Chitradurga highway: ಅಪಘಾತಗಳ ತವರು ಚಿತ್ರದುರ್ಗದ ಸುತ್ತಮುತ್ತ ಹೆದ್ದಾರಿಗಳೇ ಹೆಮ್ಮಾರಿಗಳು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದೂ ಇದಕ್ಕೆ ಕಾರಣವಾಗಿದೆ!
ಚಿತ್ರದುರ್ಗ ನಗರ ಬಳಿಯಲ್ಲೇ ನಿತ್ಯ ಅಪಘಾತಗಳಿಂದ ಸಾವು ನೋವು ಸಂಭವಿಸುತ್ತಿವೆ. ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಪ್ರಯಾಣಿಕರು ಸೇರಿದಂತೆ ಅನೇಕರು ಹೇ ವೇ ಗೆ ಬಲಿ ಆಗುತ್ತಿದ್ದಾರೆ.
ಕೋಟೆನಾಡು ಚಿತ್ರದುರ್ಗ ನಗರ (chitradurga) ಹೆದ್ದಾರಿಗಳ ನಗರಿಯೂ ಹೌದು. ಆದ್ರೆ, ಅವೈಜ್ಞಾನಿಕ ಹೆದ್ದಾರಿಗಳು (highway) ಹೆಮ್ಮಾರಿಗಳಾಗಿ ಜನರ ಪ್ರಾಣ ಹಿಂಡುತ್ತಿವೆ. ಆದ್ರೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ವರದಿ ಇಲ್ಲಿದೆ. ಸೂಕ್ತ ಸರ್ವೀಸ್ ರಸ್ತೆ, ಮಾರ್ಗ ಫಲಕಗಳಿಲ್ಲದ ಹೆದ್ದಾರಿ. ಅವೈಜ್ಞಾನಿಕ ಹೆದ್ದಾರಿ ನಿರ್ಮಾಣದಿಂದ ನಿತ್ಯ ಅಪಘಾತ (accident). ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಜನರ ಹಿಡಿಶಾಪ. ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ (A Narayanaswamy). ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗದಲ್ಲಿ.
ಹೌದು, ರಾಷ್ಟ್ರೀಯ ಹೆದ್ದಾರಿ 4 ಮತ್ತು ರಾಷ್ಟ್ರೀಯ ಹೆದ್ದಾರಿ 13 ಚಿತ್ರದುರ್ಗ ನಗರವನ್ನು ಹಾದು ಹೋಗುತ್ತವೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಮತ್ತೊಂದು ಕಡೆ ರಾಷ್ಟ್ರೀಯ ಹೆದ್ದಾರಿ 13ರ ಅಭಿವೃದ್ಧಿ ಕಾಮಗಾರಿಯೂ ನಡೆದಿದೆ. ಆದ್ರೆ, ಬಹುತೇಕ ಕಡೆ ಸಮರ್ಪಕ ಸರ್ವೀಸ್ ರಸ್ತೆಗಳು ನಿರ್ಮಾಣ ಆಗಿಲ್ಲ. ಅನೇಕ ಕಡೆ ಮಾರ್ಗಸೂಚಿ ಫಲಕಗಳನ್ನೂ ಹಾಕಲಾಗಿಲ್ಲ. ವೇಗ ನಿಯಂತ್ರಣಕ್ಕೆ, ಅಪಘಾತ ತಡೆಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ!
ಹೀಗಾಗಿ, ಚಿತ್ರದುರ್ಗ ನಗರ ಬಳಿಯಲ್ಲೇ ನಿತ್ಯ ಅಪಘಾತಗಳಿಂದ ಸಾವು ನೋವು ಸಂಭವಿಸುತ್ತಿವೆ. ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಪ್ರಯಾಣಿಕರು ಸೇರಿದಂತೆ ಅನೇಕರು ಹೇ ವೇ ಗೆ ಬಲಿ ಆಗುತ್ತಿದ್ದಾರೆ. ಪ್ರತಿದಿನ ಒಂದಲ್ಲಾ ಒಂದು ಕಡೆ ಹೈವೇ ಅಪಘಾತದಲ್ಲಿ ಜನರು ಬಲಿ ಆಗುತ್ತಿದ್ದು ಡೇಂಜರ್ ಹೈ ವೇ ಯಿಂದ ಜನರಲ್ಲಿ ಆತಂಕ ಮೂಡಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನುತ್ತಾರೆ ನಗರಾಭಿವೃದ್ಧಿ ಪ್ರಾಧಿಕಾರದ ಬಿ.ಟಿ. ಜಗದೀಶ್ ಅವರು.
ಇನ್ನು ಚಿತ್ರದುರ್ಗ ಸಂಸದ, ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ನೇತೃತ್ವದಲ್ಲಿ ನಡೆದ ದಿಶಾ ಮೀಟಿಂಗ್ ನಲ್ಲಿ (ಕೇಂದ್ರ ಪುರಸ್ಕೃತ ಯೋಜನೆಗಳ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಭೆ) ಅವೈಜ್ಞಾನಿಕ ಹೆದ್ದಾರಿಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವ ನಾರಾಯಣಸ್ವಾಮಿ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ತಕ್ಷಣವೇ ಹೈವೇಯಲ್ಲಿ ಬ್ಲಾಕ್ ಸ್ಪಾಟ್ಸ್ ಗುರುತಿಸುವುದು. ಸರ್ವೀಸ್ ರಸ್ತೆ ನಿರ್ಮಾಣ ಮಾಡಿ ಅಪಘಾತ ತಡೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತಾಕೀತು ಮಾಡಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರ ಬಳಿ ಅವೈಜ್ಞಾನಿಕ ಹೆದ್ದಾರಿ ನಿರ್ಮಾಣದಿಂದ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಹೀಗಾಗಿ, ಜನರು ಹಿಡಿಶಾಪ ಹಾಕುತ್ತಿದ್ದು ಸದ್ಯ ಕೇಂದ್ರ ಸಚಿವ ನಾರಾಯಣಸ್ವಾಮಿ ಹೈವೇ ಪ್ರಾಧಿಕಾರದ ಅಧಿಕಾರಿಗಳಿಗೆ ಅಪಘಾತ ತಡೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇನ್ನಾದ್ರೂ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜನರ ಪ್ರಾಣ ರಕ್ಷಸಿಬೇಕಿದೆ.
ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ
Published On - 2:17 pm, Sat, 31 December 22