ಬೆಂಗಳೂರು ಗ್ರಾಮಾಂತರ: ಕ್ಷೇತ್ರದ ಅಭಿವೃದ್ಧಿಗಾಗಿ ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿದ್ದಾರೆ. ಯಾರು ಏನೇ ಟೀಕೆ ಟಿಪ್ಪಣಿ ಮಾಡಿದ್ರು ತಲೆಕೆಡಿಸಿಕೊಳ್ಳದೆ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದವರು. ಅವರ ಹತ್ತಿರ ಎಲ್ಲಾ ಇದ್ದರು ಸರಳ ಸಜ್ಜನಿಕೆಯ ವ್ಯಕ್ತಿ. ಎಂಟಿಬಿ ನಾಗರಾಜ್ ಹೇಳಿದ ಯಾವುದೇ ಕೆಲಸ ಇದ್ದರು ಫೈಲ್ ತೆಗೆದುಕೊಂಡು ಬನ್ನಿ. ನಾನು ಅದನ್ನ ಕೂಡಲೇ ಮಂಜೂರು ಮಾಡಿಕೊಡುತ್ತೇನೆ ಎಂದು ಹೊಸಕೋಟೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಹೊಸಕೋಟೆವರೆಗೆ ನಮ್ಮ ಮೆಟ್ರೋ:
ಹೊಸಕೋಟೆ ಪಟ್ಟಣಕ್ಕೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆಗೆ ಕೇಂದ್ರದಿಂದ ಅನುಮತಿ ಕೊಡಿಸುತ್ತೇನೆ. ಪುನಃ ಹೊಸಕೋಟೆಗೆ ಬಂದ್ರೆ ನಾನೇ ಅದರ ಶಂಕುಸ್ಥಾಪನೆ ಮಾಡುತ್ತೇನೆ. ಎಂಟಿಬಿ ನಾಗರಾಜ್ ಏನೇ ಕೇಳಿದರೂ ಮಾಡಿಕೊಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಎಂಟಿಬಿ ಮತ್ತೆ ಎಂಎಲ್ಎ ಆಗಬೇಕು:
ಎಂಟಿಬಿ ನಾಗರಾಜ್ ಯಾವ ಪಕ್ಷದಿಂದ ಬೇಕಿದ್ರೂ ಸ್ಪರ್ಧಿಸಲಿ. ಇಂತಹ ಪ್ರಾಮಾಣಿಕ ವ್ಯಕ್ತಿ ಶಾಸಕನಾಗಬೇಕು ಎಂದು ಬಿಎಸ್ವೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿಕಾರಿಪುರದಂತೆ ಹೊಸಕೋಟೆ ಕ್ಷೇತ್ರ ಮಾದರಿಯಾಗಬೇಕು. ಇದಕ್ಕೆ ನಾನು ಯಾವುದೇ ಕೆಲಸ ಮಾಡಿಕೊಡಲು ಸಿದ್ಧ. ಯಡಿಯೂರಪ್ಪ ಮಾತ್ನಾಡಿದ್ರೆ ಹಿಂದೆ ಸರಿಯುವ ವ್ಯಕ್ತಿ ಅಲ್ಲ ಎಂದರು.
ಎಲ್ಲಾ ಕ್ಷೇತ್ರಗಳಿಗೂ ಹಣ ನೀಡ್ತೇನೆ:
ಪ್ರವಾಹದಿಂದ 30ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಬೇಕಿದ್ರು ಸಹ ನಾನು ರಾಜ್ಯದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಹಣವನ್ನ ನೀಡುತ್ತೇನೆ. ಎಂಟಿಬಿ ನಾಗರಾಜ್ ಹಿಂದೆ ಒಳ್ಳೆಯ ಸಚಿವರಾಗಿದ್ರು, ಆದ್ರೆ ಹಿಂದಿನ ಸರ್ಕಾರ ಅವರಿಗೆ ಕೆರೆ ತುಂಬಿಸಲು ಹಣ ನೀಡಲಿಲ್ಲ. ಅಂದು ಹಣ ನೀಡಿದ್ರೆ, ಎಂಟಿಬಿ ರಾಜೀನಾಮೆ ನೀಡುವ ಪ್ರಸಂಗವೇ ಬರ್ತಿರಲಿಲ್ಲ ಎಂದು ಹಿಂದಿನ ಸರ್ಕಾರದ ವಿರುದ್ಧ ಬಿಎಸ್ವೈ ಅಸಮಾಧಾನ ವ್ಯಕ್ತಪಡಿಸಿದರು.
ಹೊಸಕೋಟೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾತಿಗೆ ಅಧಿಕಾರಿಗಳ ಜೊತೆ ಮಾತ್ನಾಡಿ ಕ್ರಮ ಕೈಗೊಳ್ತೇವೆ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಏನಿಲ್ಲ, ಕೇವಲ ಎಂಟಿಬಿ ಕ್ಷೇತ್ರ ಮಾತ್ರವಲ್ಲ, ಆದ್ಯತೆ ಮೇರೆಗೆ ಎಲ್ಲ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡುತ್ತೇವೆ ಎಂದರು.
Published On - 4:03 pm, Mon, 4 November 19