ಮೂರು ವಿವಾಹವಾದ 76ರ ವೃದ್ಧನಿಗೆ ಸಂಕಷ್ಟ, ಬಹುಪತ್ನಿತ್ವದ ಕೇಸ್ ರದ್ದುಪಡಿಸಲು ಹೈಕೋರ್ಟ್ ನಕಾರ
ಮೂರು ವಿವಾಹವಾದ 76 ವರ್ಷದ ವೃದ್ಧನಿಗೆ ಇದೀಗ ಸಂಕಷ್ಟ ಎದುರಾಗಿದೆ. ಆಸ್ತಿ ವಿವಾದ ಉಂಟಾಗಿ ಮೊದಲ ಪತ್ನಿ ಪತಿ ವಿರುದ್ಧ ಬಹುಪತ್ನಿತ್ವದ ಕೇಸ್ ದಾಖಲಿಸಿದ್ದು, ಕೋರ್ಟ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ. ಅದರಂತೆ ವೃದ್ಧ ಕ್ರಿಮಿನಲ್ ಪ್ರಕರಣ ಎದುರಿಸುವಂತಾಗಿದೆ.
ಬೆಂಗಳೂರು: ಮೂರು ವಿವಾದವಾದ ಆರೋಪ 76 ವರ್ಷದ ವೃದ್ಧನ ಮೇಲೆ ಕೇಳಿಬಂದಿದ್ದು, ಈತನ ವಿರುದ್ಧ ದಾಖಲಾದ ಬಹುಪತ್ನಿತ್ವದ ಪ್ರಕರಣ (polygamy case)ವನ್ನು ರದ್ದುಪಡಿಸಲು ಹೈಕೋರ್ಟ್ (High Court) ನಿರಾಕರಿಸಿದೆ. ಮದುವೆ ವೇಳೆ ಪತ್ನಿಯರ ಅನುಮತಿ ಪಡೆದೇ ಮೂರನೇ ವಿವಾಹ ಆಗಿರುವುದಾಗಿ ವೃದ್ಧನ ಪರ ವಕೀಲರು ಹೈಕೋರ್ಟ್ನಲ್ಲಿ ವಾದಿಸಿದ್ದಾರೆ. ಆದರೆ ಕೇಸ್ ರದ್ದುಪಡಿಸಲು ನ್ಯಾ.ಎಂ.ನಾಗಪ್ರಸನ್ನರವರಿದ್ದ ಪೀಠ ನಿರಾಕರಿಸಿದೆ.
ಇದನ್ನೂ ಓದಿ: ಘನಘೋರ ತಪ್ಪನ್ನು ಒಪ್ಪಿಕೊಂಡ ಆ್ಯಸಿಡ್ ನಾಗೇಶ, ಆಸ್ಪತ್ರೆಯಲ್ಲಿ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ ಭಯಾನಕ ಕಥನ
ಆನಂದ್ ಎಂಬ 76 ವರ್ಷದ ವೃದ್ಧ 1968ರಲ್ಲಿ ಮೊದಲ ವಿವಾಹವಾಗಿದ್ದಾನೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ 1973ರಲ್ಲಿ ಮೊದಲ ಪತ್ನಿಯ ಅನುಮತಿ ಪಡೆದ ಆಕೆಯ ಸಹೋದರಿಯನ್ನೇ 2ನೇ ಪತ್ನಿಯನ್ನಾಗಿ ವರಿಸಿದ್ದು, ಈಕೆಗೂ ಇಬ್ಬರು ಮಕ್ಕಳಿದ್ದಾರೆ. ಮೊದಲೆರಡು ಪತ್ನಿಯರ ಅನುಮತಿ ಪಡೆದ ಆನಂದ್ 1993ರಲ್ಲಿ ಮೂರನೇ ಮದುವೆಯಾಗಿದ್ದಾನೆ. ಜೊತೆಗೆ ಮೂವರಿಗೂ ಸಮಾನವಾಗಿ ಆಸ್ತಿ ಹಂಚಿಕೊಟ್ಟಿದ್ದೇನೆ. ಅದಾಗಿಯೂ ಕುಟುಂಬದಲ್ಲಿ ಆಸ್ತಿ ವಿವಾದ ಉಂಟಾಗಿ ಆನಂದ್ ವಿರುದ್ಧ ಮೊದಲ ಪತ್ನಿ 2018ರಲ್ಲಿ ಬಹುಪತ್ನಿತ್ವದ ಪ್ರಕರಣ ದಾಖಲಿಸಿದ್ದರು.
ಪತಿ ತನನ್ನು ಸೇರಿದಂತೆ ಮೂವರನ್ನು ಮದುವೆಯಾಗಿದ್ದಾರೆ. ಮೊದಲ ಪತ್ನಿ ಬದುಕಿರುವಾಗಲೇ ಮರುವಿವಾಹ ಅಪರಾಧವಾಗಿರುವುದರಿಂದ ಪತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಪತಿಯ ಸ್ನೇಹಿತರು, ಸಂಬಂಧಿಗಳ ವಿರುದ್ಧವೂ ದೂರು ನೀಡಿದ್ದರಿಂದ ಕೋರ್ಟ್ ಎಲ್ಲರಿಗೂ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಆನಂದ್ ಅರ್ಜಿ ಸಲ್ಲಿಸಿದ್ದನು.
ಇದನ್ನೂ ಓದಿ: Crime News: ಟ್ರಾನ್ಸಫಾರ್ಮರ್ ಅಳವಡಿಸಲು ಲಂಚಕ್ಕೆ ಬೇಡಿಕೆ ಇಟ್ಟ ಸೆಸ್ಕ್ ಜೆಇ: ಆರೋಪ
ಪ್ರಕರಣ ದಾಖಲಾಗಿರುವ ಬಗ್ಗೆ ಕೋರ್ಟ್ನಲ್ಲಿ ವಾದ ಮಂಡಿಸಿದ ಆನಂದ್ ಪರ ವಕೀಲರು, 2ನೇ ದುವೆಯಾದ 45 ವರ್ಷದ ನಂತರ, 3ನೇ ಮದುವೆಯಾದ 25 ವರ್ಷದ ನಂತರ ಈಗ ಮೊದಲ ಪತ್ನಿ ಕೇಸ್ ದಾಖಲಿಸಿದ್ದಾರೆ. ವಿಳಂಬವಾಗಿ ದಾಖಲಿಸಿರುವ ಕೇಸ್ ರದ್ದುಪಡಿಸಬೇಕು. ಪ್ರತಿ ಬಾರಿ ಮದುವೆಯಾಗುವಾಗಲೂ ಪತ್ನಿಯರ ಒಪ್ಪಿಗೆ ಪಡೆದಿದ್ದಾರೆ. 3ನೇ ಪತ್ನಿಗೆ ಎರಡು ಆಸ್ತಿಗಳನ್ನು ಕೊಡುಗೆಯಾಗಿ ನೀಡಿದ್ದು ಸಂಸಾರದಲ್ಲಿ ಸರಿಬಂದಿಲ್ಲ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ 2018ರಲ್ಲಿ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಕೇಸ್ ರದ್ದುಪಡಿಸಬೇಕೆಂದು ಆನಂದ್ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದ್ದರು.
ಮದುವೆ ವೇಳೆ ಇತರೆ ಪತ್ನಿಯರ ಒಪ್ಪಿಗೆ ಪಡೆಯಲಾಗಿದೆ. ಹೀಗಿದ್ದಾಗಲೂ ಮದುವೆಯಾದ 45 ವರ್ಷ, 25 ವರ್ಷವಾದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಬಹುಪತ್ನಿತ್ವ ಪ್ರಕರಣವನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನರವರಿದ್ದ ಪೀಠ, ಆರೋಪಿಯ ಪರ ವಕೀಲರ ಮನವಿ ತಳ್ಳಿಹಾಕಿತು.
ಇದನ್ನೂ ಓದಿ: ಕಾರು ಹಾಗೂ ಟಿಟಿ ವಾಹನದ ನಡುವೆ ಭೀಕರ ಅಪಘಾತ: ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು
ಐಪಿಸಿ ಸೆಕ್ಷನ್ 494 ಅಡಿ ಬಹುಪತ್ನಿತ್ವ ಅಪರಾಧದಲ್ಲಿ ಇತರೆ ಪತ್ನಿಯ ಸಮ್ಮತಿಗೆ ಮಹತ್ವವಿಲ್ಲ. ಸಾಮಾನ್ಯವಾಗಿ ಬಹುಪತ್ನಿತ್ವದ ತ್ರಿಕೋನ ಆಯಾಮದ ಕೇಸ್ ಗಳನ್ನು ನೋಡಿದ್ದೇವೆ. ಇದು ಚತುಷ್ಕೋನ ವಿವಾಹದ ಕೇಸ್. ಪತ್ನಿಯ ಸಮ್ಮತಿ ಮೇರೆಗೆ ಮರುವಿವಾಹವಾದರೆ ಅದಕ್ಕೆ ಅಪರಾಧದಿಂದ ವಿನಾಯ್ತಿ ಸಿಗುವುದಿಲ್ಲ. ವಿಳಂಬದ ಕಾರಣಕ್ಕೆ ಪತಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ. ಆದರೆ ಇದು ಪತಿ ಮತ್ತು ಮೂವರು ಪತ್ನಿಯರ ನಡುವಿನ ವಿಚಾರವಾದ್ದರಿಂದ ಪತಿಯ ಸಂಬಂಧಿಕರನ್ನು ಇದರಲ್ಲಿ ಎಳೆತಂದಿರುವುದು ಸರಿಯಲ್ಲ. ಮೂರು ಮದುವೆಗಳಿಗೆ ಪತಿಯ ಸ್ನೇಹಿತರು, ಸಂಬಂಧಿಗಳು ಕಾರಣರೆಂಬುದಕ್ಕೆ ಯಾವುದೇ ಪುರಾವೆ ನೀಡಿಲ್ಲ. ಹೀಗಾಗಿ ಪತಿಯ ಸ್ನೇಹಿತರು, ಸಂಬಂಧಿಕರ ವಿರುದ್ಧದ ಕೇಸ್ ರದ್ದುಪಡಿಸುತ್ತಿದ್ದೇನೆಂದು ಹೈಕೋರ್ಟ್ ನ್ಯಾ.ಎಂ.ನಾಗಪ್ರಸನ್ನ ಆದೇಶ ನೀಡಿದ್ದಾರೆ.
ಸದ್ಯ ಮೂವರನ್ನು ಮದುವೆಯಾಗಿದ್ದ 76 ವರ್ಷದ ಆನಂದ್, ಸಂಕಷ್ಟಕ್ಕೆ ಸಿಲುಕಿದ್ದು, ಆತನ ಯೌವನದ ದಿನದ ತಪ್ಪಿಗೆ ಈಗ ಕ್ರಿಮಿನಲ್ ಪ್ರಕರಣವನ್ನು ಎದುರಿಸುವಂತಾಗಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Sat, 4 June 22