UPSC Calendar: ಐಎಎಸ್, ಐಎಫ್ಎಸ್ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನ
UPSC: ಈ ವರ್ಷ ಮತ್ತೆ ಐಎಎಸ್ ಪರ್ವ ಆರಂಭವಾಗಿದೆ. ಐಎಎಸ್ ಮತ್ತು ಐಎಫ್ಎಸ್ ಪರೀಕ್ಷೆಗಳಿಗೆ ಯುಪಿಎಸ್ಸಿ ಮಾರ್ಚ್ 4ರಂದೇ ಅಧಿಸೂಚನೆ ಹೊರಡಿಸಿದೆ. ಈ ವರ್ಷದ ಐಎಎಸ್ / ಐಎಫ್ಎಸ್ ಪರೀಕ್ಷೆಗಳ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ..
ಕಳೆದ ವರ್ಷ ಕೊರೊನಾ ಸೋಂಕು ಹರಡುವುದಕ್ಕೆ ತಡೆಯೊಡ್ಡಲೆಂದು ಜಾರಿ ಮಾಡಿದ ಲಾಕ್ಡೌನ್ ಕಾರಣದಿಂದಾಗಿ ಐಎಎಸ್ ಕನಸು ಹೊತ್ತಿದ್ದ ಆಕಾಂಕ್ಷಿಗಳು ತುಸು ಹಿನ್ನಡೆ ಅನುಭವಿಸುವಂತಾಯಿತು. ಈ ವರ್ಷ ಮತ್ತೆ ಐಎಎಸ್ ಪರ್ವ ಆರಂಭವಾಗಿದೆ. ಭಾರತೀಯ ಆಡಳಿತ ಸೇವೆ (Indian Administration Service – IAS) ಮತ್ತು ಭಾರತೀಯ ಅರಣ್ಯ ಸೇವೆ (Indian Forest Service – IFS) ಪರೀಕ್ಷೆಗಳಿಗೆ ಯುಪಿಎಸ್ಸಿ ಮಾರ್ಚ್ 4ರಂದೇ ಅಧಿಸೂಚನೆ ಹೊರಡಿಸಿದೆ. ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನ. ಈ ವರ್ಷದ ಐಎಎಸ್ / ಐಎಫ್ಎಸ್ ಪರೀಕ್ಷೆಗಳ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ..
1) ಆಕಾಂಕ್ಷಿಗಳು ಅರ್ಜಿಯನ್ನು ಯುಪಿಎಸ್ಸಿ ವೆಬ್ಸೈಟ್ https://upsconline.nic.in ಮೂಲಕವೇ ಸಲ್ಲಿಸಬೇಕು. ಐಎಎಸ್ಗೆ ಅರ್ಜಿ ಸಲ್ಲಿಸುವವರು ಯಾವುದೇ ವಿಶ್ವವಿದ್ಯಾಲಯದ ಪದವಿ (ಡಿಗ್ರಿ) ಪಡೆದಿರಬೇಕು. ಐಎಫ್ಎಸ್ಗೆ ಅರ್ಜಿ ಸಲ್ಲಿಸುವವರು ಪಶುಸಂಗೋಪನೆ, ಜೀವಶಾಸ್ತ್ರ, ರಸಾಯನಶಾಸ್ತ್ರ, ಭೂಗರ್ಭಶಾಸ್ತ್ರ, ಗಣಿತ, ಭೌತಶಾಸ್ತ್ರ, ಸಂಖ್ಯಾಶಾಸ್ತ್ರ ಅಥವಾ ಪ್ರಾಣಿಶಾಸ್ತ್ರಗಳ ಪೈಪಿ ಯಾವುದಾದರೂ ಒಂದು ವಿಷಯವನ್ನಾದರೂ ಪದವಿ ಹಂತದಲ್ಲಿ ಓದಿರಬೇಕು.
2) ಅರ್ಜಿ ಸಲ್ಲಿಕೆಯ ವೇಳೆ ಫೋಟೊ ಗುರುತಿನ ಚೀಟಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಂಡಿರಬೇಕು. ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಪ್ಯಾನ್ಕಾರ್ಡ್, ಪಾಸ್ಪೋರ್ಟ್ ಸೇರಿದಂತೆ ಹಲವು ಫೋಟೊ ಗುರುತಿನ ಚೀಟಿಗಳನ್ನು ಈ ಉದ್ದೇಶಕ್ಕೆ ಬಳಸಬಹುದು.
3) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಂತರದ ದಿನಗಳಲ್ಲಿ ಅರ್ಜಿ ಹಿಂಪಡೆಯಬೇಕು ಎಂದು ನಿರ್ಧರಿಸಿದರೆ ಅದಕ್ಕೂ ಅವಕಾಶ ನೀಡಲಾಗುವುದು. ಅರ್ಜಿ ಸಲ್ಲಿಸಲು ಮಾರ್ಚ್ 24, 2021ರ ಸಂಜೆ 6 ಗಂಟೆ ಕೊನೆಯ ದಿನ.
4) ಪರೀಕ್ಷೆಗೆ ಮೂರು ವಾರದ ಮೊದಲು ಇ-ಅಡ್ಮಿಟ್ ಕಾರ್ಡ್ಗಳನ್ನು ಯುಪಿಎಸ್ಸಿ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಯಾವುದೇ ಅಭ್ಯರ್ಥಿಗೆ ಅಂಚೆ ಮೂಲಕ ಪ್ರವೇಶ ಪತ್ರವನ್ನು ಕಳಿಸುವುದಿಲ್ಲ.
5) ಈ ವರ್ಷ ಪರೀಕ್ಷೆಯ ಮೂಲಕ ಸುಮಾರು 712 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅಂಗವಿಕಲರಿಗೆ ಮೀಸಲಿರುವ 22 ಹುದ್ದೆಗಳೂ ಇದರಲ್ಲಿ ಸೇರಿದೆ.
6) ಎರಡು ಹಂತಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ಬಹುಆಯ್ಕೆ ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿದರೆ ನೆಗೆಟಿವ್ ಮಾರ್ಕಿಂಗ್ ಇರುತ್ತದೆ.
7) ಮುಖ್ಯಪರೀಕ್ಷೆಯಲ್ಲಿ ಬರವಣಿಗೆ ಮತ್ತು ಸಂದರ್ಶನದ ಹಂತಗಳು ಇರುತ್ತವೆ. ಇವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರು ಅಧಿಕಾರಿಗಳ ತರಬೇತಿಗೆ ಆಯ್ಕೆಯಾಗುತ್ತಾರೆ.
8) ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಯು 1ನೇ ಆಗಸ್ಟ್ 2021ಕ್ಕೆ ಕನಿಷ್ಠ 21 ವರ್ಷ, ಗರಿಷ್ಠ 32 ವಯೋಮಿತಿಯಲ್ಲಿರಬೇಕು. ವಯೋಮಿತಿ ವಿನಾಯ್ತಿಯ ವಿವರಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
9) ಸಾಮಾನ್ಯ ಅಭ್ಯರ್ಥಿಗಳಿಗೆ 6 ಬಾರಿ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆ. ಒಬಿಸಿ ವರ್ಗಕ್ಕೆ 9 ಬಾರಿ ಮತ್ತು ಎಸ್ಸಿ/ಎಸ್ಟಿಗೆ ಸೇರಿದವರು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು.
10) ಜೂನ್ 6, 2021ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 17, 2021ರಿಂದ ಐಎಎಸ್ ಮತ್ತು ನವೆಂಬರ್ 21ರಿಂದ ಐಎಫ್ಎಸ್ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ದಿನಾಂಕಗಳಲ್ಲಿ ಬದಲಾವಣೆಗಳಿದ್ದರೆ ಯುಪಿಎಸ್ಸಿ ಅಧಿಸೂಚನೆ ಹೊರಡಿಸಿ ಮಾಹಿತಿ ನೀಡುತ್ತದೆ.
ಯುಪಿಎಸ್ಸಿ ವೇಳಾಪಟ್ಟಿ
ಇದನ್ನೂ ಓದಿ: GetCETgo: ಸಿಇಟಿ, ನೀಟ್ ಮತ್ತು ಜೆಇಇ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋಚಿಂಗ್- ʼಗೆಟ್-ಸೆಟ್ ಗೋʼ
Published On - 4:41 pm, Mon, 22 March 21