ಪ್ರಯಾಣಿಕನಿಗೆ ಎದೆನೋವು: ದೆಹಲಿಗೆ ಹೊರಟಿದ್ದ ವಿಮಾನ ನಾಗಪುರದಲ್ಲಿ ತುರ್ತು ಭೂಸ್ಪರ್ಶ
ಮಾರ್ಗಮಧ್ಯೆ ತೀವ್ರ ಎದೆನೋಯುತ್ತಿದೆ ಎಂದು ವಿಮಾನದ ಸಿಬ್ಬಂದಿಯ ಬಳಿ ಹೇಳಿಕೊಂಡಿದ್ದರು. ಈ ವಿಷಯವನ್ನು ಸಿಬ್ಬಂದಿ ಪೈಲಟ್ ಗಮನಕ್ಕೆ ತಂದಿದ್ದರು.
ನಾಗಪುರ: ದೆಹಲಿಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಿದ ಕಾರಣ ಪೈಲಟ್ ವಿಮಾನವನ್ನು ನಾಗಪುರ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದರು. ವಿಮಾನ ನಿಲ್ದಾಣದ ಪೊಲೀಸರು ತುರ್ತಾಗಿ ಪ್ರಯಾಣಿಕನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಆತನ ಜೀವ ಉಳಿಯಲಿಲ್ಲ. ಈ ಘಟನೆ ಶನಿವಾರ ನಡೆದಿದ್ದು, ಭಾನುವಾರ ಈ ಕುರಿತು ಪಿಟಿಐ ಸುದ್ದಿಸಂಸ್ಥೆ ವರದಿ ಪ್ರಕಟಿಸಿದೆ.
ಬಿಹಾರದ ಗಯಾ ನಿವಾಸಿ ಚೋಟುಸಿಂಗ್ ನಾರಾಯಣಸಿಂಗ್ ಯಾದವ್ (65) ಚೆನ್ನೈನಲ್ಲಿ ಶನಿವಾರ ಮುಂಜಾನೆ ವಿಮಾನ ಹತ್ತಿದ್ದರು. ಮಾರ್ಗಮಧ್ಯೆ ತೀವ್ರ ಎದೆನೋಯುತ್ತಿದೆ ಎಂದು ವಿಮಾನದ ಸಿಬ್ಬಂದಿಯ ಬಳಿ ಹೇಳಿಕೊಂಡಿದ್ದರು. ಈ ವಿಷಯವನ್ನು ಸಿಬ್ಬಂದಿ ಪೈಲಟ್ ಗಮನಕ್ಕೆ ತಂದಿದ್ದರು.
ನಾಗಪುರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತುಭೂಸ್ಪರ್ಶಕ್ಕೆ ಅನುಮತಿ ಕೋರಿ, ವಿಮಾನವನ್ನು ಕೆಳಗಿಳಿಸಲಾಯಿತು. ರೋಗಿಯನ್ನು ಕೂಡಲೇ ನಗರದ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ಮೊದಲೇ ನಾರಾಯಣ್ ಸಿಂಗ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಇದನ್ನೂ ಓದಿ: ಎದೆನೋವಿನಿಂದ ಸಾವು; ಶಾರ್ಜಾದಿಂದ ಲಕ್ನೋಗೆ ಹೊರಟ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ