Budget 2021 Explainer | ಕ್ರೆಡಿಟ್ ರೇಟಿಂಗ್ ಎಂದರೇನು? ಆರ್ಥಿಕ ಸಮೀಕ್ಷೆಯಲ್ಲಿ ಭಾರತ ಅಷ್ಟೇಕೆ ತಕರಾರು ಮಾಡಿತು?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 30, 2021 | 9:46 PM

ಆರ್ಥಿಕ ಸಮೀಕ್ಷೆ ವಿವರಿಸುವಾಗ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್ ಬಳಸಿದ ಕ್ರೆಡಿಟ್ ರೇಟಿಂಗ್ ಮತ್ತು ಸಾವರಿನ್ ಕ್ರೆಡಿಟ್ ರೇಟಿಂಗ್ ಪದಗಳು ಜನರಲ್ಲಿ ಕುತೂಹಲ ಮೂಡಿಸಿವೆ. ಈ ಪಾರಿಭಾಷಿಕ ಪದಗಳ ವಿವರಣೆ ಇಲ್ಲಿದೆ.

Budget 2021 Explainer | ಕ್ರೆಡಿಟ್ ರೇಟಿಂಗ್ ಎಂದರೇನು? ಆರ್ಥಿಕ ಸಮೀಕ್ಷೆಯಲ್ಲಿ ಭಾರತ ಅಷ್ಟೇಕೆ ತಕರಾರು ಮಾಡಿತು?
ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಕೃಷ್ಣಮೂರ್ತಿ ಸುಬ್ರಮಣಿಯನ್.
Follow us on

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು ವಿದೇಶಿ ಕ್ರೆಡಿಟ್ ರೇಟಿಂಗ್ಸ್ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ. ಆರ್ಥಿಕ ಸಮೀಕ್ಷೆಯ ವಿವರ ನೀಡಿದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ವಿ.ಸುಬ್ರಮಣಿಯನ್ ಈ ರೇಟಿಂಗ್​ಗಳನ್ನು ಗೊಂದಲಮಯ, ಅಪಾರದರ್ಶಕ ಮತ್ತು ಪಕ್ಷಪಾತಿ ಎಂದು ಜರಿದಿದ್ದಾರೆ. ಈ ರೇಟಿಂಗ್​ಗಳು ‘ಭಾರತ ಆರ್ಥಿಕತೆಯ ಮೂಲ ಅಂಶಗಳನ್ನು ಪ್ರತಿಬಿಂಬಿಸುವುದಿಲ್ಲ’ ಎಂಬುದು ಅವರ ಹೇಳಿಕೆಗಳ ಒಟ್ಟಾರೆ ಸಾರ.

‘ವಿದೇಶಿ ಮೂಲದ ರೇಟಿಂಗ್​ಗಳು ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅಡ್ಡಿಯುಂಟು ಮಾಡಬಹುದಾದ ಸಾಧ್ಯತೆಯಿರುವುದರಿಂದ, ಅವುಗಳನ್ನು ಅಪಾಯಕಾರಿ, ಹಾನಿಕಾರಕ ಎಂದರೆ ತಪ್ಪಾಗಲಾರದು. ಭಾರತದ ಹಣಕಾಸು ನೀತಿಗೆ ಅಪಾರದರ್ಶಕ, ಪಕ್ಷಪಾತಿ ಸಾವರಿನ್ ಕ್ರೆಡಿಟ್​ ರೇಟಿಂಗ್​ಗಳ ದಯಾಭಿಕ್ಷೆ ಅಗತ್ಯವಿಲ್ಲ’ ಎಂದು ಭಾವುಕರಾಗಿ ನುಡಿದ ಸುಬ್ರಮಣಿಯನ್, ಗುರುದೇವ ರವೀಂದ್ರನಾಥ್ ಟ್ಯಾಗೋರ್ ಅವರ ‘ನಿರ್ಭೀತ ಮನಸ್ಸಿನ’ ಉಕ್ತಿಯ ಮೂಲಕ ನಮ್ಮ ಆರ್ಥಿಕತೆ ಸಶಕ್ತವಾಗಿದೆ ಎಂದು ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಬ್ರಮಣಿಯನ್ ಪದೇಪದೆ ಉಚ್ಚರಿಸಿದ ಕ್ರೆಡಿಟ್ ರೇಟಿಂಗ್ ಮತ್ತು ಸಾವರಿನ್ ಕ್ರೆಡಿಟ್ ರೇಟಿಂಗ್ ಪದಗಳು ಜನರಲ್ಲಿ ಕುತೂಹಲ ಮೂಡಿಸಿತು. ಅರ್ಥಶಾಸ್ತ್ರ ಓದದ ಹಲವರು ಈ ಪದಗಳಿಗೆ ಅರ್ಥ ತಿಳಿದುಕೊಳ್ಳಲೆಂದು ಗೂಗಲ್​ ಜಾಲಾಡಿದರು. ಕನ್ನಡದಲ್ಲಿ ಈ ಪಾರಿಭಾಷಿಕ ಪದಗಳನ್ನು ವಿವರಿಸುವ ಪ್ರಯತ್ನ ಇಲ್ಲಿದೆ.

ಇದನ್ನೂ ಓದಿ: ಆರ್ಥಿಕತೆ V-ಆಕಾರದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ, ಅದರರ್ಥವೇನು?

ಪ್ರಾತಿನಿಧಿಕ ಚಿತ್ರ

ಕ್ರೆಡಿಟ್ ರೇಟಿಂಗ್ ಏಜೆನ್ಸಿ ಎಂದರೇನು?
ನೀವು ಯಾವುದಾದರೂ ಬ್ಯಾಂಕ್ ಅಥವಾ ಆರ್​ಬಿಐ ಸುಪರ್ದಿಯಲ್ಲಿರುವ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಮುಂದಾದಾಗ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಂದ ಕ್ರೆಡಿಟ್ ಸ್ಕೋರ್ ಪಡೆದುಕೊಳ್ಳುವಂತೆ ಬ್ಯಾಂಕ್​ ಮ್ಯಾನೇಜರ್ ಹೇಳುವುದು ಕೇಳಿರುತ್ತೀರಿ. ಒಬ್ಬ ವ್ಯಕ್ತಿಗೆ ನೀಡುವಂತೆ ಒಂದು ಸರ್ಕಾರಕ್ಕೂ ಈ ಏಜೆನ್ಸಿಗಳು ಸ್ಕೋರ್​ ನೀಡುತ್ತವೆ. ಈ ಏಜೆನ್ಸಿಗಳು ಕ್ರೆಡಿಟ್ ರೇಟಿಂಗ್ ಅಥವಾ ಕ್ರೆಡಿಟ್ ಸ್ಕೋರ್ ನೀಡುವಾಗ ಹಲವು ಅಂಶಗಳನ್ನು ಪರಿಗಣಿಸುತ್ತವೆ.

ವ್ಯಕ್ತಿ, ಸಂಸ್ಥೆ, ಉದ್ಯಮ ಅಥವಾ ದೇಶ ತಾನು ಪಡೆದಿರುವ ಸಾಲವನ್ನು ನಿಗದಿತ ಅವಧಿಯಲ್ಲಿ ತೀರಿಸುತ್ತಿದೆಯೇ? ಬಡ್ಡಿ ಪಾವತಿಯಲ್ಲಿ ವಿಳಂಬ ಆಗುತ್ತಿಲ್ಲವೇ? ಸಮಾನ ಮಾಸಿಕ ಕಂತುಗಳ ಆಧಾರದಲ್ಲಿ ಸಾಲ ಪಡೆದುಕೊಂಡಿದ್ದರೆ ಆ ಕಂತುಗಳ ಪಾವತಿ ಸಕಾಲದಲ್ಲಿ ಆಗುತ್ತಿದೆಯೇ ಎಂಬ ಅಂಶಗಳ ಆಧಾರದ ಮೇಲೆ ರೇಟಿಂಗ್ಸ್ ನೀಡುತ್ತವೆ. ನಿಗದಿತ ಸಮಯದಲ್ಲಿ ಅಸಲು ಮತ್ತು ಬಡಿಯನ್ನು ಪಾವತಿ ಮಾಡಿದರೆ ಎಎಎ ರೇಟಿಂಗ್ ಸಿಗುತ್ತದೆ. ಇಂಥ ರೇಟಿಂಗ್ ಹೊಂದಿರುವ ಸಂಸ್ಥೆಗೆ ಸಾಲ ನಿಡುವುದು ಅತ್ಯಂತ ಸುರಕ್ಷಿತ ಎಂದು ಆರ್ಥ ಜಗತ್ತು ಭಾವಿಸುತ್ತದೆ.

ಸಕಾಲದಲ್ಲಿ ಸಾಲ ಮರುಪಾವತಿ ಮಾಡದಿದ್ದರೆ ರೇಟಿಂಗ್ಸ್ ಕಡಿಮೆಯಾಗುತ್ತದೆ. ಎಫ್ಐಸಿಒ (ಫಿಕೊ) ರೇಟಿಂಗ್ಸ್ ಏಜೆನ್ಸಿಯ ಪ್ರಕಾರ 300 ರಿಂದ 850ರ ಅಳತೆಪಟ್ಟಿಯ ಮೇಲೆ, 670 ಕ್ಕಿಂತ ಕಡಿಮೆ ರೇಟಿಂಗ್ ಇದ್ದರೆ ಅದನ್ನು ಕೆಟ್ಟ ಕ್ರೆಡಿಟ್ ಸ್ಕೋರ್ ಪರಿಗಣಿಸಲಾಗುತ್ತದೆ. ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ 580ರಿಂದ 669ವರೆಗಿನ ರೇಟಿಂಗ್ ಅನ್ನು ಉತ್ತಮ ಅಂತಲೂ, 300 ರಿಂದ 579 ರವರೆಗಿನ ರೇಟಿಂಗ್ ಅನ್ನು ಕೆಟ್ಟದ್ದು ಅಂತಲೂ ಪರಿಗಣಿಸಲಾಗುತ್ತದೆ.

ವಿದೇಶಿ ಮೂಲದ ಮೂಡೀಸ್, ಸ್ಟ್ಯಾಂಡರ್ಡ್ ಅಂಡ್ ಪೂರ್, ಫಿಚ್ ಮೊದಲಾದವು ಹೆಸರಾಂತ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು.

ಇದನ್ನೂ ಓದಿ: Explainer | ಬಜೆಟ್ ಅರ್ಥವಾಗಲು ಇವಿಷ್ಟೂ ಪದಗಳ ವಿವರ ನಿಮಗೆ ಗೊತ್ತಿರಬೇಕು

ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು

ಸಾವರೀನ್ ಕ್ರೆಡಿಟ್ ರೇಟಿಂಗ್
ಈ ರೇಟಿಂಗ್ ಒಂದು ದೇಶಕ್ಕೆ ಸಂಬಂಧಿಸಿದ್ದು. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ದೇಶಗಳು ಪಡೆಯುವ ಸಾಲ ಮತ್ತು ಮರುಪಾವತಿ ಆಧರಿಸಿ ದೇಶಗಳಿಗೆ ರೇಟಿಂಗ್ ನೀಡುವ ಪ್ರಕ್ರಿಯೆ ನಡೆಯುತ್ತದೆ. ಭಾರತಕ್ಕೆ ಕ್ರೆಡಿಟ್ ರೇಟಿಂಗ್​ ಕಡಿಮೆ ತೋರಿಸಿರುವುದಕ್ಕೆ ಇದೀಗ ಕೇಂದ್ರ ಸರ್ಕಾರದ ಪರವಾಗಿ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಣಕಾಸು ನೀತಿ ಮತ್ತು ಬಜೆಟ್​ ಶಿಸ್ತಿನ ಜೊತೆಗೆ ಸಾಧಿಸುತ್ತಿರುವ ಪ್ರಗತಿಯನ್ನು ಆಧರಿಸಿ ರೇಟಿಂಗ್ ನೀಡಬೇಕು. ಆದರೆ ವಿದೇಶಿ ಮೂಲದ ಏಜೆನ್ಸಿಗಳು ಕೇವಲ ತಮ್ಮ ಗ್ರಹಿಕೆಗಳ ಆಧಾರದ ಮೇಲೆ ರೇಟಿಂಗ್ ನೀಡುತ್ತಿವೆ. ಇದು ಸರಿಯಲ್ಲ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಒಂದಾಗಿ ಈ ಏಜೆನ್ಸಿಗಳ ಪಕ್ಷಪಾತ ಧೋರಣೆ ಮತ್ತು ಅವು ಕೊಡುವ ರೇಟಿಂಗ್ ಅನ್ನು ವಿರೋಧಿಸಬೇಕು ಎಂದು ಹೇಳಿದರು.

ವಿದೇಶಿ ಏಜೆನ್ಸಿಗಳು ಭಾರತಕ್ಕೆ ರೇಟಿಂಗ್ ನೀಡುವಾಗ ಹಲವಾರು ವಿಷಯಗಳನ್ನು ಅಥವಾ ಪರಿಮಾಣಗಳನ್ನು ಪರಿಗಣನೆಗೇ ತೆಗೆದುಕೊಳ್ಳುವುದಿಲ್ಲ ಎಂದು ಸುಬ್ರಮಣಿಯನ್ ಹೇಳುತ್ತಾರೆ. ಕಳೆದ ಎರಡು ದಶಕಗಳಿಂದ ಅಮೆರಿಕಾ ಮತ್ತು ಇತರ ಶ್ರೀಮಂತ ರಾಷ್ಟ್ರಗಳಿಗೆ ಅವು ಎ+ / ಎ1 ರೇಟಿಂಗ್ ನೀಡಿದರೆ, ಏಷ್ಯಾದ ಅತಿದೊಡ್ಡ ಆರ್ಥಿಕ ಶಕ್ತಿಗಳೆನಿಸಿರುವ ಚೀನಾ ಮತ್ತು ಭಾರತಕ್ಕೆ ಬಿಬಿಬಿ- / ಬಿಎಎ ರೇಟಿಂಗ್ ನೀಡುತ್ತಿವೆ ಎಂದು ಸುಬ್ರಮಣಿಯನ್ ದೂರುತ್ತಾರೆ.

ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ), ಪ್ರಗತಿ ದರ, ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ತೆಗೆದುಕೊಂಡ ಕ್ರಮಗಳು, ಸರ್ಕಾರದ ಸಾಲ, ಆವರ್ತ ನಿಧಿ ಮತ್ತು ಮೀಸಲು ನಿಧಿಗಳ ಪಾಲನೆ, ಜಿಡಿಪಿಗೆ ಅನುಗುಣವಾದ ಚಾಲ್ತಿ ಖಾತೆಯಲ್ಲಿರಿಸಿಕೊಂಡಿರುವ ಹಣ, ರಾಜಕೀಯ ಸ್ಥಿರತೆ, ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ ನಿಯಂತ್ರಣ, ಹೂಡಿಕೆದಾರರ ಸುರಕ್ಷತೆ, ವ್ಯವಹಾರ ನಡೆಸಲು ಸರಳ ವ್ಯವಸ್ಥೆ, ಅಲ್ಪಾವಧಿಯ ಬಾಹ್ಯ ಸಾಲ ಮೊದಲಾದ ಪರಿಮಾಣಗಳನ್ನು ಗಣನೆಗೆ ತೆಗೆದುಕೊಳ್ಳುವಾಗ ಭಾರತವನ್ನು ಹೊರಗಿಡಲಾಗುತ್ತದೆ. ಹೀಗಾಗಿಯೇ ಭಾರತದ ಕ್ರೆಡಿಟ್ ರೇಟಿಂಗ್ ಕಡಿಮೆಯಾಗಿದೆ ಎಂಬುದು ಸುಬ್ರಮಣಿಯನ್ ದೂರು.

Budget 2021 | ಆರ್ಥಿಕತೆ ಸಬಲ, ಭವಿಷ್ಯ ಆಶಾದಾಯಕ: Economic Survey ಮುಖ್ಯಾಂಶಗಳಿವು

Budget 2021 | ಮಂಡನೆಯಾಯ್ತು Economic Survey: ಕೃಷಿಯ ಭರವಸೆ, ಶೇ 11ರ ಜಿಡಿಪಿ ಪ್ರಗತಿ ನಿರೀಕ್ಷೆ

Budget 2021 | ಕೃಷಿಯೊಂದೇ ಭರವಸೆ ಎನ್ನುತ್ತೆ Economic Survey

Published On - 9:27 pm, Sat, 30 January 21