಗಿ ಆವರಿಸಿಲ್ಲ. ರಾಜ್ಯದ ತುತ್ತತುದಿಯ ಜಿಲ್ಲೆಯಾದ ಬೆಳಗಾವಿಯಲ್ಲಿ ಬಂದ್ ಹೇಗಿದೆ ಎಂದು ನೋಡುವುದಾದರೆ ಅಲ್ಲಿಯ ಜನಜೀವನ ಸಾಮಾನ್ಯವಾಗಿದೆ.
ರೈತ ಸಂಘಟನೆಗಳಿಂದ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಬೆಳಗಾವಿಯಲ್ಲಿ ಹೂವು, ತರಕಾರಿ ಮಾರುಕಟ್ಟೆಗೆ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತೆ ಹೂವು, ತರಕಾರಿ ವ್ಯಾಪಾರಿಗಳಿಂದ ವ್ಯಾಪಾರ ವಹಿವಾಟು ಸರಾಗವಾಗಿ ನಡೆದಿದೆ.
ಗ್ರಾಹಕರು ಸಹ ಎಂದಿನಂತೆ ಹೂವು, ತರಕಾರಿ ಖರೀದಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಬಸ್ ಸಂಚಾರ ಹೊರತು ಪಡಿಸಿದರೆ ಎಂದಿನಂತೆ ಜನಜೀವನ ಸಾಗಿದೆ. ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರದ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದ್ದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇದೀಗ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಬಸ್ ಸಂಚಾರ ಶುರು; ಕಿಕ್ಕಿರಿದು ತುಂಬಿರುವ ಪ್ರಯಾಣಿಕರು ರೈತ ವಿರೋಧಿ ಕಾಯಿದೆ ಜಾರಿ ಖಂಡಿಸಿ ಕರ್ನಾಟಕ ಬಂದ್ ಕರೆ ಹಿನ್ನೆಲೆ ಬೆಳಗ್ಗೆ ಏಕಾಏಕಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇದೀಗ ಪುನಾರಂಭಗೊಂಡಿದೆ. ಪೊಲೀಸ್ ಎಸ್ಕಾರ್ಟ್ ಮೂಲಕ ಬಸ್ ಗಳಿಗೆ ಭದ್ರತೆ ಒದಗಿಸಲಾಗಿದೆ. ಬಸ್ ನಿಲ್ದಾಣದಿಂದ ಪ್ರತಿಭಟನಾಕಾರರು ತೆರಳುತ್ತಿದ್ದಂತೆ ಬಸ್ ಸಂಚಾರ ಆರಂಭಿಸಲಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆ ಮೂಲಕ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಸ್ ಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದಾರೆ. ಇದರೊಂದಿಗೆ ಬೆಳಗ್ಗೆಯಿಂದ ಪರದಾಡುತ್ತಿದ್ದ ಪ್ರಯಾಣಿಕರು ನಿರಾಳಗೊಂಡಿದ್ದಾರೆ.