ಅಬ್ಬಬ್ಬಾ ರಣ ಬಿಸಿಲು. ಶಿವರಾತ್ರಿ ಮುಗಿಯುವಷ್ಟರಲ್ಲೇ ಬಿಸಿಲಿನ ಆರ್ಭಟ ಜೋರಾಗಿಯೇ ಇದೆ. ಕೂತಲ್ಲಿ ಕೂರಲು ಸೆಖೆ. ಹೊರಗೆ ಓಡಾಡಿ ಬರೋಣ ಅಂದರೆ ಸುಡು ಬಿಸಿಲು. ಫ್ಯಾನ್ ಗಾಳಿ ಕೂಡಾ ಬಿಸಿ ಅನಿಸುತ್ತಿದೆ. ಏನು ಮಾಡೋದು? ಸಂಜೆಯಾಗುತ್ತಿದ್ದಂತೆ ತಂಪಾದ ಗಾಳಿ ಬೀಸಲಿ ಎನ್ನುವ ಆಸೆ. ಕೆಲವು ಬಾರಿ ನಾವು ಧರಿಸುವ ಬಟ್ಟೆಯಿಂದಲೂ ಹೆಚ್ಚು ಸೆಖೆಯಾಗುತ್ತದೆ. ಬೇಸಿಗೆಕಾಲ ಇನ್ನೇನು ಪ್ರಾರಂಭವಾಗುತ್ತದೆ. ಯಾವ ತರಹದ ಬಟ್ಟೆ ಧರಿಸಬಹುದು ಎಂಬುದನ್ನು ಯೋಚಿಸಿ.
ಬೇಸಿಗೆಕಾಲ ಬರುತ್ತಿದ್ದಂತೆಯೇ ಕಬೋರ್ಡ್ನಲ್ಲಿರುವ ಉಡುಪು ಬದಲಾಗಲಿ. ಚಳಿಗಾಲದಲ್ಲಿ ಬಳಸುತ್ತಿದ್ದ ಬೆಚ್ಚನೆಯ ಉಡುಪುಗಳನ್ನು ಬದಿಗಿಟ್ಟು. ತೆಳುವಾದ, ಸೆಖೆಗಾಲದಲ್ಲಿ ದೇಹಕ್ಕೆ ಹಿತವೆನಿಸುವ ಬಟ್ಟೆಯನ್ನು ಎದುರಿಗಿಡಿ. ಹೆಚ್ಚು ಹತ್ತಿ ಬಟ್ಟೆಗಳನ್ನು ಬಳಸುವುದು ದೇಹಕ್ಕೆ ಹಿತಕರ. ಕಾಲೇಜಿಗೆ ಹೋಗುವಾಗ, ಆಫೀಸ್ ಹೊರಡುವಾಗ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಫುಲ್ ತೋಳಿನ ಬಟ್ಟೆ ಧರಿಸುವ ಅಭ್ಯಾಸ ಮಾಡಿಕೊಳ್ಳಿ. ಸೂರ್ಯನ ಕಿರಣಗಳಿಂದ ರಕ್ಷಿಸಿಕೊಂಡು ಚರ್ಮ ಸುಡದಂತೆ ಕಾಪಾಡಿಕೊಳ್ಳಬಹುದು.
ಉಡುಪು ಸಡಿಲವಾಗಿರಲಿ
ಬೇಸಿಗೆಗಾಲದಲ್ಲಿ ಮೈಗೆ ಅಂಟುವ ಉಡುಪು ಧರಿಸುವುದು ಅಷ್ಟೊಂದು ಹಿತ ಅನಿಸುವುದಿಲ್ಲ. ಬೇಸಿಗೆಗೆ ಮೈ ಬೆವರುತ್ತದೆ. ಬೆವರ ಹನಿಗಳು ಉಡುಪಿಗೆ ಅಂಟುವುದರಿಂದ ದೇಹಕ್ಕೆ ಕಿರಿ ಕಿರಿ ಅನಿಸುವುದು. ಹಾಗಾಗಿ ಕೊಂಚ ಸಡಿಲವಾದ ಉಡುಪು ಧರಿಸಿ. ಹತ್ತಿ ಉಡುಪನ್ನು ಬೇಸಿಗೆಯ ಸಮಯದಲ್ಲಿ ಧರಿಸುವುದು ಉತ್ತಮ. ದೇಹಕ್ಕೆ ಹಗುರವಾಗಿ ಹಾಗೂ ಹಿತ ಅನಿಸುತ್ತದೆ.
ತಿಳಿ ಬಣ್ಣದ ಬಟ್ಟೆ ಧರಿಸಿ
ಬೇಸಿಗೆ ಸಮಯದಲ್ಲಿ ಆದಷ್ಟು ಹೆಚ್ಚು ಡಾರ್ಕ್ ಬಣ್ಣದ ಬಟ್ಟೆಗಳ ಬದಲಾಗಿ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಕಪ್ಪು ಬಣ್ಣದಂತಹ ಡಾರ್ಕ್ ಬಣ್ಣದ ಬಟ್ಟೆಗಳನ್ನು ಆದಷ್ಟು ಧರಿಸದಿರಿ. ಝರಿಯ ಬಟ್ಟೆಗಳು, ಸ್ಟೋನ್ ವರ್ಕ್, ಸ್ಟಿಕ್ಕರ್ ವರ್ಕ್ ಈ ರೀತಿಯ ಉಡುಗಳನ್ನು ಧರಿಸದಿರಿ. ಬೇಸಿಗೆಯ ಬಿಸಿಲಿನ ಬೆವರಿನ ಜೊತೆ, ಸ್ಟೋನ್ ವರ್ಕ್ ಡಿಸೈನ್ಗಳು ಮೈಗೆ ಚುಚ್ಚುವಂತಿದ್ದರೆ ಮನಸ್ಸಿಗೆ ಕಿರಿಕಿರಿ ಅನುಭವ ಉಂಟಾಗುತ್ತದೆ. ಹಾಗೂ ಸ್ಟೋನ್ಗಳಿರುವ ಉಡುಪುಗಳು ಹೆಚ್ಚು ಭಾರವಾಗಿರುತ್ತದೆ. ಸೆಖೆಗಾಲದಲ್ಲಿ ಹೆಚ್ಚು ಭಾರದ ಉಡುಪನ್ನು ಧರಿಸಲು ದೇಹ ಒಗ್ಗಿಕೊಳ್ಳುವುದಿಲ್ಲ. ಕಾಲರ್ ಇರುವ ಅಥವಾ ಕುತ್ತಿಗೆ ಮುಚ್ಚುವ ಹತ್ತಿ ಬಟ್ಟೆ ಬಳಸಿ. ಇದರಿಂದ ಸೂರ್ಯನ ಶಾಖಕ್ಕೆ ಚರ್ಮ ಸುಡುವುದನ್ನು ತಪ್ಪಿಸಬಹುದು. ಜೊತೆಗೆ ಬಿಸಿಲಿನಲ್ಲಿ ಹೊರಗಡೆ ಓಡಾಡುವಾಗ ಮುಖವನ್ನೂ ಮುಚ್ಚಿಕೊಂಡು ಓಡಾಡುವ ಅಭ್ಯಾಸ ಮಾಡಿಕೊಳ್ಳಿ.
ಇದನ್ನೂ ಓದಿ: ಬೇಸಿಗೆಕಾಲದಲ್ಲಿ ಒಣ ಚರ್ಮದ ಸಮಸ್ಯೆಗೆ ರಾಮಬಾಣ ಅಲೋವೆರಾ
ಇದನ್ನೂ ಓದಿ: ಬೇಸಿಗೆ ಕಾಲಿಡುತ್ತಿದ್ದಂತೆ.. ನಾಗರಹೊಳೆ ಅರಣ್ಯಕ್ಕೆ ಬಿದ್ದ ಬೆಂಕಿ; 20 ಹೆಕ್ಟೇರ್‌ನಷ್ಟು ಅರಣ್ಯ ಆಹುತಿ