ಭೂಗಳ್ಳರ ಕರಾಮತ್ತು: ಬೆಟ್ಟವೇ ಕರಗಿ ರಾತ್ರೋ ರಾತ್ರಿ ಮಣ್ಣಾಯ್ತು, ಜಿಲ್ಲಾಧಿಕಾರಿಯೇ ಶಾಕ್​..

ಭೂಗಳ್ಳರ ಕರಾಮತ್ತು: ಬೆಟ್ಟವೇ ಕರಗಿ ರಾತ್ರೋ ರಾತ್ರಿ ಮಣ್ಣಾಯ್ತು, ಜಿಲ್ಲಾಧಿಕಾರಿಯೇ ಶಾಕ್​..

ಕೋಲಾರ: ಅದು ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಜಿಲ್ಲೆ,ಕೈಗಾರಿಕೆಗಳು ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ಅನುಕೂಲಕರವಾದ ಭೂಮಿ, ಭೂಮಿಗೆ ಬಂಗಾರದ ಬೆಲೆಯಿರುವ ಆ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಸರ್ಕಾರಿ ಜಮೀನು ಕಬಳಿಸುವ ದಂಧೆಯವರು ಸದ್ಯ, ಬೆಟ್ಟಗಳನ್ನೂ ನುಂಗಿ ನೀರು ಕುಡಿಯುತ್ತಿದ್ದಾರೆ.

ಅಧಿಕಾರಿಗಳ ವಿರುದ್ದ ಕೆಂಡಾಮಂಡವಾಗಿರುವ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ, ಮತ್ತೊಂದೆಡೆ ಇಟಾಚಿ ಯಂತ್ರಗಳ ಮೂಲಕ ಬೃಹತ್ ಬಂಡೆಗಳನ್ನ ಕರಗಿಸಿರುವ ಭೂ ಗಳ್ಳರು, ಮತ್ತೊಂದೆಡೆ ಹೈವೇ ಪಕ್ಕದಲ್ಲೆ ಇರುವ ಬೆಟ್ಟವನ್ನೆ ಸಮದಟ್ಟು ಮಾಡಿ ಸರ್ಕಾರಿ ಜಮೀನನ್ನ ಕಬಳಿಸಿರುವ ರಿಯಲ್ ಎಸ್ಟೇಟ್ ಮಾಫಿಯಾದವರು, ಇದೆಲ್ಲಾ ಕಂಡು ಬಂದಿದ್ದು ಕೋಲಾರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಡಿವಾಳ ಗ್ರಾಮದ ಬಳಿ.

ಹೌದು ಕೋಲಾರದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ನಕಲಿ ದಾಖಲೆಗಳನ್ನ ಸೃಷ್ಠಿಸಿ ಕಬಳಿಸುವ ಹುನ್ನಾರ ನಡೆದಿದೆ. ರಾತ್ರೋ ರಾತ್ರಿ ಅಕ್ರಮವಾಗಿ ದಾಖಲೆಗಳನ್ನ ಸೃಷ್ಠಿ ಮಾಡಿರುವ ಭೂ ಗಳ್ಳರು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನು ಕರಗಿಸಿದ್ದಾರೆ. ಅಕ್ರಮ ನಡೆದಿರುವ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿರುವ ಕೋಲಾರ ಡಿಸಿ ಸಿ.ಸತ್ಯಭಾಮ ಅಲ್ಲಿನ ಪರಿಸ್ಥಿತಿಯನ್ನು ನೋಡಿ ದಂಗಾಗಿ ಹೋಗಿದ್ದಾರೆ.

ಬೆಟ್ಟವಿದ್ದ ಸ್ಥಳ ರಾತ್ರೋ ರಾತ್ರಿ ಸಮತಟ್ಟಾದ ಭೂಮಿಯಾಯ್ತು..
ಬೆಟ್ಟವಿದ್ದ ಸ್ಥಳ ರಾತ್ರೋ ರಾತ್ರಿ ಸಮತಟ್ಟಾದ ಭೂಮಿಯಾಗಿದ್ದನ್ನು ಕಂಡು ಕೆಂಡಮಂಡಲರಾದ ಜಿಲ್ಲಾಧಿಕಾರಿಗಳು ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಪುಲ್‌ಕ್ಲಾಸ್ ತೆಗೆದುಕೊಂಡಿದ್ದಾರೆ.

ಸರ್ಕಾರಿ ಜಮೀನು ಕಬಳಕೆ ಮಾಡುತ್ತಿದ್ದ ವೇಳೆ ಸ್ಥಳದಲ್ಲಿದ್ದ 2 ಜೆಸಿಬಿ 2 ಟಿಪ್ಪರ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನ ನಿಯೋಜನೆ ಮಾಡಿ ಅತಿಕ್ರಮ ಪ್ರವೇಶಕ್ಕೆ  ನಿರ್ಬಂಧ ವಿಧಿಸಿದ್ದಾರೆ.

ಇನ್ನೂ ವಿಶೇಷತೆ ಎಂದ್ರೆ ರಾತ್ರೋರಾತ್ರಿ ಕೆಲ ಅಧಿಕಾರಿಗಳು ರಿಯಲ್ ಎಸ್ಟೇಟ್ ಮಾಫಿಯಾದ ಜೊತೆಗೂಡಿ ಬೆಂಗಳೂರು ಮೂಲದ ವ್ಯಕ್ತಿಗಳ ಜೊತೆ ಕೈ ಜೋಡಿಸಿ ಅಕ್ರಮವೆಸಗಿದ್ದಾರೆ. ಜಿಲ್ಲೆಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಸರ್ಕಾರಿ ಜಮೀನಿದೆ, ಬೆಟ್ಟ-ಗುಟ್ಟ, ನೆಡು ತೋಪು, ಗೋಗುಂಟೆಯಂತಹ ಸರ್ಕಾರಿ ಜಮೀನಿದೆ. ಕೋಲಾರ ತಾಲ್ಲೂಕು ಮಡಿವಾಳ ಬಳಿ ನೂರಾರು ಎಕರೆ ಪ್ರದೇಶದಲ್ಲಿ ಬೆಟ್ಟ-ಗುಟ್ಟಗಳಿದ್ದು, ಹೈವೇಗೆ ಹೊಂದಿಕೊಂಡಿದೆ.

ಭೂ ಮಾಲೀಕರ ವಿರುದ್ದ ಭೂ ಕಾಯ್ದೆಯಡಿ ಕ್ರಮಿನಲ್ ಪ್ರಕರಣ..
ಜೊತೆಗೆ ಪಕ್ಕದಲ್ಲೇ ಕೈಗಾರಿಕಾ ಪ್ರದೇಶವಿದೆ, ಗ್ರಾಮದ ಸರ್ವೇ ನಂ.56 ಹಾಗೂ 41 ರಲ್ಲಿ 5.1 ಎಕರೆ ಸರ್ಕಾರಿ ಗೋಮಾಳ ಜಮೀನಿದ್ದು, ಇದರಲ್ಲಿ ಬೆಟ್ಟ ಇದೆ. ಸಧ್ಯಕ್ಕೆ ಬೆಟ್ಟವನ್ನ ಕರಗಿಸಿರುವ ಭೂ ಮಾಫಿಯಾದವರು, ಸಮದಟ್ಟು ಮಾಡಿ ಭೂ ಕಬಳಿಕೆ ಮಾಡಿದ್ದಾರೆ. ಸಧ್ಯಕ್ಕೆ ಸ್ಥಳ ಪರಿಶೀಲನೆ ನಡೆಸಿರುವ ಡಿಸಿ ಸತ್ಯಭಾಮ ತನಿಖೆಗೆ ಆದೇಶಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಭೂ ಮಾಲೀಕರ ವಿರುದ್ದ ಭೂ ಕಾಯ್ದೆಯಡಿ ಕ್ರಮಿನಲ್ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ.

ಒಟ್ನಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕುಳಗಳ ಕಣ್ಣು ಕೋಲಾರದ ಚಿನ್ನದ ನೆಲದ ಮೇಲೆ ಬಿದ್ದಿದ್ದು, ಅಕ್ರಮ ಗಳಿಗೆ ಮಿತಿಯೇ ಇಲ್ಲದಂತ್ತಾಗುತ್ತಿದೆ, ಇನ್ನಾದ್ರು ಸಂಬಂದಪಟ್ಟವರು ಎಚ್ಚೆತ್ತುಕೊಂಡು ಇಂತಹ ಚಿನ್ನದ ಬೆಲೆ ಬಾಳುವ ಭೂಮಿಯನ್ನ ಕಾಪಾಡಿಕೊಳ್ಳಬೇಕು ಅನ್ನೋದು ಜಿಲ್ಲೆಯ ಜನರ ಒತ್ತಾಯ.
-ರಾಜೇಂದ್ರಸಿಂಹ

Click on your DTH Provider to Add TV9 Kannada