ರಾಯಚೂರು: ಅಲೆಗಳು ಮೈಮೇಲೆಯೇ ಬರ್ತಿವೆ.. ಸಾವು ಕಣ್ಮುಂದೆಯೇ ಇದೆ.. ಜೀವ ಕೈಗೆ ಬಂದಂಗಾಗ್ತಿದೆ.. ಬದುಕುಳಿಯುವ ಭರವಸೆ ಕೊಚ್ಚಿ ಹೋಗ್ತಿದೆ.. ಇದನ್ನ ನೋಡ್ತಿದ್ರೆ ಎದೆ ಝಲ್ ಅನ್ನುತ್ತೆ.. ಪ್ರತಿಯೊಬ್ಬರನ್ನೂ ಬೆಚ್ಚಿಬೀಳಿಸುತ್ತೆ… ಸಾವಿನ ಭಯ ಇಂಚಿಂಚೂ ಕೊಲ್ಲುತ್ತೆ.
ಹಳ್ಳದಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲು! ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಗೋಲಪಲ್ಲಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲಾಗಿದ್ದಾರೆ. ನಿನ್ನೆ ಮಧ್ಯಾಹ್ನ ಹಳ್ಳದ ನೀರು ಏಕಾಏಕಿ ಹೆಚ್ಚಾಗಿ ಪ್ರವಾಹ ಉಂಟಾಗಿದೆ. ಈ ವೇಳೆ ಗದಗ ಜಿಲ್ಲೆ ಮುಂಡರಗಿ ಮೂಲದ ಕೃಷ್ಣಪ್ಪ ಹಾಗೂ 5 ವರ್ಷದ ಧನುಷ್ ನೀರು ಪಾಲಾಗಿದ್ದಾರೆ. ಆದ್ರೆ ಮಹಾಂತೇಶ್ ಅನ್ನೋ 18 ವರ್ಷದ ಯುವಕ ನೀರಿನ ಮಧ್ಯೆ ಕಲ್ಲುಬಂಡೆಯಲ್ಲಿ ಕುಳಿತು ಪ್ರಾಣ ರಕ್ಷಣೆಗಾಗಿ ಕಣ್ಣೀರಿಡ್ತಿದ್ದ. ವಿಷ್ಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಹಗ್ಗದ ಸಹಾಯದಿಂದ ಯುವಕನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿಯಲ್ಲಿ ಮಳೆ ಆರ್ಭಟಕ್ಕೆ ಗ್ರಾಮಗಳು ಜಲಾವೃತ..!
ಇತ್ತ ಯಾದಗಿರಿ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಮಳೆ ಆರ್ಭಟಕ್ಕೆ ಯಾದಗಿರಿ ತಾಲೂಕಿನ ಕೊಯಿಲೂರು, ಪಗಲಾಪುರ, ಮುಷ್ಟೂರು ಸೇರಿದಂತೆ ಹತ್ತಾರಯ ಗ್ರಾಮಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದ್ದಕ್ಕೆ ದವಸಧಾನ್ಯ ನಾಶವಾಗಿವೆ. ಇದ್ರ ನಡ್ವೆ ನೀರಲ್ಲಿ ಕೊಚ್ಚಿ ಹೋಗ್ತಿದ್ದ ವೃದ್ಧೆಯನ್ನ ರಕ್ಷಣೆ ಮಾಡಲಾಯ್ತು.
ಇನ್ನು ಮಳೆ ಅವಾಂತರದಿಂದ ಸಾವಿರಾರು ಎಕರೆ ಪ್ರದೇಶದಲ್ಲಿದ್ದ ಬೆಳೆ ಕೊಚ್ಚಿ ಹೋಗಿದೆ. ಹೆಸರು, ಉದ್ದು, ತೊಗರಿ, ಹತ್ತಿ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ವರುಣನ ಅಬ್ಬರಕ್ಕೆ ಕಡೂರು ತತ್ತರ..! ಇನ್ನು ಚಿಕ್ಕಮಗಳೂರು ಜಿಲ್ಲೆ ಕಡೂರು ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಇದ್ರಿಂದ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿತ್ತು. ನೀರಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ರು. ಗಾಳಿ ಮಳೆಗೆ ಟವರ್ ಕೂಡ ಮುರಿದು ಬಿದ್ದಿದೆ. ಇತ್ತ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಜಡಿತಡೆಹಳ್ಳದಲ್ಲೂ ಜೋರು ಮಳೆ ಬಂದಿದೆ. ಮಳೆ ಅಬ್ಬರಕ್ಕೆ ಕೊಳ್ಳೆಗಾಲದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸೋ ಹೆದ್ದಾರಿಯ ಮಾರ್ಗದ ಹಳ್ಳ ತುಂಬಿ ಹರೀತು. ಇದ್ರಿಂದ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸೋಕೆ ಸಾಧ್ಯವಾಗದೆ ಪರದಾಡಿದ್ರು. ಕೂಡಲೇ ಸೇತುವೆ ನಿರ್ಮಾಣ ಮಾಡ್ಬೇಕು ಅಂತಾ ಒತ್ತಾಯಿಸಿದ್ರು.
ಒಟ್ನಲ್ಲಿ ವರುಣನ ಆರ್ಭಟಕ್ಕೆ ರಾಜ್ಯದ ಹಲವೆಡೆ ಜನರು ತತ್ತರಿಸಿ ಹೋಗಿದ್ದಾರೆ. ಒಂದೇ ದಿನ ಸುರಿದ ಮಳೆಗೆ ರೈತರ ಬದುಕು ಬೀದಿಗೆ ಬಂದಿದೆ. ಮತ್ತೊಂದೆಡೆ ಇಬ್ಬರು ನೀರುಪಾಲಾಗಿರೋದು ಎಲ್ಲರನ್ನ ಚಿಂತೆಗೀಡು ಮಾಡಿದೆ.