
ಬೆಂಗಳೂರು: ಕೊರೊನಾ ಸೋಂಕಿನಿಂದ ಬೆಂದು ಹೋಗಿರುವವರಿಗೆ ಅಧಿಕಾರಿಗಳು ಮತ್ತಷ್ಟು ನೋವನ್ನು ನೀಡುತ್ತಿದ್ದಾರೆ. ಹೋಮ್ ಐಸೋಲೇಶನ್ನಲ್ಲಿದ್ದವರಿಗೆ ಹೆಲ್ತ್ ಕಿಟ್ ಹೆಸರಲ್ಲಿ ಅಧಿಕಾರಿಗಳು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೋಮ್ ಐಸೋಲೇಶನ್ನಲ್ಲಿರುವ ಸೋಂಕಿತರಿಗೆ ಬಿಬಿಎಂಪಿ ವತಿಯಿಂದ ಹೆಲ್ತ್ ಕಿಟ್ ಹಂಚಿಕೆ ಮಾಡಬೇಕು. 300 ಜನ ಸೋಂಕಿತರಿಗೆ ಹೆಲ್ತ್ ಕಿಟ್ಗಾಗಿ 96,507 ರೂ.ಗೆ ಟೆಂಡರ್ ನೀಡಲಾಗಿದೆ. ಪ್ರತಿ ವಲಯದಲ್ಲೂ ಹೋಮ್ ಐಸೋಲೇಶನ್ನಲ್ಲಿರುವ ಸೋಂಕಿತರಿಗೆ ಹೆಲ್ತ್ ಕಿಟ್ ನೀಡಿರುವ ಬಗ್ಗೆ ಅಧಿಕಾರಿಗಳು ಲೆಕ್ಕ ನೀಡಿದ್ದಾರೆ.
ಆದರೆ ಅಸಲಿಗೆ ಸೋಂಕಿತರಿಗೆ ಹೆಲ್ತ್ ಕಿಟ್ಗಳೇ ತಲುಪಿಲ್ಲ. ಓರ್ವ ಸೋಂಕಿತನಿಗೆ 14 ದಿನದ ಔಷಧಿ, ಮಾಸ್ಕ್ ಮತ್ತು ಪಲ್ಸ್ ಮೀಟರ್ ನೀಡಬೇಕು. ಆದರೆ ಅಧಿಕಾರಿಗಳು ಕೇವಲ ನಾಲ್ಕೈದು ದಿನದ ಔಷಧಿಯನ್ನ ಕೆಲವರಿಗೆ ಮಾತ್ರ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ 35 ಸಾವಿರಕ್ಕೂ ಅಧಿಕ ಸೋಂಕಿತರು ಹೋಮ್ ಐಸೋಲೇಶನ್ನಲ್ಲಿದ್ದು ಹೋಮ್ ಐಸೋಲೇಶನ್ನಲ್ಲಿದ್ದವರ ಹೆಸರಲ್ಲಿ ದೋಖಾ ಆಗಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.