ತುಮಕೂರು: ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕೊರಟಗೆರೆಯ ಕೋಟೆ ಬೀದಿಯಲ್ಲಿ ಈ ಘಟನೆ ಸಂಭವಿಸಿದೆ. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನ ಉಮಾ (25) ಎಂದು ಗುರುತಿಸಲಾಗಿದೆ.
ಉಮಾ ಮತ್ತು ವೆಂಕಟೇಶ್ ಎಂಬಾತನು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ತಡರಾತ್ರಿ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದ್ದು ಸಿಟ್ಟಿನಲ್ಲಿ ವೆಂಕಟೇಶ್ ಯುವತಿಯನ್ನು ಮನಬಂದಂತೆ ಥಳಿಸಿದ್ದಾನಂತೆ.
ಈ ಘಟನೆಯನ್ನು ಕಂಡಿದ್ದ ಸ್ಥಳೀಯರು ಯುವತಿಯನ್ನು ಆಕೆಯ ಪ್ರಿಯಕರ ವೆಂಕಟೇಶ್ ಹೊಡೆದು ಸಾಯಿಸಿ ಬಳಿಕ ನೇಣು ಹಾಕಿದ್ದಾನೆ ಎಂದು ಆರೋಪಿಸುತ್ತಿದ್ದಾರೆ.
ಸದ್ಯ ಕೊರಟಗೆರೆ ಪೊಲೀಸರು ಆರೋಪಿ ವೆಂಕಟೇಶನನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.