ರಾಮನಗರ: ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯಲ್ಲಿ ಯಾರನ್ನೋ ಮಂತ್ರಿ ಮಾಡಬೇಡಿ ಎಂದು ಹೇಳಿದ್ದೀನಂತೆ. ಯಾರನ್ನೋ ಮಂತ್ರಿ ಮಾಡಿದ್ರೆ ನಾನು ಹೆದರಿಕೊಳ್ಳುವವನಲ್ಲ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಕ್ಷೇತ್ರ ಅಭಿವೃದ್ಧಿಗೆ ಹಣ ಬಿಡುಗಡೆ ವಿಚಾರವಾಗಿ ಸಿಎಂ ಭೇಟಿಯಾಗಿದ್ದೆನೇ ಹೊರತು ರಾಜಕೀಯವಾಗಿ ಯಾವುದೇ ವಿಚಾರವನ್ನು ಚರ್ಚೆ ಮಾಡಿಲ್ಲ. ಎಂತೆಂಥವರನ್ನ ನಾವು ನೋಡಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಇಲ್ಯಾರೋ ಮಂತ್ರಿಯಾದ್ರೆ ಹೆದರಿಕೊಂಡು ಹೋಗುತ್ತೀವಾ? ಅವರು 20 ಕೆರೆ ತುಂಬಿಸಿರೋದಕ್ಕೆ ಭಗೀರಥ ಆಗಿಬಿಟ್ಟರಂತೆ. ನಾನು 128 ಕೆರೆ ತುಂಬಿಸಿದ್ದೇನೆ, ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಜಿಲ್ಲೆಯಲ್ಲಿ ಬಡವರಿಗೆ ಅನ್ಯಾಯ ಹಾಗೂ ಅಕ್ರಮ ಚಟುವಟಿಕೆ ನಡೆಯಲು ನಾನು ಅವಕಾಶ ಮಾಡಿಕೊಡುವುದಿಲ್ಲ. ಸಿಎಂ ನಮ್ಮ ಜಿಲ್ಲೆಯ ನಾಲ್ಕು ಜನರನ್ನ ಮಂತ್ರಿ ಮಾಡಲಿ ಎಂದು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹೇಳಿದರು.
‘ಸ್ವಾರ್ಥಕ್ಕಾಗಿ ವಿವಾದದ ವಿಚಾರಕ್ಕೆ ನಾನು ತಲೆ ಹಾಕುವುದಿಲ್ಲ’
ಲಿಂಗಾಯತ ಸಮುದಾಯವನ್ನ ಒಬಿಸಿಗೆ ಸೇರಿಸುವ ವಿಚಾರವಾಗಿ ಈಗಿನ ರಾಜಕೀಯ ಪ್ರಸಂಗಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಮೀಸಲಾತಿ, ಪ್ರಾಧಿಕಾರ ರಚನೆ ಮಾಡುವುದು ಅವರವರ ಇಚ್ಛೆ. ಅಧಿಕಾರ ನಡೆಸುವವರಿಗೆ ನಾನು ಸಲಹೆ ಕೊಡುತ್ತೇನೆ. ಪ್ರತಿ ಕುಟುಂಬಕ್ಕೂ ವಸತಿ, ಶಿಕ್ಷಣ, ಆರೋಗ್ಯ ಕಲ್ಪಿಸಬೇಕು. ಉದ್ಯೋಗ ಕಲ್ಪಿಸುವುದು ಸರ್ಕಾರದ ಕೆಲಸ ಎಂದು ಕುಮಾರಸ್ವಾಮಿ ಹೇಳಿದರು.
ಸ್ವಾರ್ಥಕ್ಕಾಗಿ ವಿವಾದದ ವಿಚಾರಕ್ಕೆ ನಾನು ತಲೆ ಹಾಕುವುದಿಲ್ಲ. ಫಲಾಪೇಕ್ಷೆ ಇಟ್ಟುಕೊಂಡು ನಾನು ತಲೆ ಹಾಕುವುದಿಲ್ಲ ಎಂದು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹೇಳಿದರು.