Sign In

By signing in or creating an account, you agree with Associated Broadcasting Company's Terms & Conditions and Privacy Policy.

GetCETgo: ಸಿಇಟಿ, ನೀಟ್‌ ಮತ್ತು ಜೆಇಇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕೋಚಿಂಗ್- ʼಗೆಟ್‌-ಸೆಟ್‌ ಗೋʼ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಬರುವ ಶೈಕ್ಷಣಿಕ ವರ್ಷದಿಂದ ಇಡೀ ವರ್ಷಪೂರ್ತಿ ಗೆಟ್‌ ಸೆಟ್‌ ಗೋ (GetCETgo) ಮೂಲಕ ಕೋಚಿಂಗ್‌ ವ್ಯವಸ್ಥೆ ಇರುತ್ತದೆ ಎಂಬ ಪ್ರಮುಖ ಅಂಶವನ್ನು ಮಕ್ಕಳು ಮತ್ತು ಪೋಷಕರು ಗಮನಿಸಬೇಕಾಗಿದೆ.

GetCETgo: ಸಿಇಟಿ, ನೀಟ್‌ ಮತ್ತು ಜೆಇಇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕೋಚಿಂಗ್- ʼಗೆಟ್‌-ಸೆಟ್‌ ಗೋʼ
GetCETgo: ಸಿಇಟಿ, ನೀಟ್‌ ಮತ್ತು ಜೆಇಇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕೋಚಿಂಗ್-ʼಗೆಟ್‌-ಸೆಟ್‌ ಗೋʼ
Follow us
ಡಾ. ಭಾಸ್ಕರ ಹೆಗಡೆ
| Updated By: ಸಾಧು ಶ್ರೀನಾಥ್​

Updated on: Mar 22, 2021 | 3:58 PM

ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್‌ ನೀಡಲಾಗುವ ಗೆಟ್‌-ಸೆಟ್‌ ಗೋ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಚಾಲನೆ ನೀಡಿದರು. ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗೆಟ್‌-ಸೆಟ್‌ ಗೋ (GetCETgo) ವ್ಯವಸ್ಥೆಗೆ ಚಾಲನೆ ಕೊಟ್ಟರಲ್ಲದೆ, “ಈವರೆಗೆ ಸಿಇಟಿ ಮತ್ತು ನೀಟ್‌ಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಹೆಚ್ಚುವರಿಯಾಗಿ ಜೆಇಇ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ತರಬೇತಿ ಕೊಡಲಾಗುವುದು. ಈ ಸೌಲಭ್ಯವನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು” ಎಂದರು.

ಉನ್ನತ ಶಿಕ್ಷಣ ಇಲಾಖೆ ಕೈಗೊಂಡಿರುವ ಈ ಉಪಕ್ರಮದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜತೆಗೆ ಸಮಗ್ರ ಕಲಿಕಾ ವ್ಯವಸ್ಥೆ‌ (ಎಲ್‌ಎಂಎಸ್) ಕೂಡ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ, ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಕೈಗೊಂಡ ಕ್ರಮಗಳು ಮೆಚ್ವುವಂತಹದ್ದು ಎಂದು ಮುಖ್ಯಮಂತ್ರಿಗಳು ಹೇಳಿದರು.

ವರ್ಷಪೂರ್ತಿ ಗೆಟ್‌ ಸೆಟ್‌ ಗೋ

ಈ ಸಂದರ್ಭದಲ್ಲಿ ಗೆಟ್‌ ಸೆಟ್‌ ಗೋ ಬಗ್ಗೆ ಸಮಗ್ರ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ ಅಶ್ವತ್ಥನಾರಾಯಣ ಅವರು “ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಬರುವ ಶೈಕ್ಷಣಿಕ ವರ್ಷದಿಂದ ಇಡೀ ವರ್ಷಪೂರ್ತಿ ಗೆಟ್‌ ಸೆಟ್‌ ಗೋ ಮೂಲಕ ಕೋಚಿಂಗ್‌ ವ್ಯವಸ್ಥೆ ಇರುತ್ತದೆ” ಎಂದರು.

ಐಐಟಿಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪ್ರಮಾಣವನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಹೆಜ್ಜೆ ಇಡಲಾಗುತ್ತಿದೆ. ಜೆಇಇ, ನೀಟ್‌ ಪರೀಕ್ಷೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಹೆಚ್ಚು ರಾಂಕ್‌ಗಳನ್ನು ಪಡೆಯುವ ನಿಟ್ಟಿನಲ್ಲಿ ಇದು ಸಹಕಾರಿ ಆಗಲಿದೆ. ಜತೆಗೆ ಯಾವ ವಿದ್ಯಾರ್ಥಿಯೂ ಆರ್ಥಿಕ ಮುಗ್ಗಟ್ಟಿಗೆ ಸಿಲುಕದಂತೆ ವರ್ಷವಿಡೀ ಗೆಟ್‌ ಸೆಟ್‌ ಗೋ ಮೂಲಕ ಅಧ್ಯಯನ ಮಾಡಬಹುದು ಎಂದು ಡಿಸಿಎಂ ಹೇಳಿದರು.

ಕಲಿಕೆ ಸುಲಭ ಮತ್ತು ಸರಳ:

ಕಲಿಕೆ, ಪರಿಷ್ಕರಣೆ ಹಾಗೂ ಪರೀಕ್ಷೆ ಪರಿಕಲ್ಪನೆಯಲ್ಲಿ ಗೆಟ್‌ ಸೆಟ್‌ ಗೋ ಕೋಚಿಂಗ್‌ ವ್ಯವಸ್ಥೆ ರೂಪಿಸಲಾಗಿದ್ದು, ಇದರಲ್ಲಿ ನೀಟ್‌, ಜೆಇಇ, ಸಿಇಟಿ ಪರೀಕ್ಷಾರ್ಥಿಗಳಿಗೆ ಅತ್ಯಗತ್ಯವಾದ ಅಧ್ಯಯನ ಸಾಮಗ್ರಿಯ ಜತೆಗೆ ವಿಡಿಯೋಗಳು, ಪಠ್ಯ ಸಾರಾಂಶ, ಸಂವಾದಾತ್ಮಕ ಪರೀಕ್ಷೆಗಳು ಇರುತ್ತವೆ. ಇಡೀ ದೇಶದಲ್ಲಿಯೇ ವಿದ್ಯಾರ್ಥಿಗಳಿಗಾಗಿ ಇಂಥ ಉಪಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕ ಆಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಆಕ್ಸೆಸ್‌ ಹೇಗೆ?

ಗೆಟ್‌ ಸೆಟ್‌ ಗೋ ಆನ್‌ಲೈನ್‌ ಫ್ಲಾಟ್‌ಫಾರಂಗೆ ಸುಲಭವಾಗಿ ಪ್ರವೇಶ ಪಡೆಯಬಹುದು. ಕರ್ನಾಟಕವೂ ಸೇರಿದಂತೆ ಸಿಇಟಿ ಬರೆಯಲಿಚ್ಚಿಸುವ ದೇಶದ ಯಾವ ವಿದ್ಯಾರ್ಥಿ ಬೇಕಾದರೂ ತನ್ನ ವಿವರಗಳನ್ನು ನಮೂದಿಸಿ ಆಕ್ಸಿಸ್‌ ಮಾಡಬಹುದು. ವೆಬ್‌ಸೈಟ್‌, ಯುಟ್ಯೂಬ್‌ ಅಥವಾ ಗೆಟ್‌ ಸೆಟ್‌ ಗೋ ಆಪ್‌ ಮೂಲಕ ಕೋಚಿಂಗ್‌ ಪಡೆಯಬಹುದು. ಈ ಆಪ್‌ ಅಂಡ್ರಾಯಿಡ್‌, ಐಓಎಸ್‌ನಲ್ಲೂ ಲಭ್ಯ. ಇದಕ್ಕೆ ಗೂಗಲ್‌ ಆಪ್ ಸ್ಟೋರ್‌ನಲ್ಲಿ 4.3 ರೇಟಿಂಗ್‌ ಇದೆ‌. ವಿದ್ಯಾರ್ಥಿಗಳು getcetgo.in ವೆಬ್ ಪೋರ್ಟ್, ಗೂಗಲ್ ಪ್ಲೇಸ್ಟೋರ್ ಆಯಂಡ್ರಾಯ್ಡ್ ಆಪ್ GetCETGO ಮೂಲಕ ಮಾಹಿತಿ ಪಡೆಯಬಹುದು ಹಾಗೂ ತಮ್ಮ ವಿವರಗಳನ್ನು ದಾಖಲಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಡಿಸಿಎಂ ತಿಳಿಸಿದರು.

ಕಳೆದ ವರ್ಷ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದ ದೀಕ್ಷಾ ಸಂಸ್ಥೆಯವರೇ ಈ ವರ್ಷವೂ ತರಬೇತಿ ನೀಡುತ್ತಿದ್ದು, ವಿದ್ಯಾರ್ಥಿ ಮತ್ತು ಪೋಷಕರು ಇನ್ನೂ ಕೋವಿಡ್‌ ಸಂಕಷ್ದದಿಂದ ಹೊರಬಾರದ ಹಿನ್ನೆಲೆಯಲ್ಲಿ ಸರಕಾರ ಗೆಟ್‌-ಸೆಟ್‌ ಗೋ ಕಾರ್ಯಕ್ರಮವನ್ನು ಮುಂದುವರಿಸಲು ನಿರ್ಧರಿಸಿದೆ. ಸಿಇಟಿ, ನೀಟ್‌ ಜತೆಗೆ ಜೆಇಇ ಪರೀಕ್ಷೆಗೂ ತಯಾರಿ ನಡೆಸುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ಅತ್ಯುತ್ತಮ ಕೋಚಿಂಗ್‌ ನೀಡಲಾಗುವುದು ಎಂದು ಅವರು ತಿಳಿಸಿದರು.

ಕಾಲೇಜುಗಳು ಸ್ಥಗಿತ ಇಲ್ಲ ಯಾವುದೇ ಕಾರಣಕ್ಕೂ ಆರಂಭವಾಗಿರುವ ಕಾಲೇಜುಗಳನ್ನು ಸ್ಥಗಿತ ಮಾಡುವುದಿಲ್ಲ. ಈಗಾಗಲೇ ಒಂದು ವರ್ಷ ವ್ಯರ್ಥವಾಗಿರುವುದು ಸಾಕು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. ಬಿಎಂಎಸ್‌ ಕಾಲೇಜ್‌ ಸೇರಿ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟೀವ್‌ ಬಂದಿದೆ ಎಂದು ಸುದ್ದಿಗಾರರು ಕೇಳಿದೆ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ: “ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಕ್ಲಾಸ್‌ ಕಡ್ಡಾಯವಲ್ಲ, ಆಫ್‌ಲೈನ್‌ ಅಥವಾ ಆನ್‌ಲೈನ್‌ನಲ್ಲೂ ಹಾಜರಾಗಬಹುದು. ಆದರೆ, ಹಾಜರಾತಿ ಕಡ್ಡಾಯ. ಆಯಾ ಶಿಕ್ಷಣ ಸಂಸ್ಥೆಗಳು ಇನ್ನೂ ಉತ್ತಮವಾಗಿ ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸಬೇಕು. ಪರಿಣಾಮಕಾರಿಯಾಗಿ ಪರೀಕ್ಷೆ ಮಾಡಬೇಕು. ಸ್ಯಾನಿಟೈಸೇಷನ್‌, ಮಾಸ್ಕ್‌, ದೈಹಿಕ ಅಂತರ ಕಾಪಾಡಿಕೊಳ್ಳುವತ್ತ ಹೆಚ್ಚು ನಿಗಾ ಇಡಬೇಕು” ಎಂದು ಸಲಹೆ ಮಾಡಿದರು.

ಯಾವುದೇ ಕಾರಣಕ್ಕೂ ಶೈಕ್ಷಣಿಕ ವರ್ಷ ವ್ಯತ್ಯಯ ಆಗಬಾರದು. ಪರಿಸ್ಥಿತಿಯನ್ನು ಎದುರಿಸಲು ಎಲ್ಲ ತಯಾರಿಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ಮಾಡಿಕೊಳ್ಳಬೇಕು. ಈಗಾಗಲೇ ವ್ಯಾಕ್ಸಿನ್‌ ಬಂದಿದೆ. ಎರಡನೇ ಅಲೆ ಎದ್ದಿದೆ ಎನ್ನುವ ಕಾರಣಕ್ಕೆ ಆಫ್‌ಲೈನ್‌ ತರಗತಿಗಳನ್ನು ಸ್ಥಗಿತ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್‌ ಕುಮಾರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರನಾಯಕ್‌, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖ್ಯಸ್ಥ ವೆಂಕಟರಾಜು ಮುಂತಾದವರು ಉಪಸ್ಥಿತಿರಿದ್ದರು.

ಇದನ್ನೂ ಓದಿ:

ಗೇಟ್ ಪರೀಕ್ಷೆಯ ಫಲಿತಾಂಶ ದಿನಾಂಕ ಪ್ರಕಟ; ಹೆಚ್ಚಿನ ವಿವರಗಳು ಇಲ್ಲಿವೆ

ಪರೀಕ್ಷಾ ದಿನಾಂಕ ಪ್ರಕಟ; ಹೆಚ್ಚಿನ ವಿವರಗಳು ಇಲ್ಲಿದೆ