ಕೊರೊನಾ ಭೀತಿಯಲ್ಲಿ ಯಾರಿಗೆ ಯಾರುಂಟು!? ಶವಸಂಸ್ಕಾರ ಮಾಡಲು ಕುಟುಂಬಸ್ಥರೇ ಹಿಂದೇಟು
ಹಾವೇರಿ: ಕೊರೊನಾ ಮನುಷ್ಯನನ್ನು ಯಾವ ಮಟ್ಟಕ್ಕೆ ತಳ್ಳಿಬಿಟ್ಟಿದೆ ಅಂದ್ರೆ ಯಾರಿಗೆ ಯಾರೂ ಇಲ್ಲ ಎಂಬಂತಾಗಿದೆ? ಮನುಷ್ಯತ್ವ ಅನ್ನೋದೆಲ್ಲ ಪ್ರಪಾತಕ್ಕೆ ದೂಡಲ್ಪಟ್ಟಿದೆ. ಆದರೂ ಸಾಮಾಜಿಕ, ಸಾಮೂಹಿಕ ಜವಾಬ್ದಾರಿ ಹೊತ್ತವರು ಕೊರೊನಾ ವಾರಿಯರ್ಸ್ ಹಣೆಪಟ್ಟಿ ಧರಿಸಿ, ಸ್ವಾರ್ಥ ಪಕ್ಕಕ್ಕಿಟ್ಟು ಉದಾತ್ತ ಕೆಲಸದಲ್ಲಿ ತೊಡಗಿದ್ದಾರೆ. ಅವರಿಗೆಲ್ಲ ಒಂದು ಜೈ! ಸ್ಟೋರಿಯಲ್ಲಿ ಪಾಸಿಟೀವ್ ಅಂಶ ಇದೆ.. ಕೊನೆಯವರೆಗೂ ಓದಿ! ಚಿತ್ರಗಳೂ ಇವೆ ನೋಡಿ.. ಮೇಲಿನ ಷರಾಗೆ ಒಂದು ತಾಜಾ ಉದಾಹರಣೆ ನೀಡುವುದಾದರೆ.. ಕಿಡ್ನಿ ವೈಫಲ್ಯದಿಂದ ಬಳಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬನ ಶವಸಂಸ್ಕಾರ ಮಾಡಲು ಮೃತನ […]
ಹಾವೇರಿ: ಕೊರೊನಾ ಮನುಷ್ಯನನ್ನು ಯಾವ ಮಟ್ಟಕ್ಕೆ ತಳ್ಳಿಬಿಟ್ಟಿದೆ ಅಂದ್ರೆ ಯಾರಿಗೆ ಯಾರೂ ಇಲ್ಲ ಎಂಬಂತಾಗಿದೆ? ಮನುಷ್ಯತ್ವ ಅನ್ನೋದೆಲ್ಲ ಪ್ರಪಾತಕ್ಕೆ ದೂಡಲ್ಪಟ್ಟಿದೆ. ಆದರೂ ಸಾಮಾಜಿಕ, ಸಾಮೂಹಿಕ ಜವಾಬ್ದಾರಿ ಹೊತ್ತವರು ಕೊರೊನಾ ವಾರಿಯರ್ಸ್ ಹಣೆಪಟ್ಟಿ ಧರಿಸಿ, ಸ್ವಾರ್ಥ ಪಕ್ಕಕ್ಕಿಟ್ಟು ಉದಾತ್ತ ಕೆಲಸದಲ್ಲಿ ತೊಡಗಿದ್ದಾರೆ. ಅವರಿಗೆಲ್ಲ ಒಂದು ಜೈ!
ಸ್ಟೋರಿಯಲ್ಲಿ ಪಾಸಿಟೀವ್ ಅಂಶ ಇದೆ.. ಕೊನೆಯವರೆಗೂ ಓದಿ! ಚಿತ್ರಗಳೂ ಇವೆ ನೋಡಿ.. ಮೇಲಿನ ಷರಾಗೆ ಒಂದು ತಾಜಾ ಉದಾಹರಣೆ ನೀಡುವುದಾದರೆ.. ಕಿಡ್ನಿ ವೈಫಲ್ಯದಿಂದ ಬಳಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬನ ಶವಸಂಸ್ಕಾರ ಮಾಡಲು ಮೃತನ ಮನೆಯವರು ಹಾಗೂ ಗ್ರಾಮಸ್ಥರು ಹಿಂದೇಟು ಹಾಕಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹುಚ್ಚಪ್ಪ ಗೋಣಿ (40) ಎಂಬಾತ ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ. ಆತನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಎರಡು ದಿನಗಳ ಹಿಂದೆ ಹುಚ್ಚಪ್ಪ ಮೃತಪಟ್ಟಿದ್ದ. ಮೃತ ಹುಚ್ಚಪ್ಪ, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಆತನಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಕೊರೊನಾ ಶಂಕೆ ವ್ಯಕ್ತಪಡಿಸಿದ್ದ ಆರೋಗ್ಯ ಇಲಾಖೆ ಹುಚ್ಚಪ್ಪನ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಲ್ಯಾಬ್ ಗೆ ಕಳಿಸಿತ್ತು.
ಆದರೆ ವರದಿ ಬರುವ ಮುನ್ನವೆ ಹುಚ್ಚಪ್ಪ ಮೃತಪಟ್ಟಿದ್ದ. ನಂತರ ಮೃತದೇಹವನ್ನು ಊರಿಗೆ ತಂದು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಲಾಯಿತು. ಆದರೆ ಮೃತನ ಮನೆಯವರು ಹಾಗೂ ಗ್ರಾಮಸ್ಥರು ಕೊರೊನಾ ಭೀತಿಯಿಂದ ಮೃತನ ಶವಸಂಸ್ಕಾರ ನೆರವೇರಿಸಲು ಹಿಂದೇಟು ಹಾಕಿದರು!
ಶವಸಂಸ್ಕಾರ ಮಾಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವಾಗ ಮೃತನ ಶವಸಂಸ್ಕಾರ ನೆರವೇರಿಸಲು ಮೃತನ ಮನೆಯವರು ಮತ್ತು ಗ್ರಾಮಸ್ಥರು ಹಿಂದೇಟು ಹಾಕಿದರೋ ಆಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಹದೇವಪ್ಪ ಮತ್ತು ಗ್ರಾಮ ಪಂಚಾಯಿತಿ ಪಿಡಿಓ ರಮೇಶ ಹುಲಸೋಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆ ಸೇರಿಕೊಂಡು ಪಿಪಿಇ ಕಿಟ್, ಮಾಸ್ಕ್ ಧರಿಸಿಕೊಂಡು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಅಗ್ನಿ ಸ್ಪರ್ಶ ಮಾಡುವ ಮೂಲಕ ಮೃತನ ಶವಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದರು!
ಸಂಬಂಧಿಕರೂ.. ಅಸಹಾಕರಾಗಿ ಕಣ್ಣೀರು ಹಾಕತೊಡಗಿದರು! ಮೃತ ವ್ಯಕ್ತಿ ಹುಚ್ಚಪ್ಪನ ಮೃತದೇಹ ಸ್ಮಶಾನಕ್ಕೆ ಬರುತ್ತಿದ್ದಂತೆ ಸ್ಮಶಾನಕ್ಕೆ ಬಂದ ಮೃತನ ಸಂಬಂಧಿಕರು ಹಾಗೂ ಕೆಲವು ಗ್ರಾಮಸ್ಥರು ಮೃತದೇಹದ ಬಳಿ ಬರಲಿಲ್ಲ. ಶವಸಂಸ್ಕಾರದ ಯಾವುದೇ ವಿಧಿವಿಧಾನ ನೆರವೇರಿಸಲು ಹತ್ತಿರ ಸುಳಿಯಲಿಲ್ಲ. ಎಲ್ಲವನ್ನೂ ದೂರದಲ್ಲಿ ನಿಂತುಕೊಂಡು ಕಣ್ಣೀರು ಹಾಕುತ್ತಲೆ ನೋಡುತ್ತಾ ನಿಂತಿದ್ದರು.
ಅದನ್ನು ಕರ್ತವ್ಯವೆಂಬಂತೆ ನೆರವೇರಿಸಿದರು, ಆದ್ರೆ ಅಲ್ಲಿ ಮಾನವೀಯತೆ ಕೆಲಸ ಮಾಡಿತ್ತು! ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಅದು ತಮ್ಮ ಕರ್ತವ್ಯ ಎಂಬಂತೆ ಭಾವಿಸಿ ಶವಸಂಸ್ಕಾರ ನೆರವೇರಿಸಿದರು. ಶವಸಂಸ್ಕಾರ ಮಾಡಿ ಬೆಳಗಾಗುತ್ತಲೆ ಮೃತನ ಗಂಟಲು ದ್ರವದ ವರದಿ ನೆಗಟಿವ್ ಎಂದು ಲ್ಯಾಬ್ ವರದಿ ಬಂದಿತ್ತು! ಇದರಿಂದ ಮೃತನ ಮನೆಯವರು, ಗ್ರಾಮಸ್ಥರು ಸೇರಿದಂತೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ -ಪ್ರಭುಗೌಡ ಎನ್. ಪಾಟೀಲ
Published On - 11:19 am, Sat, 13 June 20