ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ: ನೀರಲ್ಲಿ ಮುಳುಗಿದವನನ್ನು ರಕ್ಷಿಸಲು ಹೋಗಿ ಐವರು ಜಲಸಮಾಧಿ

ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ: ನೀರಲ್ಲಿ ಮುಳುಗಿದವನನ್ನು ರಕ್ಷಿಸಲು ಹೋಗಿ ಐವರು ಜಲಸಮಾಧಿ
ಬೀಗರ ಔತಣಕ್ಕೆಂದು ಹೋದ ಐವರು ಯುವಕರು ಜಲಸಮಾಧಿ

ಮದುವೆಗೆ ಹೋಗಿದ್ದ ಮೂವರು ಯುವಕರು, ಓರ್ವ ಯುವತಿ ಮಂಗಳೂರಿನ ಶಾಂಭವಿ ನದಿಯಲ್ಲಿ ಮುಳುಗಿ ಜಲಸಮಾಧಿಯಾದ ಘಟನೆ ಮಾಸುವ ಮುನ್ನವೇ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಬೀಗರ ಔತಣಕ್ಕೆಂದು ಹೋದ ಐವರು ಯುವಕರು ನೀರುಪಾಲಾದ ಕರುಣಾಜನಕ ಘಟನೆ ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ನಡೆದಿದೆ.

Ayesha Banu

|

Nov 26, 2020 | 10:23 AM

ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋದ ಐವರು ನೀರಲ್ಲಿ ಮುಳುಗಿ ಸಾವನಪ್ಪಿರುವ ಕರುಣಾಜನಕ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆಯಲ್ಲಿ ನಡೆದಿದೆ. ವಸ್ತಾರೆ ಗ್ರಾಮದ ಹಿರೇಕೆರೆ ಎಂಬಲ್ಲಿ ಐವರು ಜಲ ಸಮಾಧಿಯಾಗಿದ್ದಾರೆ. ಸಂದೀಪ್, ರಾಘವೇಂದ್ರ, ಸುದೀಪ್, ದಿಲೀಪ್, ದೀಪಕ್ ಮೃತ ದುರ್ದೈವಿಗಳು.

ಅಕ್ಕ-ಭಾವನನ್ನ ಮನೆಯಿಂದ ಕಳುಹಿಸಿ ಕೆರೆ ದಾರಿ ಹಿಡಿದ ಸಹೋದರ: ಕಳೆದ ಶುಕ್ರವಾರವಷ್ಟೇ ಮೃತ ಸಂದೀಪ್ ಸಹೋದರಿಯ ಮದುವೆ ನೆರವೇರಿದೆ. ಈ ಹಿನ್ನೆಲೆಯಲ್ಲಿ ನ.24ರಂದು ವಸ್ತಾರೆಯ ಸಂದೀಪ್ ಮನೆಯಲ್ಲಿ ಬೀಗರ ಔತಣ ಕೂಟಕ್ಕಾಗಿ ಸಂಬಂಧಿಕರು ಆಗಮಿಸಿದ್ದರು. ನ.24ರಂದು ಕಾರ್ಯಕ್ರಮ ಮುಗಿದ ಬಳಿಕ ನ.25ರ ಬೆಳಿಗ್ಗೆ ಸಂದೀಪ್ ತನ್ನ ಅಕ್ಕ-ಭಾವನನ್ನ ವಸ್ತಾರೆ ಗ್ರಾಮದಿಂದ ಕಳುಹಿಸಿ ಕೊಟ್ಟಿದ್ದಾರೆ. ಆ ಬಳಿಕ ಉಳಿದ ನಾಲ್ವರು ಸಂಬಂಧಿ ಯುವಕರ ಜೊತೆ ಕೆರೆಯಲ್ಲಿ ಈಜಲು ಸಂದೀಪ್ ಬಂದಿದ್ದಾನೆ.

ಮುಳುಗಿದವನನ್ನು ಬದುಕಿಸಲು ಹೋಗಿ ನಾಲ್ವರು ಮುಳುಗಿದ್ರು: ಮೊದಲು ರಾಘವೇಂದ್ರ ಎಂಬ ಯುವಕ ಕೆರೆಗೆ ಇಳಿದಿದ್ದು, ನೀರಿನಲ್ಲಿ ಮುಳುಗಿದ್ದಾನೆ. ನೀರಿನಲ್ಲಿ ಮುಳುಗಿದ ರಾಘವೇಂದ್ರನನ್ನ ಬದುಕಿಸಲು ಮೊದಲು ಇಬ್ಬರು ಇಳಿದಿದ್ದಾರೆ. ಆದ್ರೆ, ನೀರಿಗಿಳಿದ ಇಬ್ಬರಿಗೂ ರಾಘವೇಂದ್ರನನ್ನ ಕಾಪಾಡಲು ಆಗಿಲ್ಲ. ಮುಳುಗುತ್ತಿದ್ದ ರಾಘವೇಂದ್ರನನ್ನ ಬದುಕಿಸಲು ಹೋಗಿ ಉಳಿದಿಬ್ಬರು ನೀರಲ್ಲಿ ಮುಳುಗಿದ್ದಾರೆ. ಮೂವರು ಕೂಡ ನೀರಿನಲ್ಲಿ ಮುಳುಗಿ ಮೇಲೆ ಬರಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಕೆರೆಯ ದಡದ ಮೇಲೆ ಇದ್ದ ಮತ್ತಿಬ್ಬರು ಯುವಕರು ನೀರಲ್ಲಿ ಮುಳುಗುತ್ತಿದ್ದ ಮೂವರನ್ನ ಬದುಕಿಸಲು ಮುಂದಾಗಿದ್ದಾರೆ. ಅಲ್ಲಿಗೆ ಒಬ್ಬನನ್ನು ಬದುಕಿಸಲು ಹೋಗಿ ಐವರು ಕೂಡ ನೀರಲ್ಲಿ ಮುಳುಗಿದ್ದಾರೆ. ಕೆರೆ ನೀರಿನಿಂದ ಮೇಲೆ ಬರಲಾರದೇ ಐವರು ಯುವಕರು ಜಲ ಸಮಾಧಿಯಾಗಿದ್ದಾರೆ.

ಸಾವಿನ ಸುದ್ದಿ ಕೇಳಿ ಇಡೀ ಊರೇ ಮಿಡಿಯಿತು ಕಂಬನಿ: ಈ ವೇಳೆ ಕೆಲವರು ಕೆರೆಯಲ್ಲಿ ಮುಳಗುತ್ತಿದ್ದ ಯುವಕರನ್ನು ಕಂಡು ರಕ್ಷಿಸಲು ಒಡೋಡಿ ಬಂದ್ರೂ ಪ್ರಯೋಜನವಾಗಿಲ್ಲ. ನೋಡು ನೋಡ್ತಿದಂತೆ ಐವರು ನೀರಿನಲ್ಲಿ ಕಣ್ಮರೆಯಾದರು. ಈಜಲು ಹೋಗಿದ್ದ ಐವರು ಯುವಕರು ಸಾವನ್ನಪ್ಪಿದ್ದ ಸುದ್ದಿ ಕೇಳಿ ಕೆರೆಯ ದಡದಲ್ಲಿ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

ಮೂವರು ಮಕ್ಕಳು ಸಾವು, ಮುಗಿಲು ಮುಟ್ಟಿದ ದಂಪತಿಯ ಆಕ್ರಂದನ: ವಸ್ತಾರೆ ಗ್ರಾಮದ ಸಂದೀಪ್, ರಾಘವೇಂದ್ರ ಸೇರಿದಂತೆ ಹಂಚರವಳ್ಳಿ ಗ್ರಾಮದ ಕುಸುಮಾ-ಕೃಷ್ಣಮೂರ್ತಿ ದಂಪತಿ ಮಕ್ಕಳಾದ ದೀಪಕ್, ದಿಲೀಪ್, ಸುದೀಪ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೂವರು ಮಕ್ಕಳನ್ನ ಕಳೆದುಕೊಂಡ ದಂಪತಿಯ ಆಕ್ರಂದನವಂತೂ ಮುಗಿಲು ಮುಟ್ಟಿತ್ತು. ಮೂವರು ಮಕ್ಕಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಓದಿ ಉತ್ತಮ ಭವಿಷ್ಯ ಕಟ್ಟಿಕೊಂಡು ತಂದೆ-ತಾಯಿಗೆ ಆಸರೆಯಾಗಬೇಕು ಅಂತಾ ಕನಸು ಕಂಡಿದ್ದರು. ಆದರೆ ವಿಧಿಯಾಟ ಎಲ್ಲವನ್ನು ನುಚ್ಚುನೂರು ಮಾಡಿದೆ.

ಯಜಮಾನನನ್ನು ಕಳೆದುಕೊಂಡು “ಡ್ಯಾನಿ” ಕಣ್ಣೀರು: ಸಂದೀಪ್ ಸಾವಿನಿಂದ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತು. ಸಂದೀಪ್ ಸಾಕಿದ್ದ ಡ್ಯಾನಿ ಎಂಬ ಸಾಕುನಾಯಿ ಕೂಡ ಮಾಲೀಕನ ಸಾವನ್ನ ಕೇಳಿ ಕೆರೆ ಬಳಿಯೇ ಮೊಕ್ಕಾಂ ಹೂಡಿ ಮೂಕರೋದನೆ ತೋರುತ್ತಿತ್ತು. ಕೊನೆಗೆ ಸಂದೀಪ್ ಮೃತದೇಹವನ್ನ ಅಂಬ್ಯುಲೆನ್ಸ್​ನಲ್ಲಿ ತೆಗೆದುಕೊಂಡು ಹೋಗುವಾಗಲೂ ಅಂಬ್ಯುಲೆನ್ಸ್ ಹಿಂದೆಯೇ ಓಡುತ್ತ ಹೋದ ದೃಶ್ಯವಂತೂ ಕಣ್ಣೀರು ತರಿಸುವಂತಿತ್ತು.

ದೊಡ್ಡ ದುರಂತಕ್ಕೆ ಸಾಕ್ಷಿಯಾಯ್ತು ಹಿರೇ”ಕೆರೆ” ವಸ್ತಾರೆ ಗ್ರಾಮದ ಬೃಹತ್ ಕೆರೆ ಇದಾಗಿರೋದ್ರಿಂದ ಇದನ್ನ ಹಿರೆಕೆರೆ ಅಂತಾಲೇ ಗ್ರಾಮಸ್ಥರು ಕರೆಯುತ್ತಾರೆ. ಇದೇ ಮೊದಲ ಬಾರಿಗೆ ಈ ಕೆರೆಯಲ್ಲಿ ದೊಡ್ಡ ಅನಾಹುತ ಸಂಭವಿಸಿದೆ. ಎದೆಮಟ್ಟಕ್ಕೆ ಬೆಳೆದ ಮಕ್ಕಳನ್ನ ಕಳೆದುಕೊಂಡ ಪೋಷಕರು, ಸಂಬಂಧಿಕರು, ಸ್ನೇಹಿತರೆಲ್ಲರೂ ಆಕ್ರಂದನ ಇಡೀ ಊರನ್ನೇ ದುಃಖದ ಮಡುವಿನಲ್ಲಿ ಮುಳುಗಿಸಿದೆ. ಒಟ್ಟಿನಲ್ಲಿ ಮದುವೆ ಮಾಡಿ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ನೋವು ಶಾಶ್ವತವಾಗಿ ಉಳಿಯುವಂತೆ ಆಗಿದ್ದು ಮಾತ್ರ ನಿಜಕ್ಕೂ ದುರಂತ.

ಇದನ್ನೂ ಓದಿ: ಮದುವೆಗೆ ಹೋಗಿದ್ದ ಮೂವರು ಯುವಕರು, ಓರ್ವ ಯುವತಿ ಜಲಸಮಾಧಿ..

ವಸ್ತಾರೆ ಬಳಿಯ ಹಿರೇಕೆರೆಯಲ್ಲಿ ದುರಂತ: ಬೀಗರ ಔತಣಕ್ಕೆ ಬಂದ ಐವರು ಯುವಕರು ನೀರುಪಾಲು

Follow us on

Related Stories

Most Read Stories

Click on your DTH Provider to Add TV9 Kannada