ಕೊಡಗು: ಜನ್ಮ ತಾಳಿದ ಕೆಲವೇ ಗಂಟೆಗಳಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಪುಟ್ಟ ಆನೆ ಮರಿ ಮತ್ತೊಮ್ಮೆ ತನ್ನ ಅಮ್ಮನ ಜೊತೆ ಒಂದಾದ ಮನಮಿಡಿಯುವ ಪ್ರಸಂಗಕ್ಕೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೈಲ ಗ್ರಾಮವು ಸಾಕ್ಷಿಯಾಗಿದೆ.
ಆಹಾರ ಅರಸಿ ಗ್ರಾಮದ ಕಾಫಿ ತೋಟಕ್ಕೆ ಬಂದಿದ್ದ ಗರ್ಭಿಣಿ ಕಾಡಾನೆಯೊಂದು ಮರಿಗೆ ಜನ್ಮ ನೀಡಿತ್ತು. ಆದರೆ ದುರದೃಷ್ಟವಶಾತ್ ಆ ಎಳೇ ಮರಿ ತನ್ನ ಅಮ್ಮನಿಂದ ಹೇಗೋ ಬೇರ್ಪಟ್ಟು ತೋಟದಲ್ಲಿದ್ದ ದೊಡ್ಡ ಕಂದಕಕ್ಕೆ ಉರುಳಿ ಬಿದ್ದಿತ್ತು. ತನ್ನ ಕರುಳಬಳ್ಳಿಯನ್ನ ಕಂದಕದಿಂದ ಮೇಲೆತ್ತಲು ತಾಯಿ ಆನೆ ಎಷ್ಟೇ ಪ್ರಯತ್ನಿಸಿದರೂ ವಿಫಲವಾಗಿ ಕೊನೆಗೆ ಮರಿಯನ್ನ ಅಲ್ಲೇ ಬಿಟ್ಟು ಕಾಡಿಗೆ ತೆರಳಿತ್ತು.
ತಾಯಿ-ಮಗುವನ್ನು ಒಂದು ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಬೆಳಗ್ಗೆ ಕಂದಕದಲ್ಲಿ ಆನೆ ಮರಿಯನ್ನ ಕಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ರು. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಂದಕದಲ್ಲಿ ಸಿಲುಕಿದ್ದ ಆನೆ ಮರಿಯನ್ನು ರಕ್ಷಿಸಿದರು. ಜೊತೆಗೆ, ಮರಿಯನ್ನ ಘಟನಾಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಅದರ ತಾಯಿಯ ಬಳಿ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ನಡುವೆ ಕಂದಮ್ಮನನ್ನ ಕಳೆದುಕೊಂಡ ನೋವಿನಲ್ಲಿದ್ದ ತಾಯಿ ಆನೆಯು ಸಿಟ್ಟಿನಲ್ಲಿ ಅಲ್ಲೇ ಇದ್ದ ತೋಟದ ಕೆಲಸಗಾರ ಚಿಕ್ಕಣ್ಣನ ಮೇಲೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಚಿಕ್ಕಣ್ಣ ಪ್ರಾಣಾಪಾದಿಂದ ಪಾರಾಗಿದ್ದು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರೇಶ್ ಬಿ