ಟಿವಿ9 ಬಿಗ್ ಇಂಪ್ಯಾಕ್ಟ್: ಮುಳ್ಳು ಕಂಟಿಯಲ್ಲಿ ಮುಚ್ಚಿ ಹೋಗಿದ್ದ 8,000 ಆಸರೆ ಮನೆಗಳು ನೆರೆ ಪೀಡಿತರಿಗೆ ವಿತರಣೆಯಾದವು
ಸರ್ಕಾರದ ಹೊಣೆಗೇಡಿತನದಿಂದ ಅಲ್ಲಿನ ಜನ ದಶಕದಿಂದಲೂ ವನವಾಸ ಅನುಭವಿಸುತ್ತಿದ್ದರು. ಹೀಗಾಗಿ ಟಿವಿ9ನಲ್ಲಿ ನೆರೆ ಸಂತ್ರಸ್ಥರ ಗೃಹಭಂಗ ಕುರಿತಾದ ವಿಸ್ತೃತ ವರದಿ ಪ್ರಸಾರವಾದ ನಂತರ ಆ ಜಿಲ್ಲೆಯ ನೆರೆ ಸಂತ್ರಸ್ತರ ದಶಕದ ಸಂಕಷ್ಟಕ್ಕೆ ಮುಕ್ತಿ ದೊರಕಿದೆ.
ರಾಯಚೂರು: ರಾಜ್ಯದ ಆ ಜಿಲ್ಲೆಯ ಜನ ಎರಡು ನದಿಗಳ ಜಲಪ್ರಳಕ್ಕೆ ತತ್ತರಿಸಿ ಹೋಗಿದ್ದರು. ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದರು. ದಾನಿಗಳು ಆ ನೆರೆ ಸಂತ್ರಸ್ಥರಿಗೆ ಸಾವಿರಾರು ಮನೆಗಳನ್ನ ನಿರ್ಮಿಸಿ ಉದಾರತೆಯನ್ನೂ ತೋರಿಸಿದ್ದರು. ಆದರೆ ಸರ್ಕಾರದ ಹೊಣೆಗೇಡಿತನದಿಂದ ಅಲ್ಲಿನ ಜನ ದಶಕದಿಂದಲೂ ವನವಾಸ ಅನುಭವಿಸುತ್ತಿದ್ದರು. ಹೀಗಾಗಿ ಟಿವಿ9ನಲ್ಲಿ ನೆರೆ ಸಂತ್ರಸ್ತರ ಗೃಹಭಂಗ ಕುರಿತಾದ ವಿಸ್ತೃತ ವರದಿ ಪ್ರಸಾರವಾದ ನಂತರ ಆ ಜಿಲ್ಲೆಯ ನೆರೆ ಸಂತ್ರಸ್ತರ ದಶಕದ ಸಂಕಷ್ಟಕ್ಕೆ ಮುಕ್ತಿ ದೊರಕಿದೆ.. ಇದು ಟಿವಿ9 ಬಿಗ್ ಇಂಪ್ಯಾಕ್ಟ್..
ಅನಾಥವಾಗಿ ಬಿದ್ದಿದ್ದ 8,000 ಆಸರೆ ಮನೆಗಳ ಹಕ್ಕುಪತ್ರ ವಿತರಣೆ.. ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಜುಕೂರು ಗ್ರಾಮದ ನೆರೆ ಸಂತ್ರಸ್ಥರನ್ನು 2009ನೇ ಸಾಲಿನಲ್ಲಿ ಬಂದಿದ್ದ ತುಂಗಭದ್ರ ನದಿ ಪ್ರವಾಹದ ವೇಳೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರ ಹಳ್ಳಿಗಳಲ್ಲಿ ದಾನಿಗಳು ನಿರ್ಮಿಸಿದ್ದ 8,000ಕ್ಕೂ ಅಧಿಕ ಆಸರೆ ಮನೆಗಳು ಅನಾಥವಾಗಿದ್ದವು. ಜಿಲ್ಲಾಡಳಿತ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗಿರಲಿಲ್ಲ.
ಅಲ್ಲದೇ ಯಾವುದೇ ನೆರೆ ಸಂತ್ರಸ್ಥರಿಗೆ ದಶಕ ಕಳೆದ್ರೂ ಮನೆಗಳ ಹಕ್ಕುಪತ್ರ ಸಹ ನೀಡಿರಲಿಲ್ಲ. ಇದೀಗ ಜಿಲ್ಲಾಡಳಿತ ಮುಳ್ಳುಕಂಟಿಯಲ್ಲಿ ಮುಚ್ಚಿ ಹೋಗಿ ಅನಾಥವಾಗಿ ಬಿದ್ದಿರುವ ಆಸರೆ ಮನೆಗಳ ಸುತ್ತಲೂ ಬೆಳೆದಿದ್ದ ಮುಳ್ಳು ಕಂಟೆಯನ್ನ ತೆರವುಗೊಳಿಸುವ ಕೆಲಸ ಆರಂಭಿಸಿದೆ. ಅಲ್ಲದೇ ದಶಕದ ನಂತರ ನೆರೆ ಸಂತ್ರಸ್ಥರಿಗೆ ಆಸರೆ ಮನೆಗಳ ಹಕ್ಕುಪತ್ರಗಳನ್ನ ವಿತರಿಸುತ್ತಿದೆ. ಹಕ್ಕುಪತ್ರ ಪಡೆದ ನೆರೆ ಸಂತ್ರಸ್ಥರು ಟಿವಿ9 ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಜಲಪ್ರಳಯದ ಹೊಡೆತಕ್ಕೆ ಬೀದಿಗೆ ಬಿದ್ದಿದ್ದ ರಾಯಚೂರು ಜಿಲ್ಲೆಯ ಕೃಷ್ಣ ಮತ್ತು ತುಂಗಭದ್ರ ನದಿ ದಂಡೆ ಗ್ರಾಮಸ್ಥರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಜಿಲ್ಲೆಯಾದ್ಯಂತ 52 ಹಳ್ಳಿಗಳನ್ನ ಸ್ಥಳಾಂತರ ಮಾಡಲಾಗಿತ್ತು. ಸ್ಥಳಾಂತರ ಮಾಡಿದ ಹಳ್ಳಿಗಳಲ್ಲಿ ನಾಡಿನ ಅನೇಕ ದಾನಿಗಳು ಜಿಲ್ಲಾಡಳಿತ ನೀಡಿದ ಭೂಮಿಯಲ್ಲಿ ಸಾವಿರಾರು ಮನೆಗಳನ್ನ ನಿರ್ಮಿಸಿದ್ದರು. ಆದ್ರೆ ದಾನಿಗಳು ನಿರ್ಮಿಸಿಕೊಟ್ಟ ಮನೆಗಳಲ್ಲಿ ನೆರೆ ಸಂತ್ರಸ್ಥರು ವಾಸಿಸಲು ಸರ್ಕಾರ ರಸ್ತೆ, ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ. ಹೀಗಾಗಿ 8,000 ಕ್ಕೂ ಅದಿಕ ಆಸರೆ ಮನೆಗಳೆಲ್ಲ ಮುಳ್ಳು ಕಂಟೆಯಲ್ಲಿ ಮುಚ್ಚಿ ಹೋಗಿದ್ದವು. ಸಾವಿರಾರು ನೆರೆ ಸಂತ್ರಸ್ಥರಿಗೆ ಹಕ್ಕುಪತ್ರ ಸಹ ನೀಡಿರಲಿಲ್ಲ.
ಟಿವಿ9ನಲ್ಲಿ ನೆರೆ ಸಂತ್ರಸ್ಥರ ಗೃಹಭಂಗ ಶೀರ್ಷಿಕೆಯಡಿ ವರದಿ ಪ್ರಸಾರ.. ಈ ಬಗ್ಗೆ ಟಿವಿ9 ನೆರೆ ಸಂತ್ರಸ್ಥರ ಗೃಹಭಂಗ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಲಕ್ಷ್ಮಣ ಸವದಿ, ನೆರೆ ಸಂತ್ರಸ್ಥರ ಸಂಕಷ್ಟಕ್ಕೆ ಸ್ಪಂದಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದರು. ಪ್ರಗತಿ ಪರಿಶೀಲನ ಸಭೆಯಲ್ಲಿಯೂ ಈ ವಿಚಾರ ಸುಧೀರ್ಘವಾಗಿ ಚರ್ಚಿಸಲಾಗಿತ್ತು. ಇದೀಗ ಜಿಲ್ಲಾಡಳಿತ ಎಲ್ಲಾ ಸ್ಥಳಾಂತರ ಹಳ್ಳಿಗಳ ನೆರೆ ಸಂತ್ರಸ್ಥರಿಗೆ ಹಂತ ಹಂತವಾಗಿ ಹಕ್ಕುಪತ್ರ ವಿತರಣೆ ಮಾಡಲು ಪ್ಲಾನ್ ಮಾಡಿಕೊಂಡಿದೆ.
ಒಟ್ನಲ್ಲಿ ಪ್ರವಾಹದ ಹೊಡೆತಕ್ಕೆ ಮನೆ ಮಠ ಕಳಕೊಂಡು ಬೀದಿಗೆ ಬಿದ್ದಿದ್ದ ನೆರೆ ಸಂತ್ರಸ್ಥರು ಕಳೆದ ಒಂದು ದಶಕದಿಂದಲೂ ಸಂಕಷ್ಟದಲ್ಲೇ ಬದುಕುತ್ತಿದ್ದರು. ಆಸರೆ ಮನೆಗಳನ್ನ ನಿರ್ಮಾಣ ಮಾಡಿದ್ದರೂ ಗುಡಿಸಲುಗಳಲ್ಲೆ ವಾಸಿಸ್ತಿದ್ದರು. ಇದೀಗ ಟಿವಿ9 ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ನೆರೆ ಸಂತ್ರಸ್ಥರ ಸಂಕಟಕ್ಕೆ ಸ್ಪಂದಿಸಲು ನಿರ್ಧರಿಸಿದೆ. ಆದ್ರೆ ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ನೆರೆ ಸಂತ್ರಸ್ಥರಿಗೆ ಆಸರೆ ಮನೆಗಳ ಹಕ್ಕುಪತ್ರ ವಿತರಿಸಲು ತ್ವರಿತವಾಗಿ ಕ್ರಮ ಕೈಗೊಳ್ಳುವ ಮೂಲಕ ಪ್ರವಾಹಪೀಡಿತರ ನೆಮ್ಮದಿಯ ಬದುಕಿಗೆ ನಾಂದಿ ಹಾಡಬೇಕು ಅನ್ನೋದ್ರಲ್ಲಿ ಎರಡು ಮಾತಿಲ್ಲ.
Published On - 6:51 pm, Fri, 27 November 20