4 ವರ್ಷದ ಪುಟ್ಟ ಪೋರನಿಗೆ ಕ್ರೀಡೆ ಬಗ್ಗೆ ಎಲ್ಲಿಲ್ಲದ ಆಸಕ್ತಿ, ನಿತ್ಯ ಬೆಳಗ್ಗೆ 8 ಕಿಲೋಮೀಟರ್ ರನ್ನಿಂಗ್, ಜಾಗಿಂಗ್
ಆತ ಪುಟ್ಟ ಪೋರ. ಆದ್ರೂ ಕ್ರೀಡೆಯಲ್ಲಿ ಸಾಧನೆ ಮಾಡ್ಬೇಕು ಅನ್ನೋ ಕನಸು. ಅದ್ರಲ್ಲೂ ಮ್ಯಾರಥಾನ್ನಲ್ಲಿ ಮಿಂಚಬೇಕು ಅಂತಾ ತಯಾರಿ ನಡೆಸ್ತಿದ್ದಾನೆ. ಪ್ರತಿದಿನ ಎಂಟು ಕಿಲೋ ಮೀಟರ್ ಓಡಿ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡೋಕೆ ಮುಂದಾಗಿದ್ದಾನೆ.
ಹಾವೇರಿ: ಮೊಹಮ್ಮದ ಜೈದ್. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ನಿವಾಸಿ. ವಯಸ್ಸು ಈಗ ನಾಲ್ಕು ವರ್ಷ ಎಂಟು ತಿಂಗಳು. ಜನಿಸಿದ ಕೆಲವು ತಿಂಗಳುಗಳ ನಂತರದಿಂದ ಈ ಬಾಲಕನಿಗೆ ಕ್ರೀಡೆ, ಯೋಗ ಅಂದ್ರೆ ಎಲ್ಲಿಲ್ಲದ ಪ್ರೀತಿ.
ಪುಟ್ಟ ಪೋರನಿಗೆ ಸಾಧಿಸುವ ಛಲ: ಬಾಲಕನ ತಂದೆ ಆಸೀಫ್ ಸುಮಾರು ವರ್ಷಗಳ ಕಾಲ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಂದೆಗೂ ಕ್ರೀಡೆ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ಮಗನ ಕ್ರೀಡಾ ಆಸಕ್ತಿ ಕಂಡು ತಂದೆ ಮಗನಿಗೆ ಸಾಥ್ ನೀಡ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ತಂದೆ ಮಗನಿಗೆ ಯೋಗಾಸನ, ರನ್ನಿಂಗ್, ಜಾಗಿಂಗ್ ಹೇಳಿಕೊಡ್ತಿದ್ದಾರೆ.
ಈಗಾಗಲೆೇ ಎರಡು, ನಾಲ್ಕು, ಐದು ಕಿಲೋ ಮೀಟರ್ ಮ್ಯಾರಥಾನ್ಗಳಲ್ಲಿ ಭಾಗವಹಿಸಿ ಈ ಬಾಲಕ ಸೈ ಎನಿಸಿಕೊಂಡಿದ್ದಾನೆ. ಇದೆೇ ತಿಂಗಳು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರೋ ಮ್ಯಾರಥಾನ್ ಓಟಕ್ಕೂ ಕಸರತ್ತು ನಡೆಸ್ತಿದ್ದಾನೆ.
ಓಟದಲ್ಲಿ ಸಾಧನೆ ಮಾಡೋ ಕನಸಿನೊಂದಿಗೆ ನಿತ್ಯವೂ ಎಂಟು ಕಿ.ಮೀ.ನಷ್ಟು ರನ್ನಿಂಗ್ ಓಡೋ ಈ ಪುಟ್ಟ ಪೋರನಿಗೆ ತಂದೆಯೇ ಗೈಡ್ ಆಗಿದ್ದಾರೆ. ಬೆಳೆಯೋ ಸಿರಿ ಮೊಳಕೆಯಲ್ಲಿ ಅನ್ನುವಂತೆ ಈ ಬಾಲಕ ಮುಂದೆ ಸಾಕಷ್ಟು ಸಾಧನೆ ಮಾಡಲಿ.